ಕೊರೋನಾ ಭೀತಿ, ಕಾರ್ಮಿಕರು, ನಿರ್ಲಕ್ಷಿತರ ಹಿತ ರಕ್ಷಣೆ ಮಾಡಿ: ಟ್ರೇಡ್ ಯೂನಿಯನ್ ಕಾಂಗ್ರೆಸ್ ಒತ್ತಾಯ

ಬೆಂಗಳೂರು, ಮಾ 24,ಜಾಗತಿಕವಾಗಿ ಭೀತಿ ಮೂಡಿಸಿರುವ ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಕಾರ್ಮಿಕರು ಮತ್ತು ನಿರ್ಲಕ್ಷಿತ ಸಮುದಾಯದ ರಕ್ಷಣೆ ಮಾಡುವಂತೆ ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್ ಒತ್ತಾಯಿಸಿದೆ. ಟ್ರೇಡ್ ಯೂನಿಯನ್ ನ ಪ್ರಧಾನ ಕಾರ್ಯದರ್ಶಿ ವಿಜಯ ಭಾಸ್ಕರ್ ಡಿ.ಎ. ಅವರು ಹೇಳಿಕೆಯೊಂದನ್ನು ಬಿಡಗಡೆ ಮಾಡಿದ್ದು, ಇಂತಹ ಸಂದರ್ಭದಲ್ಲಿ ಕಾರ್ಮಿಕರಿಗೆ ವೇತನ ಪಾವತಿಮಾಡಬೇಕು. ಪಬ್, ಬಾರ್ ಗಳು, ಹೊಟೇಲ್, ಚಿತ್ರಮಂದಿರಗಳು, ಮಾರುಕಟ್ಟೆಗಳು ಬಂದ್ ಆಗಿರುವ ಕಾರಣ ಇಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಮಾಸಿಕ 12 ಸಾವಿರ ರೂ ವೇತನ ಪಾವತಿಸಬೇಕು. ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬಗಳಿಗೆ ಲಾಕ್ ಡೌನ್ ಅವಧಿಯ ಪ್ರತಿ ತಿಂಗಳು 12 ಸಾವಿರ ರೂ ಹಣವನ್ನು ಸರ್ಕಾರವೇ ಪಾವತಿಸಬೇಕು ಎಂದು ಆಗ್ರಹಿಸಿದ್ದಾರೆ. ಕೈಗಾರಿಕೆಗಳಲ್ಲಿ ಕಾರ್ಯನಿರ್ವಹಿಸುವ ಕಾರ್ಮಿಕರಿಗೆ ವೇತನ ಸಹಿತ ರಜೆ ಘೋಷಿಸಬೇಕು. ಗಾರ್ಮೆಂಟ್ಸ್ ಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವವರು ಆತಂಕದಲ್ಲಿದ್ದು, ಇವರಿಗೆ ವೇತನ ಸಹಿತ ರಜೆ ಘೋಷಿಸಬೇಕು. ಪೌರ ಕಾರ್ಮಿಕರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರಿಗೆ  ಪ್ರತಿನಿತ್ಯ ಹೊಸ ಮುಖ, ಕೈಗವಸು, ಸ್ಯಾನಿಟೈಸರ್ಸ್, ಮತ್ತಿತರ ಉಪಕರಣಗಳನ್ನು ಒಗದಿಸಬೇಕು. ಇಂದಿರಾ ಕ್ಯಾಂಟಿನ್ ನಲ್ಲಿ ಎಲ್ಲರಿಗೂ ಉಚಿತವಾಗಿ ಆಹಾರ ಒದಗಿಸಬೇಕು. ವಿದ್ಯುತ್, ನೀರು ಮತ್ತು ಆಸ್ತಿ ತೆರಿಗೆ ಪಾವತಿಯನ್ನು ಕನಿಷ್ಠ ಮೂರು ತಿಂಗಳ ಮಟ್ಟಿಗೆ ಮುಂದೂಡಬೇಕು. ಎಟಿಎಂಗಳಲ್ಲಿ ಸ್ಯಾನಿಟೈಸರ್ಸ್ ವ್ಯವಸ್ಥೆ ಮಾಡಬೇಕು ಎಂದು ವಿಜಯ ಭಾಸ್ಕರ್ ಒತ್ತಾಯಿಸಿದ್ದಾರೆ.