ತಿವಾರಿ ಹತ್ಯೆ ಪ್ರಕರಣದ ಶಂಕಿತರು ಆದಷ್ಟು ಬೇಗ ರಾಜ್ಯಕ್ಕೆ: ಡಿಜಿಪಿ

ಲಖನೌ, ಅ 23:    ಕಮಲೇಶ್ ತಿವಾರಿ ಹತ್ಯೆ ಪ್ರಕರಣದ ಇಬ್ಬರು ಪ್ರಮುಖ ಶಂಕಿತರನ್ನು ಗುಜರಾತ್ ಎಟಿಎಸ್ ನಿಂದ ಉತ್ತರ ಪ್ರದೇಶಕ್ಕೆ ಆದಷ್ಟು ಶೀಘ್ರದಲ್ಲಿಯೇ ಕರೆತರಲಾಗುವುದು ಎಂದು ಡಿಜಿಪಿ ಒಪಿ ಸಿಂಗ್ ಬುಧವಾರ ತಿಳಿಸಿದ್ದಾರೆ. ಕೊಲೆಯ ನಂತರ ರಾಜ್ಯ ಪೊಲೀಸ್ ತಂಡಗಳು ಆರೋಪಿಗಳಿಗೆ ಬಲೆ ಬೀಸಿದ್ದವು.  ಉತ್ತರ ಪ್ರದೇಶ, ಗುಜರಾತ್ ಮತ್ತು ಮಹಾರಾಷ್ಟ್ರ ಪೊಲೀಸರು ಸಂಘಟಿತ ರೀತಿಯಲ್ಲಿ ಆರೋಪಿಗಳನ್ನು ಬಂಧಿಸಲು ಶ್ರಮಿಸಿದ್ದಾರೆ. 

ನಾವು ಅವರನ್ನು ಆದಷ್ಟು ಬೇಗ ಅವರನ್ನು ರಾಜ್ಯಕ್ಕೆ ಕರೆತರುತ್ತೇವೆ, " ಎಂದರು. ಇಬ್ಬರು ಪ್ರಮುಖ ಆರೋಪಿಗಳನ್ನು ಇಂದು ಅಥವಾ ಗುರುವಾರ ಬೆಳಿಗ್ಗೆ ಅಹಮದಾಬಾದ್ನಿಂದ ಕರೆತರಲಾಗುವುದು ಎಂದು ರಾಜ್ಯದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ನ್ಯಾಯಾಲಯವು ಭಾನುವಾರ ಆರೋಪಿಗಳನ್ನು ಕರೆತರಲು ಅನುಮತಿ ನೀಡಿದ್ದರಿಂದ ರಾಜ್ಯ ಪೊಲೀಸರ ತಂಡ ಈಗಾಗಲೇ ಅಹಮದಾಬಾದ್ಗೆ ತೆರಳಿದೆ ಎಂದು ಮಾಹಿತಿ ನೀಡಿದ್ದಾರೆ. 

ಆರೋಪಿಗಳನ್ನು ಅಶ್ಫಾಕ್ ಹುಸೇನ್ ಜಾಕಿರ್ಹುಸೇನ್ ಶೇಖ್ (34) ಮತ್ತು ಮೊಯಿನುದ್ದೀನ್ ಖುರ್ಷಿದ್ ಪಠಾಣ್ (27) ಎಂದು ಗುರುತಿಸಲಾಗಿದ್ದು, ಗುಜರಾತ್ ಎಟಿಎಸ್ ಮಂಗಳವಾರ ಮಧ್ಯಾಹ್ನ ಗುಜರಾತ್-ರಾಜಸ್ಥಾನ್ ಗಡಿಯ ಶಮ್ಲಾಜಿ ಬಳಿ ಬಂಧಿಸಿದೆ. ಅಶ್ಫಾಕ್ ಮತ್ತು ಮೊಯಿನುದ್ದೀನ್ ಇಬ್ಬರೂ ಪ್ರಸ್ತುತ ಗುಜರಾತ್ ಎಟಿಎಸ್ ವಶದಲ್ಲಿದ್ದು,  ಅವರ ವಿಚಾರಣೆ ನಡೆಸಲಾಗುತ್ತಿದೆ. ಪ್ರಾಥಮಿಕ ವಿಚಾರಣೆಯಲ್ಲಿ, ಅಶ್ಫಾಕ್ ಮತ್ತು ಮೊಯಿನುದ್ದೀನ್ ಇಬ್ಬರೂ ಹಿಂದೂ ಸಮಾಜ ಪಕ್ಷದ ಮುಖ್ಯಸ್ಥ ಕಮಲೇಶ್ ತಿವಾರಿ ಅವರ ಹತ್ಯೆಯಲ್ಲಿ ಭಾಗಿಯಾಗಿರುವುದನ್ನು ಒಪ್ಪಿಕೊಂಡಿದ್ದಾರೆ ಎಂದು ಗುಜರಾತ್ ಎಟಿಎಸ್ ಪತ್ರಿಕಾ ಪ್ರಕಟಣೆ ತಿಳಿಸಿದೆ.

ಕಮಲೇಶ್ ತಿವಾರಿ ಪ್ರವಾದಿ ಮೊಹಮ್ಮದ್ ಬಗ್ಗೆ ನೀಡಿದ ಹೇಳಿಕೆಯಿಂದ ಕುಪಿತಗೊಂಡ ಆರೋಪಿಗಳು  ಅಕ್ಟೋಬರ್ 18 ರಂದು ಲಖನೌದ ನಾಕಾ ಹಿಂದೋಲಾ ಪ್ರದೇಶದ ಅವರ ನಿವಾಸದಲ್ಲಿ ಹತ್ಯೆ ಮಾಡಿದ್ದರು.  ಈ ಕೃತ್ಯದ ಸುಳಿವು ಸಿಸಿಟಿವಿ ಕ್ಯಾಮರಾದಿಂದ ದೊರಕಿತ್ತು. ಈ ಹತ್ಯೆ ಸಂಚಿನಲ್ಲಿ ಭಾಗಿಯಾಗಿರುವ ಗುಜರಾತ್ ನ ಮೂವರು ಮತ್ತು ನಾಗಪುರದ ಓರ್ವ ಆರೋಪಿಯನ್ನು ಉತ್ತರಪ್ರದೇಶ ಪೊಲೀಸರು ವಶಕ್ಕೆ ಪಡೆದಿದ್ದಾರೆ.