ಬೆಂಗಳೂರು, ಆ 16 ಬೆಂಗಳೂರು ನಗರದ ಆಯುಕ್ತ ಹುದ್ದೆಯಿಂದ ತಮ್ಮನ್ನು ವರ್ಗಾವಣೆ ಮಾಡಿದ ಸರ್ಕಾರದ ಆದೇಶ ಪ್ರಶ್ನಿಸಿ ಕೇಂದ್ರೀಯ ಆಡಳಿತ ನ್ಯಾಯಮಂಡಳಿ (ಸಿಎಟಿ) ಮೊರೆ ಹೋಗಿದ್ದ ಹಿರಿಯ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ಅವರು ಶುಕ್ರವಾರ ತಮ್ಮ ಅರ್ಜಿಯನ್ನು ಹಿಂಪಡೆದಿದ್ದಾರೆ.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ, 47 ದಿನಗಳ ಹಿಂದಷ್ಟೇ ನಗರ ಪೊಲೀಸ್ ಆಯುಕ್ತರಾಗಿ ನೇಮಕಗೊಂಡಿದ್ದ ಅಲೋಕ್ ಕುಮಾರ್ ಅವರನ್ನು ರಾಜ್ಯ ಸಶಸ್ತ್ರ ಪಡೆಯ ಎಡಿಜಿಪಿಯನ್ನಾಗಿ ವರ್ಗಾವಣೆ ಮಾಡಿ ಆದೇಶ ಹೊರಡಿಸಿತ್ತು. ಇವರಿಂದ ತೆರವಾಗಿದ್ದ ಆಯುಕ್ತ ಹುದ್ದೆಗೆ ಹಿರಿಯ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಅವರನ್ನು ನೇಮಿಸಿತ್ತು.
ಇದನ್ನು ಪ್ರಶ್ನಿಸಿ ಅಲೋಕ್ ಕುಮಾರ್ ಸಿಎಟಿ ಮೊರೆ ಹೋಗಿದ್ದರು. ಸರ್ಕಾರದ ಪರವಾಗಿ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವಡಗಿ ಅವರು ವಿಚಾರಣೆಗೆ ಹಾಜರಾಗಿ ವಾದ ಮಂಡಿಸಿದ್ದರು. ಆದರೆ,ಮಹತ್ವದ ಬೆಳವಣಿಗೆಯಲ್ಲಿ ಅಲೋಕ್ ಕುಮಾರ್ ಪರ ವಕೀಲರು ಶುಕ್ರವಾರ ಅರ್ಜಿ ಹಿಂಪಡೆಯುವುದಾಗಿ ತಿಳಿಸಿದರು.