ಬೆಂಗಳೂರು,ಫೆ.5, ಮಾಗಡಿ ರೈತರಿಂದ ಅವರೆ ಬೇಳೆ ಹಾಗೂ ಇದರಿಂದ ತಯಾರಿಸಲಾದ ತಿಂಡಿ ತಿನಿಸುಗಳ ಮೇಳವನ್ನು ಫೆ.6 ರಿಂದ 16ರ ವರೆಗೆ ಸಜ್ಜನ್ ರಾವ್ ಸರ್ಕಲ್ ನಲ್ಲಿ ನಡೆಸಲಾಗುತ್ತದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಿಳಿಸಿದೆ. ಸುದ್ದಿ ಗೋಷ್ಠಿಯಲ್ಲಿ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ಈ ಮೇಳವನ್ನು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್ ದೊರೆಸ್ವಾಮಿ ಉದ್ಘಾಟಿಸಲಿದ್ದು, ಮೇಳವು ರೈತರು ಮತ್ತು ಗ್ರಾಹಕರ ನಡುವೆ ನಡೆಯಲಿದೆ. ಅವರೆ ಬೇಳೆಯಿಂದ ತಯಾರಿಸಿದ 100 ಬಗೆಯ ತಿಂಡಿ ತಿನಿಸುಗಳನ್ನು ಮೇಳದಲ್ಲಿ ಇಡಲಾಗುವುದು ಎಂದರು.ರೈತರು ಬೆಳೆದ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುವುದು ಸರ್ಕಾರದ ಜವಾಬ್ದಾರಿ. ಆದರೆ ಸರ್ಕಾರ ರೈತರನ್ನು ಉತ್ತೇಜಿಸುವ ಬದಲು ಅವರ ಅನ್ನ ಕಸಿದುಕೊಳ್ಳುವ ಕೆಲಸ ಮಾಡುತ್ತಿವೆ. ಸಜ್ಜನ್ ರಾವ್ ಸರ್ಕಲ್ ನಲ್ಲಿ ರೈತರು ಮೇಳ ನಡೆಸದಂತೆ ಕೆಲ ಕಾಣದ ಕೈಗಳು ತಡೆ ಹಿಡಿದಿದ್ದು, ಇದು ರೈತರ ಹೊಟ್ಟೆ ಮೇಲೆ ಹೊಡೆಯುವ ಕೆಲಸ ಮಾಡುತ್ತಿದೆ. ಒಂದು ವೇಳೆ ಮೇಳ ನಡೆಯುವುದನ್ನು ತಡೆ ಹಿಡಿದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು. ರೈತರು ಪ್ರವಾಹ ಹಾಗೂ ಬರದಿಂದ ಇನ್ನೂ ಚೇತರಿಸಿಕೊಳ್ಳದೆ ಸಂಕಷ್ಟ ಎದುರಿಸುತ್ತಿದ್ದು, ಸರ್ಕಾರಕ್ಕೆ ರೈತರ ಬಗ್ಗೆ ಕಾಳಜಿ ಇದ್ದರೆ ರೈತರ 1400 ಕೋಟಿ ಸಾಲ ಮನ್ನಾ ಮಾಡಲಿ ಎಂದು ಒತ್ತಾಯಿಸಿದರು.