ಬೆಂಗಳೂರು, ಫೆ 8 : ಪ್ರಸಕ್ತ ಬಜೆಟ್ ನಲ್ಲಿ ದಲಿತರ ಅಭಿವೃದ್ಧಿಗೆ ಶೇ.30 ರಷ್ಟು ಅನುದಾನ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಫೆ.10 ರಂದು ತಮಟೆ ಚಳವಳಿ ನಡೆಸಲಾಗುವುದು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ ಡಾ.ಎನ್.ಮೂರ್ತಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸಕ್ತ ಕೇಂದ್ರ ಬಜೆಟ್ ನಲ್ಲಿ ಎಸ್.ಸಿ, ಎಸ್.ಟಿ ಮತ್ತು ಓಬಿಸಿಗಳ ಅಭಿವೃದ್ಧಿಗೆ ಕೇವಲ 84 ಸಾವಿರ ಕೋಟಿ ಅನುದಾನ ನೀಡಲಾಗಿದ್ದು, ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ದಲಿತರ ಸಂವಿಧಾನಾತ್ಮಕ ಹಕ್ಕು ಮತ್ತು ರಕ್ಷಣೆಗಳಂತಹ ಸಾಮಾಜಿಕ ನ್ಯಾಯ ಒದಗಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಆರೋಪಿಸಿದರು.
ರಾಜ್ಯ ಸರ್ಕಾರ ಪ್ರಸಕ್ತ ಬಜೆಟ್ ನಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಅಭಿವೃದ್ಧಿಗೆ ಅವರ ಜನಸಂಖ್ಯೆ ಗನುಗುಣವಾಗಿ ಅನುದಾನ ನೀಡಬೇಕು. ಪ.ಜಾ, ಪ.ವರ್ಗಗಳ ಮೀಸಲಾತಿಯಲ್ಲಿ ಶೇ.30 ರಷ್ಟು ಹೆಚ್ಚಿಸುವುದು, ದಲಿತ ಮಹಿಳೆಯರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯ ತಡೆಯುವುದು, ರಾಜ್ಯದಲ್ಲಿ ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದು ದಲಿತರ ಸೌಲಭ್ಯ ಪಡೆಯುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳುವುದು ಸೇರಿದಂತೆ ಒಟ್ಟು 20 ಬೇಡಿಕೆಗಳನ್ನು ಈಡೇರಿಸುವಂತೆ ಚಳುವಳಿಯಲ್ಲಿ ಒತ್ತಾಯಿಸಲಾಗುವುದು ಎಂದು ಅವರು ತಿಳಿಸಿದರು.