ನವದೆಹಲಿ, ಫೆ 20- 2012 ರ ನಿರ್ಭಯಾ ಸಾಮೂಹಿಕ ಅತ್ಯಾಚಾರ-ಕೊಲೆ ಪ್ರಕರಣದ ತಪ್ಪಿತಸ್ಥರಲ್ಲಿ ಒಬ್ಬನಾದ ವಿನಯ್ ಶರ್ಮಾ ಪರವಾಗಿ ಸಲ್ಲಿಸಿರುವ ಮನವಿಯನ್ನು ಆಲಿಸಿದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಧರ್ಮೇಂದರ್ ರಾಣಾ, ಶನಿವಾರ ಉತ್ತರ ನೀಡುವಂತೆ ತಿಹಾರ್ ಜೈಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಮರಣದಂಡನೆ ಶಿಕ್ಷೆಗೊಳಗಾಗಿ ತಿಹಾರ್ ಜೈಲಿನಲ್ಲಿರುವ ತಪ್ಪಿತಸ್ಥ ತೀವ್ರ ಗಾಯಗೊಂಡಿದ್ದಾನೆ. ಆತನ ಬಲಗೈ ಮುರಿತಕ್ಕೆ ಉನ್ನತ ಮಟ್ಟದ ವೈದ್ಯಕೀಯ ಚಿಕಿತ್ಸೆಯ ಅಗತ್ಯವಿದೆ ಎಂದು ವಿನಯ್ ಪರ ವಕೀಲ ನ್ಯಾಯಾಲಯಕ್ಕೆ ಮನವಿ ಅರ್ಜಿ ಸಲ್ಲಿಸಿದ್ದಾರೆ. ಅಲ್ಲದೆ, ತೀವ್ರ ಮಾನಸಿಕ ಕಾಯಿಲೆಗಳು ಮತ್ತು ಸ್ಕಿಜೋಫ್ರೇನಿಯಾದಿಂದ ಬಳಲುತ್ತಿರುವ ವಿನಯ್ ನನ್ನು ಮರಣದಂಡನೆ ಶಿಕ್ಷೆ ವಿಧಿಸಬಾರದು ಎಂದು ಅರ್ಜಿಯಲ್ಲಿ ಕೋರಿದ್ದಾರೆ. ತನ್ನ ತಾಯಿ ಸೇರಿದಂತೆ ಇತರರನ್ನು ಗುರುತಿಸಲು ವಿನಯ್ ಗೆ ಸಾಧ್ಯವಾಗುತ್ತಿಲ್ಲ. ಆದ್ದರಿಂದ ಆತನನ್ನು ಮಾನವ ನಡವಳಿಕೆ ಮತ್ತು ಸಂಬಂಧಿತ ವಿಜ್ಞಾನಗಳ ಸಂಸ್ಥೆಯ ಆಸ್ಪತ್ರಗೆ ದಾಖಲಿಸಬೇಕು ಎಂದು ತಪ್ಪಿತಸ್ಥನ ಪರ ವಕೀಲರು ಹೇಳಿದ್ದಾರೆ.
ಭಾನುವಾರ ಮಧ್ಯಾಹ್ನ ವಿನಯ್ ತಾನಾಗಿಯೇ ಗೋಡೆಗೆ ತಲೆ ಹೊಡೆದುಕೊಂಡು ಗಾಯಗೊಳ್ಳಲು ಪ್ರಯತ್ನಿಸಿದ್ದಾನೆ. ಭದ್ರತಾ ಸಿಬ್ಬಂದಿ ಅವನನ್ನು ತಡೆದಿದ್ದು, ಆತನಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಹಾರ್ ಜೈಲು ಅಧಿಕಾರಿಗಳು ವಾದಿಸಿದರು. ವಿನಯ್ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದು, ಅವನ ಮಾನಸಿಕ ಸ್ಥಿತಿ ಚೆನ್ನಾಗಿಲ್ಲ. ಇತರರಿಗಿಂತ ಅವನು ಭಿನ್ನವಾಗಿ ವರ್ತಿಸುತ್ತಿದ್ದಾನೆ ವಿನಯ್ ಪರ ವಕೀಲ ವಾದಿಸಿದ್ದಾರೆ.
ವೈದ್ಯಕೀಯ ವಿದ್ಯಾರ್ಥಿನಿ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ತಪ್ಪಿತಸ್ಥರಾದ ವಿನಯ್ ಶರ್ಮಾ, ಅಕ್ಷಯ್ ಕುಮಾರ್ ಸಿಂಗ್, ಪವನ್ ಗುಪ್ತಾ ಮತ್ತು ಮುಖೇಶ್ ಸಿಂಗ್ ಗೆ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರು ಮಾರ್ಚ್ 3 ಕ್ಕೆ ಮೂರನೇ ಬಾರಿಗೆ ಮರಣದಂಡನೆ ವಾರಂಟ್ ಹೊರಡಿಸಿದ್ದಾರೆ. ಅತ್ಯಾಚಾರ ಮತ್ತು ತೀವ್ರ ಹಿಂಸೆಗೊಳಾಗಿದ್ದ ವಿದ್ಯಾರ್ಥಿನಿ ಕೆಲ ದಿನಗಳ ನಂತರ ಮೃತಪಟ್ಟಿದ್ದರು.
ರಾಷ್ಟ್ರಪತಿಯವರಿಗೆ ಕ್ಷಮಾದಾನ ಅರ್ಜಿಗಳು ಸೇರಿದಂತೆ ತಮ್ಮ ಎಲ್ಲಾ ಕಾನೂನು ಸಮಸ್ಯೆಗಳನ್ನು ನಿವಾರಿಸಿಕೊಳ್ಳಲು ಎಲ್ಲ ನಾಲ್ವರು ತಪ್ಪಿತಸ್ಥರಿಗೆ ದೆಹಲಿ ಹೈಕೋರ್ಟ್ ಫೆಬ್ರವರಿ 5 ರಂದು ಒಂದು ವಾರ ಅವಕಾಶ ನೀಡಿತ್ತು. ತಪ್ಪಿತಸ್ಥರ ಅರ್ಜಿಗಳನ್ನು ಪರಿಗಣಿಸಬಾರದು. ಗಲ್ಲು ಶಿಕ್ಷೆ ವಿಳಂಬ ಮಾಡಲು ಇವೆಲ್ಲಾ ಕಳ್ಳಾಟಗಳಾಗಿವೆ ಎಂದು ಸರ್ಕಾರ ಪರ ವಕೀಲರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.