ಬೆಂಗಳೂರು,ಫೆ.12 : ಹೊರರಾಜ್ಯದ ಮೂರ್ನಾಲ್ಕು ಕಂಪನಿಗಳು ಎಲೆಕ್ಟ್ರಿಕ್ ಬಸ್ ಪೂರೈಸುವ ಸಂಬಂಧ ಕರ್ನಾಟಕದ ಸಾರಿಗೆ ಸಂಸ್ಥೆ ಜತೆ ಮಾತುಕತೆ ನಡೆಸುತ್ತಿದ್ದು, ಅವರೇ ಬಂಡವಾಳ ಮತ್ತು ನಿರ್ವಹಣೆ ಮಾಡುವುದಾಗಿಯೂ ಹಾಗೂ ಲಾಭದ ಶೇ. 40ರಷ್ಟು ಪಾಲನ್ನು ಸಾರಿಗೆ ಸಂಸ್ಥೆಗೆ ನೀಡುವ ಪ್ರಸ್ತಾವನೆಯನ್ನೂ ಸಲ್ಲಿಸಿದ್ದಾರೆ ಎಂದು ಸಾರಿಗೆ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಹೇಳಿದ್ದಾರೆ.ವಿಕಾಸಸೌಧದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲೆಕ್ಟ್ರಿಕ್ ಬಸ್ ಖರೀದಿ ಕುರಿತು ಬೇರೆ ರಾಜ್ಯಗಳಲ್ಲಿನ ಈ ಯೋಜನೆಯ ಪೂರ್ವಾಪರ ಪರಿಶೀಲನೆ ನಡೆಸಿ, ಅಧಿಕಾರಗಳ ಜತೆ ಚರ್ಚೆ ನಡೆಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದರು.
ಮಾರ್ಚ್ ಅಂತ್ಯದೊಳಗೆ 1,200 ನೂತನ ಬಸ್ ಖರೀದಿ ಮಾಡಲಾಗುತ್ತಿದೆ. ಹುಬ್ಬಳ್ಳಿ ಮತ್ತು ಗುಲ್ಬರ್ಗ ಸಾರಿಗೆ ನಿಗಮದಲ್ಲಿ ನೇಮಕ ಪ್ರಕ್ರಿಯೆ ಶುರು ಆಗಿದ್ದು, ಚಾಲಕರು, ನಿರ್ವಾಹಕರು ಮತ್ತು ತಾಂತ್ರಿಕ ವರ್ಗದ 2800, ಹುದ್ದೆಗಳಿಗೆ ನೇಮಕ ನಡೆಯುತ್ತಿದೆ. ಪರೀಕ್ಷೆ ಸಹ ಮುಗಿದಿದೆ. ಆದರೆ, ಕೆಲಸ ಕೊಡಿಸುವ ನೆಪದಲ್ಲಿ ಕೆಲವು ಮಧ್ಯವರ್ತಿಗಳು ಅಭ್ಯರ್ಥಿಗಳಿಗೆ ಹಣದ ಆಮಿಷವೊಡ್ಡುತ್ತಿದ್ದಾರೆ.
ನೇಮಕ ಪ್ರತಿಯೆ ಪಾರದರ್ಶಕ ರೀತಿಯಲ್ಲಿ ನಡೆಯಲಿದೆ. ಹೀಗಾಗಿ ಹಣ ಕೊಟ್ಟು ಯಾರೂ ಮೋಸ ಹೋಗದಂತೆ ಸಾರಿಗೆ ಸಚಿವರು ಸ್ಪಷ್ಟಪಡಿಸಿದರು.
ವಿಧಾನ ಪರಿಷತ್ ಚುನಾವಣೆಯಲ್ಲಿ ತಮ್ಮನ್ನು ಸೋಲಿಸಲು ಬಿಜೆಪಿಯ ಕೆಲವು ಹಿರಿಯ ಮುಖಂಡರೇ ಕಾಂಗ್ರೆಸ್- ಜೆಡಿಎಸ್ ಪಕ್ಷೇತರ ಅಭ್ಯರ್ಥಿಯನ್ನು ಬೆಂಬಲಿಸುತ್ತಿದ್ದಾರೆ ಎಂಬ ಬಗ್ಗೆ ತಮಗೆ ಮಾಹಿತಿ ಇಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಕರ್ನಾಟಕ ಬಂದ್‌ಗೆ ಕೆಲವು ಸಂಘಟನೆಗಳು ಕರೆ ನೀಡಿದ್ದು, ಯಾವುದೇ ಕಾರಣಕ್ಕೂ ನಾಳೆ ಬಸ್ ಗಳ ಓಡಾಟವನ್ನು ನಿಲ್ಲಿಸುವುದಿಲ್ಲ ಎಂದು ಇಲಾಖೆಯ ಕಾರ್ಮಿಕ ಸಂಘಟನೆಗಳೇ ಸ್ಪಷ್ಟನೆ ನೀಡಿವೆ. ಸಾರಿಗೆ ಬಸ್ ಗಳ ಓಡಾಟಕ್ಕೆ ಗುರುವಾರ ಯಾವುದೇ ತೊಂದರೆ ಇರುವುದಿಲ್ಲ. ಒಂದು ವೇಳೆ ಎಲ್ಲಾದರೂ ಪರಿಸ್ಥಿತಿ ಕೈ ಮೀರಿದರೆ ಆಯಾ ಭಾಗದಲ್ಲಿ ಬಸ್ ಸಂಚಾರ ಬೇಕೆ? ಬೇಡವೇ? ಎಂಬುದನ್ನು ಆಯಾ ಭಾಗದ ಮುಖ್ಯಸ್ಥರೇ ತೀರ್ಮಾನ ಮಾಡಲಿದ್ದಾರೆ ಎಂದು ಸವದಿ ಸ್ಪಷ್ಟಪಡಿಸಿದರು.ಕೃಷಿ ಖಾತೆಯನ್ನು ತಮ್ಮಿಂದ ಬಿ.ಸಿ.ಪಾಟೀಲ್ ಅವರಿಗೆ ನೀಡಿದ ಬಗ್ಗೆ ಪ್ರತಿಕ್ರಿಯಿಸಿದ ಸವದಿ, ತಮಗೆ ಮೊದಲು ಸಾರಿಗೆ ಖಾತೆ ಕೊಟ್ಟಿದ್ದರು.
ಬಳಿಕ ಹೆಚ್ಚುವರಿಯಾಗಿ ಇನ್ನೊಂದು ಖಾತೆ ಕೊಟ್ಟಿದ್ದರು. ಈಗ ಒಂದು ಖಾತೆ ವಾಪಸ್ ಪಡೆದಿದ್ದಾರೆ ಅಷ್ಟೆ. ಇಂತಹದ್ದೇ ಖಾತೆ ಬೇಕು ಎಂದು ಯಾರು ಕೇಳಿಲ್ಲ. ಹೊಸದಾಗಿ ಬಂದವರಿಗೆ ಪಕ್ಷದ ಸಿದ್ಧಾಂತ ಅರ್ಥ ಮಾಡಿಕೊಳ್ಳುವುದು ಕಷ್ಟವಾಗಬಹುದಾದರೂ ನಿಧಾನವಾಗಿ ಎಲ್ಲವನ್ನೂ ತಿಳಿದುಕೊಳ್ಳುತ್ತಾರೆ ಎಂದು ಸವದಿ ಹೇಳಿದರು.ಅಕ್ರಮ ಗಣಿಗಾರಿಕೆ ಆರೋಪ ಹೊತ್ತಿರುವ ಆನಂದ್ ಸಿಂಗ್ ಅವರಿಗೆ ಅರಣ್ಯ ಖಾತೆ ನೀಡಿದ ಬಗ್ಗೆ ಎದ್ದಿರುವ ಆರೋಪಗಳಿಗೆ ಪ್ರತಿಕ್ರಿಯಿಸಿದ ಸವದಿ, ಯಾರೋ ಒಬ್ಬರ ಮೇಲೆ ಆರೋಪಗಳು ಬಂದ ಕೂಡಲೇ ಅವರು ತಪ್ಪು ಮಾಡಿದ್ದಾರೆ ಎಂದರ್ಥವಲ್ಲ. ಆನಂದ್ ಸಿಂಗ್ ಅವರ ಮೇಲಿನ ಆರೋಪ ಸಾಬೀತಾಗಿಲ್ಲ. ಆರೋಪ ಸಾಬೀತಾದ ಮೇಲೆ ಮುಂದೆ ನೀಡೋಣ. ಬೇರೆ ಪಕ್ಷದಲ್ಲಿ ಇದ್ದಾಗ ಆರೋಪ ಪ್ರತ್ಯಾರೋಪ ಸಹಜ. ನಾವು ಸಹ ಇಂತಹ ಆರೋಪ ಮಾಡಿರುತ್ತೇವೆ ಎಂದರು.
ರಸ್ತೆ ಸುರಕ್ಷತೆ ವಿಚಾರವಾಗಿ ದಂಡ ಹೆಚ್ಚಳ ಮಾಡುವ ಪ್ರಸ್ತಾವನೆ ಇದೆ. ಕೇಂದ್ರ ಸರ್ಕಾರ ದಂಡ ಹೆಚ್ಚಳಕ್ಕೆ ತಿದ್ದುಪಡಿ ತಂದಿದೆ. ರಾಜ್ಯದಲ್ಲಿಯೂ ಕೂಡಾ ದಂಡ ಹೆಚ್ಚಳ ಮಾಡುವ ಪ್ರಸ್ತಾವನೆ ಇದೆ. ಬಜೆಟ್ ಬಳಿಕ ಇದರತ್ತ ಹೆಜ್ಜೆ ಇಡಲಾಗುವುದು. ಮೊದಲು ಜನರಿಗೆ ಜಾಗೃತಿ ಮೂಡಿಸಲಾಗುವುದು. ಬಳಿಕ ದಂಡ ಹೆಚ್ಚಳ ಮಾಡುವ ಬಗ್ಗೆ ತೀರ್ಮಾನ ಮಾಡಲಾಗುವುದು. ದಂಡದ ಪ್ರಮಾಣ ಹೆಚ್ಚಳ ಆಗಿರುವುದರಿಂದ ಪ್ರಕರಣಗಳ ಸಂಖ್ಯೆ ಕಡಿಮೆ ಆಗಿದೆ ಎಂದರು.
ವೋಲ್ವೋ ಬಸ್ ನಿರ್ವಹಣೆಗೆ ಹೆಚ್ಚು ಹಣ ವ್ಯಯ ಆಗುತ್ತಿದೆ. ಇಂಧನದ ಖರ್ಚು, ನಿರ್ವಹಣೆ ಹೆಚ್ಚಾಗುತ್ತಿವೆ. ಹೀಗಾಗಿ ಹಂತ ಹಂತವಾಗಿ ವೊಲ್ವೋ ಬಸ್ ಕಡಿಮೆ ಮಾಡುವ ಚಿಂತನೆ ಇದೆ ಎಂದು ಪ್ರಶ್ನೆಯೊಂದಕ್ಕೆ ಸಚಿವರು ಪ್ರತಿಕ್ರಿಯಿಸಿದರು.ವಾಹನ ನೋಂದಣಿ ತೆರಿಗೆ ಈ ಬಾರಿ ಸ್ವಲ್ಪ ಕೊರತೆ ಆಗುವ ಸಾಧ್ಯತೆ ಇದೆ. ಈ ಬಾರಿ 7 ಸಾವಿರ ಕೋಟಿ ನಿರೀಕ್ಷೆ ಇತ್ತು. ಇದರಲ್ಲಿ 1200 ಕೋಟಿ ಕೊರತೆ ಆಗುವ ಸಾಧ್ಯತೆ ಇದೆ. ಅಕ್ಟೋಬರ್, ನವೆಂಬರ್, ಡಿಸೆಂಬರ್ ನಲ್ಲಿ ವಾಹನ ನೋಂದಣಿ ಕಡಿಮೆ ಆಗಿದೆ. ಹೊಸ ವರ್ಷದಿಂದ ಮತ್ತೆ ವಾಹನ ನೋಂದಣಿ ಚುರುಕಾಗಿದೆ ಎಂದು ಸವದಿ ಹೇಳಿದರು.