ಮುಂಬೈ, ನ 4: ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ದಿನೇ ದಿನೇ ಕಗ್ಗಂಟಾಗಿ ಪರಿಣಮಿಸಿರುವ ಬೆನ್ನಲ್ಲೇ ರಾಜ್ಯರಾಜಕಾರಣ ಸೋಮವಾರ ದೆಹಲಿಗೆ ವರ್ಗಾವಣೆಯಾಗಿದೆ. ಈ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ನಡೆಯಲಿರುವ ರಾಜಕೀಯ ಬೆಳವಣಿಗೆಗಳು ಕುತೂಹಲಕ್ಕೆ ಕಾರಣವಾಗಿದೆ. ಸೋಮವಾರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ನವದೆಹಲಿಗೆ ತೆರಳಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರೊಂದಿಗೆ ಹೊಸ ಸರ್ಕಾರ ರಚನೆ ಕುರಿತು ಚರ್ಚೆ ನಡೆಸಲಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ. ಮತ್ತೊಂದೆಡೆ ಎನ್ ಸಿ ಪಿ ಅಧ್ಯಕ್ಷ, ಮಾಜಿ ಮುಖ್ಯಮಂತ್ರಿ ಶರದ್ ಪವಾರ್ ಕೂಡ ಸೋಮವಾರವೇ ನವದೆಹಲಿಗೆ ತೆರಳಿದ್ದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರೊಂದಿಗೆ ಮೈತ್ರಿ ಸರ್ಕಾರ ಸ್ಥಾಪನೆ ವಿಚಾರದಲ್ಲಿ ಮಾತುಕತೆ ನಡೆಸಲಿದ್ದಾರೆ ಎಂದು ಎನ್ ಸಿ ಪಿ ಮೂಲಗಳು ಹೇಳಿವೆ. ಹೀಗಾಗಿ ದೆಹಲಿಯಲ್ಲಿ ನಡೆಯಲಿರುವ ರಾಜಕೀಯ ವಿದ್ಯಮಾನಗಳು ಮತ್ತಷ್ಟು ಕುತೂಹಲ ಕೆರಳಿಸಿವೆ. ಹಾಲಿ ವಿಧಾನಸಭೆಯ ಅವಧಿ ಇದೇ 9 ಕ್ಕೆ ಮುಕ್ತಾಯವಾಗಲಿದ್ದು ಅಷ್ಟರೊಳಗೆ ಹೊಸ ಸರ್ಕಾರ ರಚನೆಯಾಗಬೇಕಿದೆ. ಮತ್ತೊಂದೆಡೆ ನಾಳೆ ಅಥವಾ ನಾಡಿದ್ದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಮುಂಬೈ ಗೆ ಬಂದು ಶಿವಸೇನೆ ಅಧ್ಯಕ್ಷ ಉದ್ಧವ ಠಾಕ್ರೆ ಅವರೊಂದಿಗೆ ಮಾತುಕತೆ ನಡೆಸುವ ಮೂಲಕ ಎಲ್ಲ ಗೊಂದಲಗಳನ್ನು ಪರಿಹರಿಸಲಿದ್ದು ಬಿಜೆಪಿ ಸರ್ಕಾರ ಸುಗಮವಾಗಿ ಅಸ್ತಿತ್ವಕ್ಕೆ ಬರಲಿದೆ, ದೇವೇಂದ್ರ ಫಡ್ನವಿಸ್ ಮತ್ತೆ ಮುಖ್ಯಮಂತ್ರಿಯಾಗಲಿದ್ದಾರೆ ಎಂಬ ಆಶಾಭಾವನೆಯನ್ನು ಬಿಜೆಪಿ ನಾಯಕರು ಇಟ್ಟುಕೊಂಡಿದ್ದಾರೆ.