ಮೆಲ್ಬೊರ್ನ್, ಫೆ.7 ಭರವಸೆಯ ಆಟಗಾರ್ತಿ ಅನ್ಯಾ ಶ್ರಬ್ಸೋಲ್ ಹಾಗೂ ನಟಾಲಿಯಾ ಸೀವರ್ ಅವರ ಭರ್ಜರಿ ಆಟದ ನೆರವಿನಿಂದ ಇಂಗ್ಲೆಂಡ್ ತ್ರಿಕೋನ ಸರಣಿಯಲ್ಲಿ ನಾಲ್ಕು ವಿಕೆಟ್ ,ಗಳಿಂದ ಭಾರತ ಮಹಿಳಾ ತಂಡವನ್ನು ಮಣಿಸಿ, ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೆ ಬಡ್ತಿ ಪಡೆದಿದೆ. ಮೊದಲು ಬ್ಯಾಟ್ ಮಾಡಿದ ಭಾರತ ತಂಡ 20 ಓವರ್‌ಗಳಲ್ಲಿ ಆರು ವಿಕೆಟ್‌ಗಳಿಗೆ 123 ರನ್ ಕಲೆ ಹಾಕಿತು. ಭಾರತ ಪರವಾಗಿ, ಸ್ಮೃತಿ ಮಂಧನಾ 40 ಎಸೆತಗಳಲ್ಲಿ ಏಳು ಬೌಂಡರಿ ಮತ್ತು ಒಂದು ಸಿಕ್ಸರ್ ಸಹಾಯದಿಂದ 45 ರನ್ ಗಳಿಸಿದರೆ, ಜೆಮಿಮಾ ರೊಡ್ರಿಗಸ್ 20 ಎಸೆತಗಳಲ್ಲಿ ಮೂರು ಬೌಂಡರಿಗಳ ಸಹಾಯದಿಂದ 23 ರನ್ ಗಳಿಸಿದರು. ಮತ್ತು ನಾಯಕಿ ಹರ್ಮನ್ ಪ್ರೀತ್ ಕೌರ್ 23 ಎಸೆತಗಳಲ್ಲಿ 14 ರನ್ ಗಳಿಸಿದರು. ಇಂಗ್ಲೆಂಡ್ ಪರ ಅನ್ಯಾ ಶ್ರಬ್ಸೋಲ್ 31 ರನ್ ಗೆ ಮೂರು ವಿಕೆಟ್ ಮತ್ತು ಕ್ಯಾಥರೀನ್ ಬ್ರಂಟ್ 23 ರನ್ ಗೆ ಎರಡು ವಿಕೆಟ್ ಪಡೆದರು.
ಗುರಿಯನ್ನು ಹಿಂಬಾಲಿಸಿದ ಇಂಗ್ಲೆಂಡ್ 18.5 ಓವರ್‌ಗಳಲ್ಲಿ ಆರು ವಿಕೆಟ್‌ಗಳಿಗೆ 124 ರನ್ ಗಳಿಸಿ ಜಯ ಸಾಧಿಸಿತು. ಸೀವರ್ 38 ಎಸೆತಗಳಲ್ಲಿ ಆರು ಬೌಂಡರಿ ಮತ್ತು ಒಂದು ಸಿಕ್ಸರ್ ಸಹಾಯದಿಂದ 50 ರನ್ ಸಿಡಿಸಿದರು. ಭಾರತ ಪರ ರಾಜೇಶ್ವರಿ ಗಾಯಕ್ವಾಡ್ 23 ರನ್ ಗಳಿಸಿ ಮೂರು ವಿಕೆಟ್ ಪಡೆದರು. ಇಂಗ್ಲೆಂಡ್‌ನ ಅನ್ಯಾ ಶ್ರಬ್‌ಸೋಲ್ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿಯನ್ನು ಪಡೆದರು. ಭಾರತ ಮೂರು ಪಂದ್ಯಗಳಲ್ಲಿ ಎರಡನೇ ಸೋಲನ್ನು ಅನುಭವಿಸಿತು ಮತ್ತು ಎರಡು ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ಇಂಗ್ಲೆಂಡ್ ಮೂರು ಪಂದ್ಯಗಳಲ್ಲಿ ಎರಡು ಪಂದ್ಯ ಗೆದ್ದು ಅಗ್ರಸ್ಥಾನದಲ್ಲಿದೆ. ಶನಿವಾರ ಭಾರತ ಮುಂದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡದ ಸವಾಲು ಎದುರಿಸಲಿದೆ.