ವಿಜಯಪುರ 15: ನಾವು ಬದುಕು-ಸಂಸಾರದ ಜಂಜಾಟದಿಂದ ಸ್ವಲ್ಪ ರಿಲ್ಯಾಕ್ಸ್ ಪಡೆಯಲು ದೇವರ ನಾಮಸ್ಮರಣೆ, ಧಾರ್ಮಿಕ-ಸಾಮಾಜಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಅಧ್ಯಾತ್ಮಿಕತೆಯ ಕಡೆಗೆ ಹೆಚ್ಚಿನ ಒಲವು ಹೊಂದುವುದು ಅಗತ್ಯವಾಗಿದೆ. ಅದರ ಜೊತೆಗೆ ಸಮೂಹ ಮಾಧ್ಯಮ, ಪಾಶ್ಚಾತ್ಯೀಕರಣದ ಪ್ರಭಾವದಿಂದ ನಮ್ಮ ದೇಶೀಯ ಸಂಸ್ಕೃತಿ ನಶಿಸಿ ಹೋಗುತ್ತಿರುವ ಇಂದಿನ ದಿನಮಾನಗಳಲ್ಲಿ ಪ್ರತಿ ಮನೆಯಲ್ಲಿಯೂ ನಮ್ಮ ಸಂಸ್ಕೃತಿ-ಸಂಸ್ಕಾರ, ಸಂಪ್ರದಾಯ ಮತ್ತು ಪರಂಪರೆಯನ್ನು ಆಚರಿಸುತ್ತಾ, ಅದು ಮುಂದಿನ ಯುವ ಪೀಳಿಗೆ ಉಳಿಸಿ-ಬೆಳೆಸಿಕೊಂಡು ಹೋಗುವಂತೆ ಪ್ರೇರೇಪಿಸಬೇಕಾಗಿದೆ. ನಮ್ಮಲ್ಲಿರುವ ಕಾಮ, ಕ್ರೋಧ, ಮದ, ಮೋಹ, ಮತ್ಸರ, ಲೋಭಗಳೆಂಬ ಅರಿಷಡ್ವರ್ಗಗಳನ್ನು ತ್ಯಜಿಸಿ, ಅರಿವೇ ಗುರು ನುಡಿಯೇ ಜೋರ್ತಿಲಿಂಗವೆಂಬ ಬಸವಣ್ಣವರ ವಚನವನ್ನು ಪರಿಪಾಲಿಸಬೇಕು ಎಂದು ಧ್ಯಾನ ತರಬೇತುದಾರಿಣಿ ಸರೋಜಾ ಬಾಗಲಕೋಟ ಹೇಳಿದರು.
ಅವರು ನಗರದ ಅಥಣಿ ರಸ್ತೆಯಲ್ಲಿರುವ ಅಲ್-ಅಮೀನ್ ಆಸ್ಪತ್ರೆಯ ಎದುರಿಗೆ ಇರುವ ಹವಾಲ್ದಾಎ ಕಾಲನಿಯಲ್ಲಿರುವ ಲಕ್ಷ್ಮೀ ದೇವಸ್ಥಾನದಲ್ಲಿ 2 ನೇಯ ವರ್ಷದ ಜಾತ್ರಾ ಮಹೋತ್ಸವದ (5 ದಿನಗಳ) ಅಂಗವಾಗಿ ಹಮ್ಮಿಕೊಂಡ ಲಲಿತ ಸಹಸ್ರ ನಾಮಾವಳಿ ಪಠಣ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಅವರು ಮಾತನಾಡುತ್ತಾ, ದೇವರಲ್ಲಿ ನಿರ್ಮಲ ಭಕ್ತಿಯಿಟ್ಟು ಧ್ಯಾನ, ತಪಸ್ಸು, ಭಜನೆ ಮತ್ತು ದೈವತ್ವ ಶಕ್ತಿಯನ್ನು ಒಲಿಸಿಕೊಳ್ಳುವಲ್ಲಿ ಮನದಲ್ಲಿ ಸಮಚಿತ್ತದಿಂದ ಏಕೋಭಾವದಿಂದ ಪ್ರಾರ್ಥಿಸಿದರೆ ಲಕ್ಷ್ಮೀ ನಮಗೆ ಅನುಗ್ರಹಿಸುತ್ತಾ, ಜೀವನದಲ್ಲಿ ಸುಖ-ಶಾಂತಿ, ನೆಮ್ಮದಿ ದೊರೆಯುತ್ತದೆ. ಎಂದರು. ಸಂಪಾದಿಸಿದ ಆದಾಯದಲ್ಲಿಯೇ ಸಂಸಾರ ನಡೆಸಿ, ದೇವಸ್ಥಾನಗಳಿಗೆ ತನು-ಮನ-ಧನದ ಮೂಲಕ ಸಹಾಯ ಮಾಡಿ ಜೀವನವನ್ನು ಸಾರ್ಥಕಪಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
ದೇವಸ್ಥಾನ ಸಮೀತಿ ಕಾರ್ಯದರ್ಶಿ ಶೋಭಾ ಚವ್ಹಾಣ ಅವರು ಮಾತನಾಡಿ, ಇರುವಷ್ಟು ದಿನ ಒಳ್ಳೆಯ ಕೆಲಸ-ಕಾರ್ಯ ಮಾಡುತ್ತಾ, ಸದ್ಭಾವ, ಸದ್ವಿಚಾರ, ಸನ್ನಡತೆ, ಸದ್ಗುಣ, ಸಚ್ಚಾರಿತ್ರ್ಯ ಎಂಬ ಪಂಚ ಗುಣಗಳನ್ನು ಮೈಗೂಡಿಸಿಕೊಂಡು ಬದುಕಬೇಕು. ನಮ್ಮ ಬದುಕು ಹೆಂಗ ಆಗಬೇಕೆಂದರೆ, ಇತರರಿಗೆ ಆದರ್ಶ, ಮಾದರಿ ಮತ್ತು ಅನುಕರಣೆಯಾಗುವಂತಿರಬೇಕು. ಮನೆಯಲ್ಲಿ ನಾವು ಬದುಕುವ ರೀತಿ-ನೀತಿ, ಆಚಾರ-ವಿಚಾರ, ಸಂಸ್ಕೃತಿ-ಸಂಸ್ಕಾರಗಳೆಲ್ಲವೂ ನಮ್ಮ ಮಕ್ಕಳಲ್ಲಿ ಜೀವನ-ಮೌಲ್ಯಗಳನ್ನು ಒಡಮೂಡಿಸವಂತಿರಬೇಕು. ಕೊಡುಗೈ ದಾನಿಗಳ ಸಹಾಯ, ಸಹಕಾರದಿಂದ ಈ ದೇವಸ್ಥಾನವು ಇಷ್ಟು ಅಭಿವೃದ್ಧಿ ಹೊಂದಲು ಕಾರಣವಾಗಿದೆ. ಇಂದಿನ ಪಾಶ್ಚಾತ್ಯ ಸಂಸ್ಕೃತಿಯಿಂದ ಮಾಯವಾಗುತ್ತಿರುವ ನಮ್ಮ ಭಾರತೀಯ ಸಂಸ್ಕೃತಿ, ಜನಪದ ಸೊಗಡು, ಹಳ್ಳಿ ಸಂಪ್ರದಾಯ, ನಾಡು-ನುಡಿ ರಕ್ಷಣೆಗಾಗಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದೇವೆ ಎಂದರು. .
ಕಾರ್ಯಕ್ರಮದಲ್ಲಿ ದೇವಸ್ಥಾನದ ಸೇವಾ ಸಮೀತಿ ಅಧ್ಯಕ್ಷೆ ಶಾಂತಾ ಕಪಾಳಿ, ಶಕುಂತಲಾ ಅಂಕಲಗಿ, ಸಾವಿತ್ರಿ ಅಗ್ರಾಣಿ, ರೇಣುಕಾ ಗಂಜ್ಯಾಳ, ಸಿದ್ದಲಿಂಗಮ್ಮ ಓತಿಹಾಳ, ಜ್ಯೋತಿ ಡೊಳ್ಳಿ, ಮಂಜುಳಾ ನಿಂಬಾಳಕರ, ಕಸ್ತೂರಿ ಸಾವಳಗಿ, ಹೇಮಾವತಿ ಅಂಗಡಿ, ಭವಾನಿ ಜಾಧವ, ಜ್ಯೋತಿ ಹಿರೇಮಠ, ಕಲಾವತಿ ಬಿದರಿ, ಸುನೀತಾ ಕಟ್ಟಿಮನಿ ಇನ್ನಿತರರು ಸಹ ಉಪಸ್ಥಿತರಿದ್ದರು.
ಈ ಲಲಿತ ಸಹಸ್ರ ನಾಮಾವಳಿ ಪಠಣ ಕಾರ್ಯಕ್ರಮದಲ್ಲಿ ನವರಸಪುರದ ಸುತ್ತಮುತ್ತಲಿನ ಬಡಾವಣೆಗಳ ನೂರಾರು ಸಾರ್ವಜನಿಕರು, ಹಿರಿಯರು, ಮಹಿಳೆಯರು, ಯುವಕರು ಮತ್ತು ಮಕ್ಕಳು ಪಾಲ್ಗೊಂಡಿದ್ದರು.