ವಿಜಯವಾಡ, ಸೆ 16 ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ದೇವಿಪಟ್ಟಣಂ ಮಂಡಲದ ಕಚ್ಚುಲೂರು ಗ್ರಾಮದ ಸಮೀಪ ಗೋದಾವರಿ ನದಿಯಲ್ಲಿ ಭಾನುವಾರ ಖಾಸಗಿ ಪ್ರವಾಸಿ ದೋಣಿಯೊಂದು ದುರಂತಕ್ಕೀಡಾದ ಘಟನೆಯಲ್ಲಿ ಇದುವರೆಗೆ 9 ಮೃತದೇಹಗಳನ್ನು ಹೊರತೆಗೆಯಲಾಗಿದ್ದು, ಇನ್ನೂ 24 ಮಂದಿ ನೀರಿನಲ್ಲಿ ಮುಳುಗಿ ಮೃತಪಟ್ಟಿರುವುದಾಗಿ ಶಂಕಿಸಲಾಗಿದೆ.
ಗೋದಾವರಿ ನದಿಯಲ್ಲಿ 60 ಪ್ರಯಾಣಿಕರಿದ್ದ ದೋಣಿ ದುರಂತಕ್ಕೀಡಾದ ನಂತರ 27 ಜನರನ್ನು ರಕ್ಷಿಸಲಾಗಿದೆ ಎಂದು ಆಂಧ್ರ ಪ್ರದೇಶ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎಪಿಎಸ್ಡಿಎಂಎ) ಮತ್ತು ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರ (ಎಸ್ಇಒಸಿ) ಸೋಮವಾರ ವರದಿ ಮಾಡಿದೆ.
ಪೂರ್ವ ಮತ್ತು ಪಶ್ಚಿಮ ಗೋದಾವರಿ ಜಿಲ್ಲೆಗಳ 6 ಅಗ್ನಿಶಾಮಕ ತಂಡಗಳು 8 ದೋಣಿಗಳಲ್ಲಿ ಅಗತ್ಯ ಸಾಧನಗಳೊಂದಿಗೆ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ ಎಂದು ವರದಿ ತಿಳಿಸಿದೆ.
ಸುಮಾರು ಎರಡು ಎನ್ಡಿಆರ್ಎಫ್ ಮತ್ತು ಮೂರು ಎಸ್ಡಿಆರ್ಎಫ್ ತಂಡಗಳನ್ನು ಸ್ಥಳಕ್ಕೆ ನಿಯೋಜಿಸಲಾಗಿದೆ. ಮುಳುಗಿರುವ ಪ್ರಯಾಣಿಕರ ಶೋಧಕ್ಕೆ ಅಗತ್ಯವಿರುವ ಎಲ್ಲಾ ರಕ್ಷಣಾ ಮತ್ತು ಸಂವಹನ ಸಾಧನಗಳೊಂದಿಗೆ ರಕ್ಷಣಾ ಕಾರ್ಯಾಚರಣೆಯಲ್ಲಿ ಈ ತಂಡಗಳು ತೊಡಗಿವೆ.
ಭಾರತೀಯ ನೌಕಾಪಡೆಯ ಒಂದು ಈಜು ತಂಡ ರಕ್ಷಣಾ ಕಾರ್ಯಾಚರಣೆಯನ್ನು ಆರಂಭಿಸಿದೆ. ಎರಡು ನೌಕಾಪಡೆಯ ಎರಡು ಹಾಗೂ ಒಎನ್ಜಿಸಿಯ ಒಂದು ಹೆಲಿಕಾಪ್ಟರ್ ಅನ್ನು ಕಾರ್ಯಾಚರಣೆಗೆ ನಿಯೋಜಿಸಲಾಗಿದೆ ಎಂದು ವರದಿ ತಿಳಿಸಿದೆ.
ಉತ್ತರಾಖಂಡದಿಂದ 'ಸೈಡ್ ಸ್ಕ್ಯಾನ್ ಸೋನಾರ್' ಉಪಕರಣ ಹೊಂದಿರುವ ವಿಶೇಷ ಈಜು ತಜ್ಞರ ಮಂದಿಯ ತಂಡ ಅಲ್ಲಿನ ಎಸ್ಡಿಆರ್ಎಫ್ ಪಡೆಯೊಂದಿಗೆ ಸ್ಥಳಕ್ಕೆ ಇಂದು ಆಗಮಿಸಲಿದೆ.