ಹಾಸನದಲ್ಲಿ ಮತ್ತೆ ಮೂರು ಕೋವಿಡ್‌ 19 ಪ್ರಕರಣ ಪತ್ತೆ: ಸೋಂಕಿತರ ಸಂಖ್ಯೆ 12ಕ್ಕೇರಿಕೆ

ಹಾಸನ, ಮೇ 15, ಜಿಲ್ಲೆಯಲ್ಲಿ ಹೊಸದಾಗಿ ಮೂರು ಕೋವಿಡ್‌ 19 ಪ್ರಕರಣ ಪತ್ತೆಯಾಗಿದ್ದು, ಇದರೊಂದಿಗೆ ಸೊಂಕಿತರ ಸಂಖ್ಯೆ 12 ಕ್ಕೆ ಏರಿಕೆಯಾಗಿದೆ.ಮಹಾರಾಷ್ಟ್ರದಿಂದ ಆಗಮಿಸಿದ ಇನ್ನೂ ಹಲವರ ಪರೀಕ್ಷಾ ವರದಿ ಬರಲು ಬಾಕಿ ಇದ್ದು ಸೋಂಕಿತರ ಸಂಖ್ಯೆಯಲ್ಲಿ ಏರಿಕೆಯಾಗುವ ನಿರೀಕ್ಷೆ ಇದೆ.ಇಂದು ಚನ್ನರಾಯಪಟ್ಟಣ ತಾಲ್ಲೂಕಿನಲ್ಲಿ ಎರಡು ಹಾಗೂ ಅರಕಲಗೂಡು ತಾಲೂಕಿನ ಒಂದು ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ಎಲ್ಲರೂ ಮಹಾರಾಷ್ಟ್ರದಿಂದ ಜಿಲ್ಲೆ ಪ್ರವೇಶಿಸಿದವರಾಗಿದ್ದಾರೆ. ಜಿಲ್ಲೆಗೆ ಆಗಮಿಸಿದಾಗ ಎಲ್ಲರನ್ನೂ ನೇರವಾಗಿ ಆಸ್ಪತ್ರೆಗೆ ಕರೆದೊಯ್ದು  ಕ್ವಾರಂಟೈನ್ ಮಾಡಲಾಗಿತ್ತು ಗಂಟಲು ದ್ರವ ಪರೀಕ್ಷೆ ಬಳಿಕ ಸೋಂಕು ಪೀಡಿತ ಎಂದು ದೃಢಪಟ್ಟಿದೆ.
ಅರಕಲಗೂಡಿನ ಮಹಿಳೆ ಪತಿ ಹಾಗೂ ಪುತ್ರಿಯೊಂದಿಗೆ ಚನ್ನರಾಯಪಟ್ಟಣ ತಾಲ್ಲೂಕಿನ ಇತರ 17 ಮಂದಿಯೊಂದಿಗೆ ಒಟ್ಟು 20 ಮಂದಿ  ಖಾಸಗಿ ಬಸ್ ನಲ್ಲಿ ಮೇ 12ರಂದು ರಾತ್ರಿ ಜಿಲ್ಲೆಗೆ ಆಗಮಿಸಿದ್ದರು. ಪೋಲೀಸ್ ,ಅರೋಗ್ಯ ಇಲಾಖೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಅವರನ್ನು ಅಯಾಯಾ ತಾಲ್ಲೂಕು ಆಸ್ಪತ್ರೆಗಳಿಗೆ  ಕರೆತಂದು ಕ್ವಾರಂಟೈನ್ ನಲ್ಲಿ  ಇರಿಸಿದ್ದರು. ಇತರ 19 ಮಂದಿಯ ಗಂಟಲು ದ್ರವ ಮಾದರಿ ಪರೀಕ್ಷೆ ವರದಿಗಾಗಿ ಕಾಯಲಾಗುತ್ತಿದೆ.  ಮೊದಲು ಹಸಿರು ವಲಯದಲ್ಲಿದ್ದ ಹಾಸನ‌ ಜಿಲ್ಲೆಯಲ್ಲಿ ಮೇ 12ರಂದು  5,  ಮೇ13ರಂದು  4,  ಮತ್ತು ಮೇ 15ರಂದು 3 ಪಾಸಿಟಿವ್ ಪ್ರಕರಣ ವರದಿಯಾಗಿದೆ. ಸೋಂಕಿತರು ಯಾರೊಂದಿಗೂ ಸಂಪರ್ಕ ಬೆಳೆಸಿಲ್ಲ. ಭಯಪಡುವ ಅವಶ್ಯಕತೆ ಇಲ್ಲ ಎಂದು ಜಿಲ್ಲಾಧಿಕಾರಿ ‌ಆರ್ ಗಿರೀಶ್ ತಿಳಿಸಿದ್ದಾರೆ.ಮಹಾರಾಷ್ಟ್ರದಿಂದ ಬಂದವರನ್ನು ನೇರವಾಗಿ ಆಸ್ಪತ್ರೆಗೆ ದಾಖಲಿಸಿದ ಹಿನ್ನೆಲೆ ಯಾವುದೇ ಆತಂಕ ಬೇಡ ಎಂದ ಅವರು, ಆದರೆ ಮುಂಜಾಗ್ರತೆ ವಹಿಸಿ ಎಂದು ಮನವಿ ಮಾಡಿದ್ದಾರೆ.