ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡವರು ಕಡ್ಡಾಯವಾಗಿ ವೈದ್ಯಕೀಯ ತಪಾಸಣೆಗೊಳಗಾಗಬೇಕ: ಕಾರಜೋಳ

ಬೆಂಗಳೂರು, ಏ.3, ಕರ್ನಾಟಕದಲ್ಲಿ  ದಿನೇ ದಿನೇ ಕೊರೊನಾ ವೈರಸ್ ಹೆಚ್ಚಾಗುತ್ತಿರುವ ಕಾರಣ ನಿಜಾಮುದ್ದೀನ್ ಧರ್ಮ ಸಭೆಯಲ್ಲಿ  ಭಾಗವಹಿಸಿದವರು ಹಾಗೂ ಹೊರ ರಾಜ್ಯ ಮತ್ತು ಹೊರದೇಶಗಳಿಂದ ಬಂದಂತಹವರು ಕಡ್ಡಾಯವಾಗಿ ಸ್ವಯಂ  ಪ್ರೇರಣೆಯಿಂದ ವೈದ್ಯಕೀಯ ತಪಾಸಣೆಗೊಳಗಾಗಬೇಕು ಎಂದು ಉಪಮುಖ್ಯಮಂತ್ರಿ ಗೋವಿಂದ ಎಂ ಕಾರಜೋಳ  ಮನವಿ ಮಾಡಿದ್ದಾರೆ.  ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡ ಮಹನೀಯರು ವೈದ್ಯಕೀಯ ತಪಾಸಣೆಗೊಳಗಾಗುವುದನ್ನು ನಿರ್ಲಕ್ಷಿಸಿದಲ್ಲಿ ತಮ್ಮ  ಜೀವಕ್ಕೂ ಮತ್ತು ತಮ್ಮ ಬಂಧು ಬಳಗದವರ ಜೀವಕ್ಕೂ ತೊಂದರೆ ಮಾಡಿದಂತಾಗುತ್ತದೆ. ಅಲ್ಲದೇ  ಸಮುದಾಯದ ಸ್ವಾಸ್ಥ್ಯವನ್ನು ಹಾಳುಮಾಡಿದಂತಾಗುತ್ತದೆ. ಆದ್ದರಿಂದ ಸರ್ಕಾರದೊಂದಿಗೆ ಸಹಕರಿಸಲು  ಮತ್ತೊಮ್ಮೆ ಮನವಿ ಮಾಡುತ್ತೇನೆ ಎಂದರು. ತಪ್ಪಿದಲ್ಲಿ  ಅಂತಹವವರಿಗೆ ಕಠಿಣ ಶಿಕ್ಷೆ ವಿಧಿಸಲು ಸರ್ಕಾರ ಈಗಾಗಲೇ ಜಿಲ್ಲಾಡಳಿತಗಳಿಗೆ ಮತ್ತು  ತಾಲೂಕು ಆಡಳಿತಗಳಿಗೆ ಸೂಚನೆ ನೀಡಲಾಗಿದೆ ಎನ್ನುವ ಎಚ್ಚರಿಕೆಯನ್ನು ಕೊಡಬಯಸುತ್ತೇನೆ. ಸಾರ್ವಜನಿಕರು ಭಾರತ ಸರ್ಕಾರ ಮತ್ತು  ಕರ್ನಾಟಕ ಸರ್ಕಾರ ಸೂಚಿಸಿರುವ ಎಲ್ಲಾ ನಿಯಮಗಳನ್ನು  ಪಾಲಿಸಿ ಮನೆಯಲ್ಲೇ ಇದ್ದು ಸಹಕರಿಸಬೇಕು ಎಂದು ಮತ್ತು ಏಪ್ರಿಲ್ 5ರಂದು ರಾತ್ರಿ  9 ಗಂಟೆಗೆ   ಪ್ರಧಾನ ಮಂತ್ರಿಗಳು ಹೇಳಿರುವ ಸೂಚನೆಯನ್ನು ತಪ್ಪದೇ ಪಾಲಿಸಿ  ಸರ್ಕಾರದೊಂದಿಗೆ ಸಹಕರಿಸಬೇಕು ಎಂದು ಅವರು ತಿಳಿಸಿದ್ದಾರೆ.