ವರ್ಗಾವಣೆ ವಿವಾದ : ಮದ್ರಾಸ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ರಾಜೀನಾಮೆ

ಚೆನ್ನೈ, ಸೆ 7:  ತಮ್ಮನ್ನು ಮೇಘಾಲಯ ಹೈಕೋರ್ಟ್ಗೆ  ವರ್ಗಾವಣೆಗೊಳಿಸಿದ ಆದೇಶವನ್ನು ಮರುಪರಿಶೀಲಿಸುವ  ಮನವಿಯನ್ನು ಸುಪ್ರೀಂಕೋರ್ಟ್ ಕೊಲಿಜಿಯಂ ತಿರಸ್ಕರಿಸಿದ ಬೆನ್ನಲ್ಲೇ,  ಮದ್ರಾಸ್ ಹೈಕೋರ್ಟ್ಮುಖ್ಯ ನ್ಯಾಯಮೂರ್ತಿ ವಿಜಯ ಕಮಲೇಶ್ ತಹಿಲ್ ರಮಣಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.  

ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿರುವ ಅವರು, ಶುಕ್ರವಾರ ರಾತ್ರಿ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ಅವರಿಗೂ ಅದನ್ನು ರವಾನಿಸಿದ್ದಾರೆ.  

2018ರ ಆಗಸ್ಟ್ 8ರಂದು ಮದ್ರಾಸ್ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿಯಾಗಿ ಬಡ್ತಿ ಪಡೆದಿದ್ದ  ತಹಿಲ್ ರಮಣಿ ಅವರನ್ನು ಮೇಘಾಲಯ ಹೈಕೋರ್ಟ್ ಗೆ ವರ್ಗಾವಣೆಗೊಳಿಸುವ ಕುರಿತು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಗೊಗೊಯಿ ನೇತೃತ್ವದ ಕೊಲಿಜಿಯಂ ಆಗಸ್ಟ್ 28ರಂದು ಶಿಫಾರಸು ಮುಂದಿಟ್ಟಿತ್ತು. ನಂತರ, ರಮಣಿ ಅವರು ಈ ಶಿಫಾರಸನ್ನು  ಮರುಪರಿಶೀಲಿಸುವಂತೆ ಮನವಿ ಸಲ್ಲಿಸಿದ್ದರು.  

ಆದರೆ, ಇದನ್ನು ಕೊಲಿಜಿಯಂ ಪರಿಗಣಿಸಿರಲಿಲ್ಲ. ತಮ್ಮನ್ನು ಸಣ್ಣ ಹೈಕೋರ್ಟ್ ಗೆ ವರ್ಗಾವಣೆ ಮಾಡಿದ್ದರಿಂದ ಬೇಸರಗೊಂಡಿರುವ ರಮಣಿ ಅವರು, ಇತ್ತೀಚೆಗೆ ಕಾಯಂ ನ್ಯಾಯಮೂರ್ತಿಯಾಗಿ  ನೇಮಕಗೊಂಡವರ ಅಭಿನಂದನಾ ಸಮಾರಂಭದಲ್ಲಿ ಈ ವಿಷಯ ಪ್ರಕಟಿಸಿದರು.  

ರಮಣಿ ಅವರು ಹೈಕೋರ್ಟ್ ನ ಅತ್ಯಂತ ಹಿರಿಯ ನ್ಯಾಯಮೂರ್ತಿಗಳಲ್ಲಿ ಒಬ್ಬರಾಗಿದ್ದಾರೆ.