ತಾಯಿ ಎಂದ ತಕ್ಷಣ ನಮಗೆ ನೆನಪಾಗುವುದು ನಮ್ಮನ್ನು ಹೆತ್ತು ಸಲಹಿದವಳು. ಅವಳು ನೀಡಿದ ಅಕ್ಕರೆ, ಮಮತೆ, ಪೋಷಣೆ ಎಲ್ಲವೂ ಬೇರೆ ಯಾರಿಂದಲೂ ನಿರೀಕ್ಷಿಸಲು ಸಾಧ್ಯವೇ ಇಲ್ಲ. ಅಮ್ಮ ಎನ್ನುವುದೊಂದು ಅದ್ಭುತ ಜಗತ್ತು. ಅಂಥಹ ಅಮ್ಮನ ಬಗ್ಗೆ ನಾವು ಎರಡು ಮಾತಿನಲ್ಲಿ ಇಷ್ಟೇ ಎಂದು ಹೇಳಲು ಸಾಧ್ಯವೇ ಇಲ್ಲ. ಅಮ್ಮನಂತೆ ಬೇರೆ ಯಾರೂ ಸಹ ನಮ್ಮ ಬೆನ್ನೆಲುಬಾಗಿ ನಿಲ್ಲಲು ಸಾಧ್ಯ ತಂದೆಯೂ ಜೊತೆಗಿದ್ದಾನಲ್ಲ ಎಂದು ಹೇಳಬಹುದು. ಹೌದು ಒಬ್ಬ ಜವ್ದಾರಿಯುತ ತಂದೆ ತನ್ನ ಮಕ್ಕಳನ್ನು ತಾಯಿಯಂತೆಯೆ ಪೋಷಣೆ ಮಾಡುತ್ತಾನೆ. ಆದರೆ ಎಲ್ಲ ತಂದೆಯೂ ತಾಯಿಯಂತಾಗಲಾರ. ಆದರೆ ತಾಯಿ ತನ್ನ ಮಗುವನ್ನು ಅವಚಿಕೊಳ್ಳುವಷ್ಟು ತಂದೆ, ಸಹೋದರರು, ಬಂಧುಗಳು ಅಪ್ಪಿಕೊಳ್ಳಲಾರರು. ಹಾಗಾಗಿ ಅಮ್ಮನಿಗೆ ಜಗತ್ತಿನಲ್ಲೇ ಸರ್ವಶ್ರೇಷ್ಠತೆ ಜಾಗದಲ್ಲಿಟ್ಟು ನೊಡುತ್ತೇವೆ.
"ನನ್ನ ಅಮ್ಮನ ಪ್ರಾರ್ಥನೆಯನ್ನು ನಾನು ನೆನಪಿಸಿಕೊಳ್ಳುತ್ತೇನೆ. ಮತ್ತು ಅದು ನನ್ನನ್ನು ಸದಾ ಕಾಲ ಹಿಂಬಾಲಿಸುತ್ತದೆ. ನನ್ನ ಈವರೆಗಿನ ಜೀವನದಲ್ಲಿ ಆ ಅಮ್ಮನ ಪ್ರಾರ್ಥನೆಯೇ ಬೆಂಗಾವಲು" ಎಂದು ಅಬ್ರಹಾಂ ಲಿಂಕನ್ ಹೇಳುತ್ತಾರೆ. ನಿಜ ಕೇವಲ ಲಿಂಕನ್ ಮಾತ್ರವಲ್ಲ ಪ್ರತೀ ಮಗುವು ಕಷ್ಟದಲ್ಲಿ ಸುಖದಲ್ಲಿ ಮೊದಲು ಹೇಳುವ ಶಬ್ದವೇ ಅಮ್ಮ. ಆ ಅಮ್ಮ ಯಾವತ್ತೂ ತನ್ನ ಮಗುವಿಗೆ ಒಳ್ಳೆದನ್ನು ಬಯಸುವಳು. ಕ್ಷಣ ಮಾತ್ರಕ್ಕೂ ಆಕೆ ನನ್ನ ಮಗುವಿಗೆ ಕೆಡುಕೆನ್ನುವದನ್ನು ಯೋಚಿಸಲಾರಳು. ಅವಳು ದಿನವೂ ನಮ್ಮೊಳಗೆ ಧನಾತ್ಮಕ ಯೋಚನೆ ಮೂಡುವಂತೆ ನೋಡಿಕೊಳ್ಳುವಳು. ಅವಳು ಪ್ರಾಥರ್ಿಸುವಾಗ ಗಮನವಿಟ್ಟು ನೋಡಿ ತನಗಾಗಿ ಏನನ್ನು ದೇವರಲ್ಲಿ ಕೇಳುವುದಿಲ್ಲ. ತನ್ನ ಮಕ್ಕಳಿಗೆ ಆಯುಷ್ಯ ಆರೋಗ್ಯ, ವಿದ್ಯೆ ಕರುಣಿಸು ತಂದೆ ಎನ್ನುತ್ತಾಳೆ. ಅಂದರೆ ಮಕ್ಕಳ ಶ್ರೇಯಸ್ಸನ್ನು ಬಯಸುವವಳು. ಅಂತ ಅಮ್ಮನೊಗೊಂದು ಬರವಣಿಗೆಯಲ್ಲಿ ನಮನ ಸಲ್ಲಿಸುವುದು ಸುಲಭವಲ್ಲ.
"ಅವ್ವ ನನ್ನವ್ವ ಎನ್ನುವಂಥ ಲಲಿತ ಪ್ರಬಂಧವೊಂದು ಕೆಲವೇ ದಿನಗಳ ಹಿಂದೆ ನನ್ನ ಕೈ ಸೇರಿತು. ಗುಂಡೇನಟ್ಟಿ ಮಧುಕರ ಅವರ ಸಂಪಾದಕೀಯದಲ್ಲಿ ಬಂದ ಪುಸ್ತಕವಿದು. 25 ಲೇಖಕರಿಂದ ಅಮ್ಮನ ಬಗ್ಗೆ ಲಲಿತ ಪ್ರಭಂಧವನ್ನು ಇವರು ಬರೆಸಿದ್ದಾರೆ. ಅಮ್ಮನ ಬಗ್ಗೆ ಗೌರವ, ಪ್ರೀತಿ, ವಾತ್ಸಲ್ಯದ ಬಗ್ಗೆ ಹೃದಯದಾಳದಲ್ಲಿ ಇದ್ದಷ್ಟನ್ನು ಕಾಗದಕ್ಕೆ ಇಳಿಸಲು ಸಾಧ್ಯವಾಗದೇ ಹೋಗುತ್ತದೆ. ಅಷ್ಟು ಅವಿರತ ಪ್ರೇಮಮಯಿ ಆಕೆ. ಆದರೆ ಅದೇ ಅಮ್ಮನ ಬಗ್ಗೆ ಒಂದು ಲಲಿತ ಪ್ರಭಂಧ ಬರೆಯುವುದು ಸಾಮಾನ್ಯ ಕೆಲಸವಲ್ಲ. ಅವ್ವ ನನ್ನವ್ವ ಎನ್ನುವ ಎನ್ನುವಂಥ ಹೆಸರೇ ಆ ಕೃತಿಯ ಒಂದು ತೂಕ. ಅದರಲ್ಲಿ ಬರೆದ ಎಲ್ಲ ಪ್ರಬಂಧವೂ ಒಂದಕ್ಕಿಂತ ಒಂದರಂತೆ ವಿಭಿನ್ನವಾಗಿದೆ. ಪ್ರತೀ ಲೇಖಕ ಬೇರೆ ಬೇರೆ ವಿಷಯದ ಮೇಲೆ ತಾಯಿಯನ್ನೇ ಮುಖ್ಯ ವೇದಿಕೆಯಾಗಿಟ್ಟುಕೊಂಡು ಬರೆದಿದ್ದರೂ ಸಹ, ಓದುತ್ತ ಹೋದಂತೆ ಎಂದೋ ಎಲ್ಲೋ ನನ್ನ ತಾಯಿಯೂ ಹೀಗೆ ನಡೆದುಕೊಂಡಿದ್ದಳು, ನನ್ನನ್ನು ಜೋಪಾನ ಮಾಡಿದ್ದಳು ಎನ್ನಿಸದೇ ಹೋಗದು. ಅಂತಹ ಸಾಹಿತ್ಯವನಯೀ ಕೃತಿ ಕಟ್ಟಿಕೊಟ್ಟಿದೆ.
ತಿಳಿ ಹಾಸ್ಯವನ್ನು ಪ್ರಸ್ತುತಪಡಿಸುತ್ತ ಗಂಭೀರವಾದ ಸಂಗತಿಯನ್ನು ಬಿಚ್ಚಿಡುತ್ತದೆ. ಒಂದೊಂದು ಕಥೆಯೂ ವಾಸ್ತವವನ್ನು ಹೇಳುತ್ತದೆ. ಅಮ್ಮ ಮತ್ತು ಮಗುವಿನ ಬಾಂಧ್ಯವವನ್ನು ಚೆಂದವಾಗಿ ಎಲ್ಲ ಸಾಹಿತಿಗಳು ಜೋಡಿಸಿದ್ದಾರೆ. ಇಡೀ ಪುಸ್ತಕವನ್ನು ಓದಿ ಮುಗಿಸಿದಾಗ ಅಮ್ಮನ ಮೇಲಿದ್ದ ಅಕ್ಕರೆ ನೂರುಮಡಿ ಹೆಚ್ಚಗಿದ್ದು ಸುಳ್ಳಲ್ಲ.
ಓದಲಾಗದ ಕೂಲಿ ಮಕ್ಕಳಿಗೆ ಇನ್ನೊಬ್ಬ ತಾಯಿ ಹೊಟ್ಟೆಗೆ ಕೊಟ್ಟು ಶಾಲೆಗೆ ಸೇರಿಸಿದರೆ ಆ ಮಗುವು ಮತ್ತೆ ಶಾಲೆ ತಪ್ಪಿಸಿ ಕೂಲಿಯನ್ನೇ ಮಾಡಲು ಹೋಗುತ್ತದೆ. ಅಪ್ಪನೊಬ್ಬ ಪೋಲಿಸ್ ಆಫಿಸರ್ ಆದರೆ ಎದುರಿಗಿದ್ದವರು, ಮಕ್ಕಳು ಸಹ ಖೈದಿಗಳಂತೆ ಕಾಣುವುದಿದೆ. ತುಂಬಾ ಬಿಗುವಿನಲ್ಲಿ ಮಕ್ಕಳನ್ನು ಬೆಳೆಸಬೇಕು ಎನ್ನುವ ಅಪ್ಪನ ಕಠೋರತೆಯ ಜೊತೆ ಅಪ್ಪನ ಹಿಂದೆ ಅಮ್ಮನಾದವಳು ಮಕ್ಕಳಿಗೆ ಆಟ ಪಾಠ ಕಲಿಸುವುದರ ಜೊತೆ ವಿಶೇಷವಾದ ತರಗತಿಗಳಿಗೂ ಕಳಿಸುತ್ತಾಳೆ. ಇದರಿಂದ ಅಪ್ಪನಿಗೆ ಮುಕ್ಕಾಲು ಭಾಗ ಹೊರೆ ಕಡಿಮೆಯಾಗಿರುತ್ತದೆ. ಅಮ್ಮನೊಟ್ಟಿಗಿನ ಕೀಟಲೇ, ಹೊಡೆತ, ಹುಸಿ ಕೋಪ ಎಲ್ಲವನ್ನು ಒಂದೊಂದೇ ಎಳೆಯಾಗಿ ಬಿಚ್ಚಿಡುತ್ತ ಸಾಗುತ್ತದೆ ಈ ಪುಸ್ತಕ. ಈ ಒಂದು ಕೃತಿಯನ್ನು ಓದುವವರು ತಮ್ಮ ತಾಯಿಯನ್ನು ಮತ್ತೂ ಹೆಚ್ಚು ಪ್ರೀತಿಸುವಂತಾಗುತ್ತದೆ ಎಂಬುದರಲ್ಲಿ ಸಂಶಯವಿಲ್ಲ ಎಂದು ನಗೆ ಬರಹಗಾರರಾದ ಎಂ. ಎಸ್. ನರಸಿಂಹಮೂತರ್ಿಯವರು ತಮ್ಮ ಮುನ್ನುಡಿಯಲ್ಲಿ ಅಭಿಪ್ರಾಯ ಪಟ್ಟಿದ್ದಾರೆ.
ಈ ಕೃತಿ ಓದುವಾಗ ನೆನಪಿಗೆ ಬಂದಿದ್ದು ಪುನಿತ್ ರಾಜ್ಕುಮಾರ್ ಒಂದು ಸಂದರ್ಶನದಲ್ಲಿ ತಮ್ಮ ಅಮ್ಮನ ಬಗ್ಗೆ ಹೆಳಿದ ಮಾತು. ಅಮ್ಮ ಶ್ರಮಜೀವಿ. ಅಮ್ಮ ಸುಮ್ಮನೆ ಕುಳಿತಿದ್ದು ನಾನು ನೋಡಿಯೇ ಇಲ್ಲ. ಕೈಯ್ಯಲ್ಲಿ ಒಂದು ಪಸರ್ು ಹಿಡಿದುಕೊಂಡು ದಿನವೂ ಕೆಲಸ ಕೆಲಸ ಎಂದು ಓಡುತ್ತಿದ್ದರು. ನನ್ನೆಲ್ಲ ಕೀಟಲೇ, ಹಠವನ್ನು ಸಹಿಸಿಕೊಂಡು ಪ್ರೀತಿಯನ್ನು ಕೊಡುತ್ತ, ಒಂದು ಕಡೆ ಮನೆ, ಸಂಸಾರ, ಮಕ್ಕಳು, ಮತ್ತೊಂದು ಕಡೆ ಸಿನೆಮಾಗಳ ನಿಮರ್ಾಣ, ಅಪ್ಪಾಜಿಯ ಆರೈಕೆ ಹೀಗೆ ಎಲ್ಲವನ್ನು ನಿಭಾಯಿಸುತ್ತಿದ್ದರು. ಅಷ್ಟಾಗಿಯೂ ಒಂದು ಘಳಿಗೆಯೂ ಆಯಾಸ ಎಂದು ಕೂತಿಲ್ಲ. ಎಂದಿದ್ದರು. ನಿಜ ಅಮ್ಮನೆಂಬ ಅದ್ಭುತ ಎಂದಿದ್ದು ಇದಕ್ಕೆ. ಪ್ರತೀ ಅಮ್ಮನೂ ತನ್ನ ಆಸೆ ಆಂಕ್ಷೆಯನ್ನು ಬದಿಗಿಟ್ಟು ತನ್ನವರಿಗಾಗಿ ದುಡಿಯುತ್ತಾಳೆ. ಎಲ್ಲವೂ ತನ್ನದೆಂದೇ ಭಾವಿಸಿ ನಿಭಾಯಿಸುತ್ತಾಳೆ. ಆಕೆಯ ಪ್ರಪಂಚವೆಲ್ಲ ತನ್ನ ಸುತ್ತಲಿನವರೇ ಆಗುತ್ತಾರೆ. ಅದರ ಜೊತೆ ತನ್ನ ಮಗುವನ್ನು ಒಂದಿನಿತೂ ನಿಷ್ಕಾಳಜಿ ಮಾಡುವುದಿಲ್ಲ. ಎಲ್ಲಿಯೂ ತಪ್ಪು ದಾರಿಯನ್ನು ತೋರಿಸುವುದಿಲ್ಲ.
ಈ ಭೂಮಿಗೆ ಬಂದ ಪ್ರತೀ ಕಂದನ ಮೊದಲ ನುಡಿ ಅಮ್ಮ ಎನ್ನುವುದು. ತಾಯಿಗಿಂತ ಬಂಧುವಿಲ್ಲ ಉಪ್ಪಿಗಿಂತ ರುಚಿಯಿಲ್ಲ ಎನ್ನುವ ಗಾದೆ ಮಾತು ಇದೆ. ಉಪ್ಪಿಗೂ ತಾಯಿಗೂ ಎತ್ತಣದ ಸಂಬಂಧ ಕಲ್ಪಿಸಿದ್ದಾರೆ ನೋಡಿ. ಜೀವನದಲ್ಲಿ ಇವೆರಡಕ್ಕೂ ಅದೆಷ್ಟು ಪ್ರಾಮುಖ್ಯತೆಯನ್ನು ಕೊಡಬಹುದು ಎನ್ನುವದು ನಮಗೆ ಉಪ್ಪಿಲ್ಲದ ಅಡುಗೆ ಊಟ ಮಾಡಿದಾಗ ತಿಳಿಯುತ್ತದೆ. ಮನೆಯೇ ಮೊದಲ ಪಾಠ ಶಾಲೆ, ಜನನಿ ಮೊದಲ ಗುರುವು ಎನ್ನುವ ಮಾತು ಕೂಡ ಅಷ್ಟೆ ಸತ್ಯ. ಅವಳಿಲ್ಲದಿದ್ದರೆ ಬಹುಶಹ ಜಗತ್ತಿನ ಯಾವ ಮಕ್ಕಳು ಸ್ಪಷ್ಟವಾದ ಮಾತು, ನಡೆ ನುಡಿಯನ್ನು ಕಲಿಯುತ್ತಲೇ ಇರಲಿಲ್ಲ ಅನ್ನಿಸುತ್ತದೆ.
ಅವ್ವನೆಂಬ ನನ್ನವ್ವ
ಗಟ್ಟಿಗಿತ್ತಿಯ ಮಾಯಗಾತಿ
ಹಿಂಜರಿಯಳು, ಬೆದರಳು
ಕಷ್ಟಕ್ಕೆ ಕಲ್ಲಾಗುವಳು
ಕಂದಗೆ ಆಸರೆಯಾಗಿ
ಬಾನೆತ್ತರಕ್ಕೆ ಬೆಳೆಸುವಳು
ಜೀವಕ್ಕೆ ಹಾಲುಣಿಸಿ
ಭಾವಕ್ಕೆ ಬೆಸೆದುಕೊಂಡ
ಅವ್ವನೆಂಬ ಅಮೃತ ಧಾರ