ಬೆಂಗಳೂರು, ಆ 11 ತ್ಯಾಗ ಮತ್ತು ಬಲಿದಾನದ ನೆನಪಿನಲ್ಲಿ ಮುಸ್ಲಿಮರು ಆಚರಿಸುವ ಈದುಲ್ ಅದ್ಹಾ ಅಥವಾ ಬಕ್ರೀದ್ ಹಬ್ಬ ನಾಳೆ ಕರ್ನಾಟಕ ಸೇರಿದಂತೆ ದೇಶಾದ್ಯಂತ ಆಚರಿಸಲಾಗುತ್ತದೆ. ಇಸ್ಲಾಮಿಕ್ ಕ್ಯಾಲೆಂಡರಿನ 'ದುಲ್ಹಜ್ಜ್' ತಿಂಗಳ 10ರಂದು ಬಕ್ರೀದ್ ಆಚರಿಸಲಾಗುತ್ತಿದ್ದು, ನಾಳೆ ಈದ್ಗಾ ಮೈದಾನ ಮತ್ತು ಮಸೀದಿಗಳಲ್ಲಿ ವಿಶೇಷ ನಮಾಜ್ ನೆರವೇರಲಿದೆ. ಬೆಂಗಳೂರಿನ ಖುದ್ದೂಸ್ ಶಾ ಈದ್ಗಾ ಮೈದಾನ, ಚಾಮರಾಜಪೇಟೆ, ಬನ್ನೇರುಘಟ್ಟ ಸೇರಿದಂತೆ ಹಲವು ಈದ್ಗಾ ಮೈದಾನಗಳಲ್ಲಿ ಸಾಮೂಹಿಕ ನಮಾಜ್ ನಡೆಯಲಿದೆ. ಹಬ್ಬದ ದಿನ ಬೆಳಿಗ್ಗೆ ಮಸೀದಿ ಹಾಗೂ ಈದ್ಗಾಗಳಲ್ಲಿ ವಿಶೇಷ ನಮಾಜ್ ಹಾಗೂ ಖುತ್ಬಾ (ಪ್ರವಚನ) ನಡೆಯುತ್ತದೆ. ಮಕ್ಕಳು, ಹಿರಿಯರು ಹೊಸ ಉಡುಗೆ ತೊಟ್ಟು ಪ್ರಾರ್ಥನೆಯಲ್ಲಿ ಪಾಲ್ಗೊಳ್ಳುತ್ತಾರೆ. ಪರಸ್ಪರ ಶುಭಾಶಯವನ್ನು ವಿನಿಮಯ ಮಾಡಿಕೊಂಡು, ಗೆಳೆಯರ ಮತ್ತು ಸಂಬಂಧಿಕರ ಮನೆಗೆ ಭೇಟಿ ನೀಡಿ ಸೌಹಾರ್ದತೆ ಸಂದೇಶವನ್ನು ಸಾರುತ್ತಾರೆ. ಹಬ್ಬಕ್ಕಾಗಿ ವಿಶೇಷ ಖಾದ್ಯವನ್ನು ತಯಾರಿಸಲಾಗುತ್ತದೆ. ಸುಮಾರು ನಾಲ್ಕು ಸಾವಿರ ವರ್ಷಗಳಿಗೂ ಹಿಂದೆ ಹುಟ್ಟಿದ್ದ ಪ್ರವಾದಿ ಇಬ್ರಾಹಿಂ ಅವರ ತ್ಯಾಗ-ಬಲಿದಾನಗಳ ನೆನಪಿನಲ್ಲಿ ಒಂಟೆ, ಕುರಿ, ಮೇಕೆಯನ್ನು ಬಲಿ ಅರ್ಪಿಸಿ ಅದರ ಮಾಂಸವನ್ನು ಬಡವರಿಗೆ ಹಂಚಲಾಗುತ್ತದೆ. ಸೌದಿ ಅರೇಬಿಯಾ ಸೇರಿದಂತೆ ಕೊಲ್ಲಿ ರಾಷ್ಟ್ರಗಳಲ್ಲಿ ಇಂದು ಹಬ್ಬವನ್ನು ಆಚರಿಸಲಾಗುತ್ತಿದೆ.