ರಾಜ್ಯದ ಎಲ್ಲಾ ವಿವಿಗಳಲ್ಲಿ ಸಂಸ್ಕೃತ -ಸಂಗೀತ ವಿಭಾಗ ತೆರೆಯಲು ಚಿಂತನೆ; ಡಾ.ಎನ್.ಅಶ್ವತ್ಥ ನಾರಾಯಣ

ಮತ್ತೂರು,ಫೆ.13:  ಎಲ್ಲ ವಿಶ್ವವಿದ್ಯಾಲಯಗಳಲ್ಲಿ ಸಂಸ್ಕೃತ -ಸಂಗೀತ ವಿಭಾಗ ತೆರೆಯುವ ಚಿಂತನೆ ನಡೆಸಲಾಗಿದೆ ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್‌ ಅಶ್ವತ್ಥನಾರಾಯಣ ತಿಳಿಸಿದ್ದಾರೆ.

ಶಿವಮೊಗ್ಗದ ಸಂಸ್ಕೃತ ಗ್ರಾಮ ಎಂದೇ ಕರೆಸಿಕೊಳ್ಳುವ ಮತ್ತೂರಿಗೆ ಗುರುವಾರ ಭೇಟಿ ನೀಡಿದ ಸಚಿವರು, ಅಲ್ಲಿ ಸಂಸ್ಕೃತ ವಿದ್ವಾಂಸರನ್ನು ಭೇಟಿ ಮಾಡಿ ಮಾತನಾಡಿದರು.

ವಿದೇಶಗಳಲ್ಲಿ ಇಂದು ಸಂಸ್ಕೃತದ ಬಗ್ಗೆ ವಿಶೇಷ ಆಸಕ್ತಿ ಮೂಡಿದೆ. ನಾವು ನಮ್ಮ ಭಾಷೆಯನ್ನು ಕಡೆಗಣಿಸುವಂತಿಲ್ಲ. ನಮ್ಮ ಸರ್ಕಾರ ಮಾಗಡಿಯಲ್ಲಿ ಸಂಸ್ಕೃತ ವಿಶ್ವವಿದ್ಯಾಲಯ ಸ್ಥಾಪನೆಗೆ ಮುಂದಾಗಿದೆ. ಈ  ಹಿಂದೆ ಇಂಥ ಪ್ರಯತ್ನ ನಡೆದಿದ್ದರೂ ಅದು ಕಾರ್ಯರೂಪಕ್ಕೆ ಬಂದಿರಲಿಲ್ಲ. ಸಂಸ್ಕೃತ ವಿಶ್ವವಿದ್ಯಾಲಯಕ್ಕೆ ಈಗಾಗಲೇ 100 ಎಕರೆ ಜಾಗ ನಿಗದಿಯಾಗಿದೆ. ಇದಲ್ಲದೇ ಎಲ್ಲ ವಿವಿಗಳಲ್ಲೂ ಸಂಸ್ಕೃತ- ಸಂಗೀತ ವಿಭಾಗ ತೆರೆಯುವ ಚಿಂತನೆ ಇದೆ ಎಂದು ಸಚಿವರು ತಿಳಿಸಿದರು.

ಆರ್‌ಎಸ್‌ಎಸ್‌ ದಕ್ಷಿಣ ಪ್ರಾಂತ ಬೌದ್ಧಿಕ ಪ್ರಮುಖ್‌ ಪಟ್ಟಾಭಿರಾಮ ಮಾತನಾಡಿ, ಪ್ರಧಾನಿ ಮೋದಿ ಅವರಿಂದ ಸೈ ಎನಿಸಿಕೊಳ್ಳುವುದು ಅಷ್ಟು ಸುಲಭವಲ್ಲ. ಪ್ರಧಾನಿಯ ಮೆಚ್ಚುಗೆಗೆ ಪಾತ್ರರಾಗಿ, ಪಕ್ಷದ ಕೇಂದ್ರ ನಾಯಕರ ನಿರ್ಧಾರದಂತೆ ಉಪಮುಖ್ಯಮಂತ್ರಿ ಆದವರು ನಮ್ಮ ಅಶ್ವತ್ಥನಾರಾಯಣ ಎಂದು ಆವರು ಮೆಚ್ಚುಗೆ ವ್ಯಕ್ತಪಡಿಸಿದರು.

ಜನರ ಎಲ್ಲ ಬೇಡಿಕೆಗಳನ್ನು ಈಡೇರಿಸಲು ಸಾಧ್ಯವಾಗದಿದ್ದರೂ, ಆ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವ ಸಾತ್ವಿಕ ರಾಜಕಾರಣಿ ಅಶ್ವತ್ಥನಾರಾಯಣ. ಎಂಬಿಬಿಎಸ್‌ ಪದವಿಧರರಾದ ಅವರು ರಾಜಕೀಯಕ್ಕೆ ಬಂದು ಒಳ್ಳೆಯ ಹೆಸರು ಗಳಿಸಿದ್ದಾರೆ. ಶಿಕ್ಷಣ ಸಂಸ್ಥೆಯನ್ನು ನಡೆಸುತ್ತಿರುವ ಇವರು ವಿಶ್ವವಿದ್ಯಾಲಯದ ಸಿಂಡಿಕೇಟ್‌ ಸದಸ್ಯರಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.  ಈ ಎಲ್ಲ ಅನುಭವ ಈಗ ಅವರಿಗೆ ನೆರವಾಗುತ್ತಿದೆ ಎಂದು ಅವರು ತಿಳಿಸಿದರು. 

ಈ ಸಂದರ್ಭದಲ್ಲಿ ಕುವೆಂಪು ವಿಶ್ವ ವಿದ್ಯಾಲಯದಲ್ಲಿ 'ಶಂಕರಾಚಾರ್ಯ ಅದ್ವೈತ ಅಧ್ಯಯನ ಕೇಂದ್ರ' ಸ್ಥಾಪಿಸುವಂತೆ ಪಟ್ಟಾಭಿರಾಮ ಅವರು ಡಾ. ಅಶ್ವತ್ಥನಾರಾಯಣ ಅವರ ಬಳಿ ಮನವಿ ಮಾಡಿದರು.