ಈ ದಿನ ಲಾರಾ ಟೆಸ್ಟ್ ಇನಿಂಗ್ಸ್ ನಲ್ಲಿ 400 ರನ್ ಗಳಿಸಿದ ಸುದಿನ

ನವದೆಹಲಿ, ಏ 12,ಹದಿನಾರು ವರ್ಷಗಳ ಹಿಂದಿನ ಈ ದಿನ(ಏಪ್ರಿಲ್ -12) ವೆಸ್ಟ್ ಇಂಡೀಸ್ ದಿಗ್ಗಜ ಬ್ರಿಯಾನ್ ಲಾರಾ ಟೆಸ್ಟ್ ಕ್ರಿಕೆಟ್ ನ ಇನಿಂಗ್ಸ್ ಒಂದರಲ್ಲಿ 400 ರನ್ ಪೇರಿಸಿದ ವಿಶ್ವದ ಮೊದಲ ಹಾಗೂ ಏಕೈಕ ಬ್ಯಾಟ್ಸ್ ಮನ್ ಎಂಬ ವಿಶ್ವ ದಾಖಲೆ ನಿರ್ಮಿಸಿದ ಸುದಿನ.ಆಂಟಿಗುವಾದಲ್ಲಿ ಡ್ರಾದೊಂದಿಗೆ ಕೊನೆಗೊಂಡ ಈ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ ವಿಂಡೀಸ್ ನಾಯಕ ಲಾರಾ ಇಂಗ್ಲೆಂಡ್ ವಿರುದ್ಧ 582 ಎಸೆತಗಳಲ್ಲಿ ಅಜೇಯ 400 ರನ್ ಪೇರಿಸಿದರು. ಆದರೆ ಈ ಇಂಗ್ಲೆಂಡ್ ಈ ಸರಣಿಯನ್ನು 3-0 ಅಂತರದಲ್ಲಿ ವಶಪಡಿಸಿಕೊಂಡಿತು.
ಪರ್ತ್ ನಲ್ಲಿ ಜಿಂಬಾಬ್ವೆ ವಿರುದ್ಧ 380 ರನ್ ಕಲೆಹಾಕಿದ ಆಸ್ಟ್ರೇಲಿಯಾದ ಮ್ಯಾಥ್ಯೂ ಹೇಡನ್, ಈ ಪಂದ್ಯಕ್ಕೆ ಆರು ತಿಂಗಳ ಮುಂಚೆ ಲಾರಾ ಅವರ ಹಿಂದಿನ  ಟೆಸ್ಟ್ ನ ಅತ್ಯಧಿಕ ದಾಖಲೆ ಮೊತ್ತವನ್ನು ಮುರಿದು ಹಾಕಿದ್ದರು.ಪಂದ್ಯದ ಮೊದಲ ದಿನದಂತ್ಯಕ್ಕೆ 86 ರನ್ ಗಳಿಸಿದ್ದ ಲಾರಾ, ದ್ವಿತೀಯ ದಿನದಂತ್ಯಕ್ಕೆ 313 ರನ್ ಪೇರಿಸಿದರು. ನೂತನ ಮೈಲುಗಲ್ಲು ಸ್ಥಾಪಿಸುವ ಹಾದಿಯಲ್ಲಿ ಲಾರಾ 127 ಮತ್ತು 373 ರನ್ ಗಳಿಸಿದ್ದ ವೇಳೆ ಎರಡು ಬಾರಿ ಜೀವದಾನ ಪಡೆದಿದ್ದರು. ರಾಮ್ ನರೇಶ್ ಸರ್ವಣ್ ಜತೆಗೆ 3ನೇ ವಿಕೆಟ್ ಗೆ 232 ರನ್ ಜತೆಯಾಟ ನಿರ್ವಹಿಸಿದ ಲಾರಾ, ನಂತರ ರಿಡ್ಲೀ ಜಾಕೊಬ್ಸ್ ಜತೆ ಅಜೇಯ 282 ರನ್ ಜತೆಯಾಟ ನಿರ್ವಹಿಸಿ ಮೂರನೇ ದಿನದ ಭೋಜನ ವಿರಾಮದ ವೇಳೆೆಗೆ 400 ರನ್ ಗಳ ಮೈಲುಗಲ್ಲು ಮುಟ್ಟಿದ್ದರು.13 ತಾಸು ಕ್ರೀಸ್ ನಲ್ಲಿದ್ದ ಲಾರಾ ಅವರ ಈ ಇನಿಂಗ್ಸ್ ನಲ್ಲಿ 43 ಫೋರ್ ಮತ್ತು ನಾಲ್ಕು ಸಿಕ್ಸರ್ ಇದ್ದವು.