ಬೆಂಗಳೂರು, ಮೇ 18,ಇಂದು ಮಾಜಿ ಪ್ರಧಾನಿ ಜೆಡಿಎಸ್ ರಾಷ್ಟ್ರೀಯ ನಾಯಕ ಹೆಚ್. ಡಿ ದೇವೇಗೌಡ ಅವರಿಗೆ 88ನೇ ಹುಟ್ಟುಹಬ್ಬದ ಸಂಭ್ರಮ. ಕೊರೋನಾ ಸೋಂಕು ನಿಯಂತ್ರಣ ಉದ್ದೇಶದಿಂದ ಸಾಮಾಜಿಕ ಅಂತರ ನಿಯಮದಿಂದಾಗಿ ದೇವೇಗೌಡರು ಈ ಬಾರಿ ತಮ್ಮ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿಕೊಳ್ಳುತ್ತಿದ್ದಾರೆ. ಮನೆಯ ಸದಸ್ಯರೊಂದಿಗೆ ಕೇಕ್ ಕತ್ತರಿಸಿ ಮನೆಯಲ್ಲಿಯೇ ಕಾಲಕಳೆಯುತ್ತಿದ್ದಾರೆ. ಹಿರಿಯ ರಾಜಕಾರಣಿಯ ಹುಟ್ಟುಹಬ್ಬಕ್ಕೆ ಪ್ರಧಾನಿ ನರೇಂದ್ರ ಮೋದಿ ಶುಭಕೋರಿ, ದೇವರು ಸುದೀರ್ಘ ಆರೋಗ್ಯ ಹಾಗೂ ಆಯಶ್ಸು ಕೊಡಲೆಂದು ಹಾರೈಸಿ ಟ್ವೀಟ್ ಮಾಡಿದ್ದಾರೆ.
ಇನ್ನು ಟ್ವೀಟ್ ಮೂಲಕ ತಂದೆಯ ಜನ್ಮದಿನಕ್ಕೆ ಶುಭಾಶಯ ಕೋರಿದ ಜೆಡಿಎಸ್ ಶಾಸಕಾಂಗ ನಾಯಕ ಹೆಚ್.ಡಿ.ಕುಮಾರಸ್ವಾಮಿ, ದೇಶದ ಅತ್ಯುನ್ನತ, ಅಸಾಮಾನ್ಯ ಹುದ್ದೆಯನ್ನು ಸಾಮಾನ್ಯನೂ ಅಲಂಕರಿಸಬಹುದು ಎಂಬುದು ಭಾರತದ ಪ್ರಜಾಪ್ರಭುತ್ವದ ಸೌಂದರ್ಯ. ಈ ಮಾತನ್ನು, ಹಳ್ಳಿಯ ಮಣ್ಣಿಂದ ಬಂದು, ರಾಷ್ಟ್ರೀಯ ಪಕ್ಷದ ಹಿನ್ನೆಲೆ ಇಲ್ಲದೇ ಸಾಧಿಸಿ ತೋರಿಸಿದ ನೀವು ನಮಗೆಲ್ಲಾ ಮಾದರಿ. ಬದ್ಧತೆ, ಛಲ, ಪರಿಶ್ರಮ, ಹೋರಾಟ ಮತ್ತು ನಾಡಿಗೆ ಹೆಗ್ಗುರುತಾಗಿರುವ ಅವರ ಜನ್ಮದಿನಕ್ಕೆ ಶುಭಾಶಯಗಳು ಎಂದಿದ್ದಾರೆ.ಅಭಿಮಾನಿಗಳಿಗೆ, ಕಾರ್ಯಕರ್ತರಿಗೆ ಮನೆ ಬಳಿ ಬಾರದಂತೆ ಮನವಿ ಮಾಡಿದ್ದು,ಕೊರೊನಾ ಹಿನ್ನೆಲೆಯಲ್ಲಿ ಜನ ಸೇರುವುದು ಅಪಾಯಕಾರಿ. ಹಾಗಾಗಿ ಯಾರೂ ಕೂಡಾ ಮನೆ ಬಳಿ ಬಾರದಂತೆ ಮನವಿ ಮಾಡಿದ್ದಾರೆ. ಅಭಿಮಾನಿಗಳು ಕಾರ್ಯಕರ್ತರು ಇರುವೆಡೆಯಿಂದಲೇ ಶುಭಕೋರುವಂತೆ ಕರೆ ನೀಡಿದ್ದಾರೆ.ಹಟ್ಟು ಹಬ್ಬದ ಪ್ರಯುಕ್ತ ಜೆಡಿಎಸ್ ಪ್ರಧಾನ ಕಚೇರಿ ಜೆ.ಪಿ.ಭವನದಲ್ಲಿ ಮೇಲ್ಮನೆ ಸದಸ್ಯ ಶರವಣ ನೇತೃತ್ವದಲ್ಲಿ ರಕ್ತದಾನ ಶಿಬಿರ ಏರ್ಪಡಿಸಿದ್ದು, ರಕ್ತದಾನ ಶಿಬಿರವನ್ನು ದೇವೇಗೌಡರು ಉದ್ಘಾಟನೆ ಮಾಡಿದರು.