ಗ್ರಂಥಪಾಲಕರ ಕೆಲಸ 8 ಗಂಟೆ ಮಾಡುವ ಜೊತೆಗೆ ವೇತನ 13200 ರೂ.ಗೆ ಏರಿಸಲು ಚಿಂತನೆ: ಕೆ.ಎಸ್.ಈಶ್ವರಪ್ಪ

ಬೆಂಗಳೂರು,‌ ಮಾ 20, ಗ್ರಾಮ‌ ಪಂಚಾಯಿತಿಯಲ್ಲಿರುವ ಗ್ರಂಥಾಲಯವನ್ನು ಯಾವುದೇ ಕಾರಣಕ್ಕೂ ಮುಚ್ಚುವುದಿಲ್ಲ. ಬದಲಿಗೆ ಅದರ ಉನ್ನತೀಕರಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಮೇಲ್ಮನೆಗೆ ಸ್ಪಷ್ಟಪಡಿಸಿದ್ದಾರೆ.
ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿಯ ಸುನೀಲ್ ಸುಬ್ರಹ್ಮಣ್ಯ , ಗ್ರಾಮೀಣ ಭಾಗದಲ್ಲಿ ಗ್ರಂಥಪಾಲಕರಿಗೆ ವೇತನ ಹೆಚ್ಚಿಸಬೇಕು. ಅವರ ಕೆಲಸದ ಸಮಯವನ್ನು ಹೆಚ್ಚಿಸಲು ಸರ್ಕಾರ ತೆಗೆದುಕೊಂಡ ಕ್ರಮಗಳೇನು ಎಂದು ಕೇಳಿದ ಪ್ರಶ್ನೆಗೆ ಈಶ್ವರಪ್ಪ ಉತ್ತರಿಸಿದರು.
ಬಿಜೆಪಿಯ ಆಯನೂರು ಮಂಜುನಾಥ್ ಮಾತನಾಡಿ, ಕನಿಷ್ಠ ವೇತನ ಎನ್ನುವುದು ಕನಿಷ್ಠ ಉಡುಪು ಎಂಬರ್ಥವಲ್ಲ. ಬದುಕಲು ಬೇಕಾದ ವೇತನ ಎಂದರ್ಥ ಎಂದು ಪೂರಕವಾಗಿ ಮಾತನಾಡಿದರು. ತೇಜಸ್ವಿನಿಗೌಡ ಸಹ ಇದಕ್ಕೆ ಧ್ವನಿಗೂಡಿಸಿ ಗ್ರಂಥಪಾಲಕರ ವೇತನ ಹೆಚ್ಚಿಸಬೇಕು ಎಂದು ತಾವು ಸಹ ಸರ್ಕಾರಕ್ಕೆ ಮನವಿ ಮಾಡುವುದಾಗಿ ಹೇಳಿದರು‌.
ಜೆಡಿಎಸ್‌ನ ಶ್ರೀಕಂಠೇಗೌಡ ಮತ್ತು ಕೆಲ ಕಾಂಗ್ರೆಸ್ ಸದಸ್ಯರು ಈ ವೇಳೆ ಮಾತನಾಡಿ, ಗ್ರಾಮ ಪಂಚಾಯಿತಿಯಲ್ಲಿರುವ ಗ್ರಂಥಾಲಯವನ್ನು ಮುಚ್ಚುವುದಾಗಿ ನಿಮ್ಮವರೇ ಹೇಳುತ್ತಿದ್ದರು ಎಂದರು.
ಆಗ ಮಾತನಾಡಿದ ಈಶ್ವರಪ್ಪ, ನೀವು ಪ್ರಸ್ತಾಪ ಮಾಡುತ್ತಿರುವುದಕ್ಕೂ ನನಗೂ ಸಂಬಂಧವಿದೆ. ನಮ್ಮಮ್ಮ ಅಡಿಕೆ ಮಂಡಿಯಿಂದ ಕೆಲಸ ಮಾಡಿಕೊಂಡು ನಮ್ಮನ್ನು ಸಾಕಿರುವುದರಿಂದ ನನಗೂ ಆ ಕಷ್ಟ ಗೊತ್ತಿದೆ. ವೇತನ 13200 ರೂ ಮಾಡಬೇಕು, ಅದರ‌ ಜೊತೆಗೆ ಗ್ರಂಥಪಾಲಕರ ಸೇವಾ ಅವಧಿ 8 ಗಂಟೆಗೆ ವಿಸ್ತರಿಸುವಂತೆ ಆರ್ಥಿಕ ಇಲಾಖೆಗೆ ಸಲ್ಲಿಸಲಾಗಿತ್ತು‌  ಆದರೆ ಅವರು ಎರಡಕ್ಕೂ ಒಪ್ಪಿಲ್ಲ. ಗ್ರಂಥಪಾಲಕರ ನೋವು, ನೋವು ಅನುಭವಿಸಿದವರಿಗೆ ಗೊತ್ತಾಗುತ್ತದೆಯೇ ಹೊರತು ಹೊಟ್ಟೆ ತುಂಬಿದವರಿಗೆ ಅಲ್ಲ. ಫೈನಾನ್ಸ್ ಡಿಪಾರ್ಟ್ ಮೆಂಟ್‌ ಒಪ್ಪಿಗೆ ಪಡೆಯಲು ಮುಖ್ಯಮಂತ್ರಿ ಜೊತೆ ನಾನು ಕೂಡ ಕೆಲಸ ಮಾಡುತ್ತೇನೆ ಎಂದರು.ಇದು ದೇವರು ಕೊಟ್ಟರೂ ಪೂಜಾರಿ ಕೊಡಲ್ಲ ಎನ್ನುವಂತೆ ಎಂದಾಗ ಈಶ್ವರಪ್ಪ, ದೇವೇಗೌಡರು ಪೂಜಾರಿಯನ್ನು ಪೂಜೆ ಮಾಡುವುದಿಲ್ಲ. ದೇವರನ್ನಷ್ಟೇ ಪೂಜೆ ಮಾಡುತ್ತಾರೆ ಎಂದು ಹಾಸ್ಯ ಮಾಡಿದರು.ಆಗ ಜೆಡಿಎಸ್‌ನ ಮರಿತಿಬ್ಬೇಗೌಡ, ಈಶ್ವರಪ್ಪ ಅವರ ಮಾತು ನಡೆಯುವುದಿಲ್ಲ. ಅವರು ಮುಖ್ಯಮಂತ್ರಿಗಳನ್ನು ಕೇಳುವಂತಹ ಸ್ಥಿತಿ ಬಂದಿದೆ ಎಂದರೆ ಏನರ್ಥ ಎಂದು ಕುಟುಕಿದರು. ಆಗ ಸಚಿವ ಸಿ.ಟಿ‌.ರವಿ, 2019ರಲ್ಲಿ ನಿಮ್ಮದೇ ಸರ್ಕಾರ ಇದ್ದಾಗ ಏಕೆ ಗ್ರಂಥಪಾಲಕರ ವೇತನ ಹೆಚ್ಚಿಸಲಿಲ್ಲ ಎಂದು ತಿರುಗೇಟು ನೀಡಿದರು. ಈ ವೇಳೆ ಸದನ ಸ್ವಲ್ಪ ಗದ್ದಲಕ್ಕೆ ತಿರುಗುತ್ತಿದ್ದಂತೆ ಸಭಾಪತಿ ಪ್ರತಾಪ್‌ಚಂದ್ರ ಶೆಟ್ಟಿ ಮುಂದಿನ ಪ್ರಶ್ನಾವಳಿಗೆ ಮುಂದಾದರು.