ಕನ್ಯಾಕುಮಾರಿ, ಮಾರ್ಚ್ 28, ತಮಿಳುನಾಡಿನಲ್ಲಿ ಒಂದೇ ದಿನದಲ್ಲಿ ಕೊವಿದ್-19 ಸೋಂಕು ಶಂಕೆಯ ಎರಡು ವರ್ಷದ ಮಗು ಮೂವರು ಸಾವನ್ನಪ್ಪಿದ್ದಾರೆ. ಕನ್ಯಾಕುಮಾರಿ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆ (ಕೆಜಿಎಂಸಿಎಚ್)ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 64 ವರ್ಷದ ವೃದ್ಧ, 24 ವರ್ಷದ ಯುವಕ ಮತ್ತು ಮಗು ಶನಿವಾರ ಮೃತಪಟ್ಟಿದ್ದಾರೆ.ರೋಗಿಗಳ ರಕ್ತದ ಮಾದರಿಗಳನ್ನು ಪರೀಕ್ಷೆ ಮತ್ತು ವಿಶ್ಲೇಷಣೆಗಾಗಿ ತಿರನಲ್ವೇಲಿ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.ಈ ಮಧ್ಯೆ, ತಮಿಳುನಾಡು ಆರೋಗ್ಯ ಕಾರ್ಯದರ್ಶಿ ಬೀಲಾ ರಾಜೇಶ್ ವಾಟ್ಸಾಪ್ ಮೂಲಕ ಆಡಿಯೋ ಸಂದೇಶ ಕಳುಹಿಸಿ, ಇಂದು ಮೃತಪಟ್ಟ ಮೂವರಿಗೂ ಇತರ ಆರೋಗ್ಯ ಸಮಸ್ಯೆಗಳಿದ್ದವು ಎಂದು ಹೇಳಿದ್ದಾರೆ. ಮಗುವಿಗೆ ಆಸ್ಟಿಯೊಪೆಟ್ರೋಸಿಸ್ ಮತ್ತು ಉಸಿರಾಟದ ತೊಂದರೆಯಿತ್ತು. 66 ವರ್ಷದ ವ್ಯಕ್ತಿಯು ದೀರ್ಘಕಾಲದ ಮೂತ್ರಪಿಂಡ ಕಾಯಿಲೆಯಿಂದ ಬಳಲುತ್ತಿದ್ದ. 24 ವರ್ಷದ ಯುವಕ ನ್ಯುಮೋನಿಯಾದಿಂದ ಬಳಲುತ್ತಿದ್ದ.ಆದರೂ, ಈ ಮೂವರಿಗೂ ಸೋಂಕು ತಗುಲಿರುವ ಕುರಿತು ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ಪರೀಕ್ಷಾ ವರದಿಗಳನ್ನು ನಿರೀಕ್ಷಿಸಲಾಗುತ್ತಿದೆ. ವರದಿ ಬಂದ ತಕ್ಷಣ ಸಾವಿಗೆ ಕಾರಣವೇನೆಂಬುದನ್ನು ದೃಢಪಡಿಸಲಾಗುವುದು ಎಂದು ಬೀಲಾ ರಾಜೇಶ್ ತಿಳಿಸಿದ್ದಾರೆ. ಶನಿವಾರ ಸಾವನ್ನಪ್ಪಿದವರು ಸೇರಿದಂತೆ ಸೋಂಕು ಶಂಕೆಯ ಮೇಲೆ ರಾಜ್ಯದಲ್ಲಿ ಪ್ರತ್ಯೇಕ ವಾರ್ಡ್‍ಗಳಲ್ಲಿದ್ದ ಆರು ಮಂದಿ ಇದುವರೆಗೆ ಸಾವನ್ನಪ್ಪಿದ್ದಾರೆ. ಇದಕ್ಕೂ ಮೊದಲು ಮಾರ್ಚ್ 21 ರಿಂದ ಮಹಿಳೆ ಸೇರಿದಂತೆ ಮೂವರು ವಿವಿಧ ಆರೋಗ್ಯ ತೊಂದರೆಗಳಿಂದ ಸಾವನ್ನಪ್ಪಿದ್ದಾರೆ. ಅವರ ರಕ್ತ ಮತ್ತು ಗಂಟಲು ದ್ರವ ಪರೀಕ್ಷೆಯಲ್ಲಿ ಕೊವಿದ್-19 ಸೋಂಕು ಇಲ್ಲದಿರುವುದು ದೃಢಪಟ್ಟಿದೆ.