ಅತ್ಯುತ್ತಮ ಶಿಕ್ಷಕ ರತ್ನ ಪ್ರಶಸ್ತಿ ಪುರಸ್ಕೃತ ಶಿಕ್ಷಕ ನಾರಾಯಣಗೆ ಸನ್ಮಾನ

Tribute to Narayan, who won the Ratna Award for Best Teacher

ಅತ್ಯುತ್ತಮ ಶಿಕ್ಷಕ ರತ್ನ ಪ್ರಶಸ್ತಿ ಪುರಸ್ಕೃತ ಶಿಕ್ಷಕ ನಾರಾಯಣಗೆ ಸನ್ಮಾನ

ಕಂಪ್ಲಿ 17: ಕನ್ನಡ ಸಾಹಿತ್ಯದ ಜ್ಞಾನ ಹಾಗೂ ಅನುಭವದ ಮೂಲಕ ಮಕ್ಕಳಿಗೆ ಗುಣಮಟ್ಟದ ಬೋಧನೆಯಿಂದ ಸ್ಫೂರ್ತಿ ತುಂಬುವ ಕನ್ನಡ ಶಿಕ್ಷಕ ನಾರಾಯಣರವರಿಗೆ ಅತ್ಯುತ್ತಮ ಶಿಕ್ಷಕ ರತ್ನ ಪ್ರಶಸ್ತಿ ಬಂದಿರುವುದು ಶ್ಲಾಘನೀಯ ಎಂದು ಬೃಂದಾ ಸಂಸ್ಥೆಯ ಸಂಸ್ಥಾಪಕಿ ಡಾ.ಭವ್ಯ ಶೇಖರ್ ತಿಳಿಸಿದರು. ಅವರು ಪಟ್ಟಣ ಸಮೀಪದ ದಮ್ಮೂರು ಕ್ರಾಸ್‌ನಲ್ಲಿನ ಬೃಂದಾ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಕಾಲೇಜು ಆಡಳಿತ ವತಿಯಿಂದ ಆಯೋಜಿಸಿದ್ದ ಅಭಿನಂಧನಾ ಸಮಾರಂಭದಲ್ಲಿ ರಾಜ್ಯ ಮಟ್ಟದ ಅತ್ಯುತ್ತಮ ಶಿಕ್ಷಕ ರತ್ನ ಪ್ರಶಸ್ತಿ ಪುರಸ್ಕೃತ ಕನ್ನಡ ಶಿಕ್ಷಕ ನಾರಾಯಣ.ಹೆಚ್ ರವರಿಗೆ ಸನ್ಮಾನಿಸಿ ಮಾತನಾಡಿದರು. 2500 ವರ್ಷಗಳ ಇತಿಹಾಸ ಹೊಂದಿರುವ ನಮ್ಮ ಕನ್ನಡ ಭಾಷೆ, ಸಂಸ್ಕೃತಿ ಹಾಗೂ ಪರಂಪರೆಯ ಉಳಿವಿಗಾಗಿ ಮತ್ತು ಮಕ್ಕಳ ಉಜ್ವಲ ಭವಿಷ್ಯ ರೂಪಿಸುವಲ್ಲಿ ಕನ್ನಡ ಶಿಕ್ಷಕರ ಪಾತ್ರ ಬಹುಮುಖ್ಯವಾಗಿದೆ. ಅದರಲ್ಲೂ ನಮ್ಮ ಕಾಲೇಜಿನಲ್ಲಿ 5 ವರ್ಷದಿಂದ ಕನ್ನಡ ಶಿಕ್ಷಕರಾಗಿ ಕಾರ್ಯನಿರ್ವಹಿಸುವ ನಾರಾಯಣ.ಹೆಚ್ ರವರಿಗೆ ಇಂತಹ ರಾಜ್ಯಮಟ್ಟದ ಪ್ರಶಸ್ತಿ ನೀಡಿರುವುದು ಸಂತಸ ತಂದಿದೆ ಎಂದರು. 

 2025-26ನೇ ಸಾಲಿನ ಬೆಂಗಳೂರಿನ ಕರುನಾಡ ಕನ್ನಡ ಕಲಾ ಸಿರಿ ಬಳಗ ಮತ್ತು ಎ.ಜಿ.ಎಸ್ ಚಾರಿಟೇಬಲ್ ಟ್ರಸ್ಟ್‌ವತಿಯಿಂದ ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ ಸಭಾ ಭವನದಲ್ಲಿ ಕುರುಗೋಡು ತಾಲೂಕಿನ ದಮ್ಮೂರು ಕ್ರಾಸ್‌ನ ಬೃಂದಾ ಕಾಲೇಜಿನ ಕನ್ನಡ ಶಿಕ್ಷಕ ನಾರಾಯಣ.ಹೆಚ್ ರವರ ಉತ್ತಮ ಶಿಕ್ಷಕ ವೃತ್ತಿಯನ್ನು ಗುರುತಿಸಿದ ಕಲಾ ಸಿರಿ ಬಳಗದ ಅಧ್ಯಕ್ಷ ಡಾ.ಅಂಬರೀಶ್ ಸಿಎಂ. ರವರು ನಾರಾಯಣ.ಹೆಚ್ ರವರನ್ನು ರಾಜ್ಯಮಟ್ಟದ ಅತ್ಯುತ್ತಮ ಶಿಕ್ಷಕ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಿದರು.  

ಈ ಸಂದರ್ಭದಲ್ಲಿ ಸಂಸ್ಥೆಯ ನಿರ್ದೇಶಕ ಭವನ್, ಪ್ರಾಂಶುಪಾಲ ತಾಮಾಸ್ ಸಂತೋಷ್, ಡಾ.ಜೈವರ್ಧನ್, ಉಪನ್ಯಾಸಕರು, ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಸಂಸ್ಥೆಯ ಸಿಬ್ಬಂದಿ ವರ್ಗ ಇದ್ದರು.