ಜನೌಷಧಿ ಕೇಂದ್ರಗಳಲ್ಲಿ ಸಾರ್ವಜನಿಕ ಬೇಡಿಕೆಯ ಓಷಧಗಳ ದಾಸ್ತಾನು ಇರಲಿ : ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ

ಜನೌಷಧಿ ಕೇಂದ್ರಗಳಲ್ಲಿ ಸಾರ್ವಜನಿಕ ಬೇಡಿಕೆಯ ಓಷಧಗಳ ದಾಸ್ತಾನು ಇರಲಿ : ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ There should be a stock of medicines for public demand in Janaushadhi Kendras: MP Vishweshwar Hegde

ಕಾರವಾರ. ಫೆ.27 :- ಸಾರ್ವಜನಿಕರಿಗೆ ಅತ್ಯಂತ ಕಡಿಮೆ ಬೆಲೆಯಲ್ಲಿ ಓಷಧಗಳನ್ನು ಪೂರೈಸುವ ಜನೌಷಧ ಕೇಂದ್ರಗಳಲ್ಲಿ  ಸಾರ್ವಜನರಿಂದ ಹೆಚ್ಚು ಬೇಡಿಕೆ ಇರುವ ಓಷಧಗಳನ್ನು ದಾಸ್ತಾನು ಇಡುವಂತೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು. 

ಅವರು ಶುಕ್ರವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ದಿಶಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.  ಜನೌಷಧಿ ಕೇಂದ್ರಗಳಲ್ಲಿ ಸಾರ್ವಜನಿಕರಿಂದ  ಹೆಚ್ಚು ಬೇಡಿಕೆ ಇರುವ ಓಷಧಗಳ ಸಿಗುತ್ತಿಲ್ಲ ಎಂಬ ದೂರುಗಳಿದ್ದು, ಸಾರ್ವಜನಿಕರಿಗೆ ದುಬಾರಿ ಬೆಲೆಯ ಓಷಧಗಳನ್ನು ಕಡಿಮೆ ಬೆಲೆಯಲ್ಲಿ ನೀಡುವ ಉದ್ದೇಶದಿಂದಲೇ ತೆರದಿರುವ ಜನೌಷಧ ಕೇಂದ್ರಗಳಲ್ಲಿ ಯಾವುದೇ ಓಷಧಗಳ ಕೊರತೆಯಾಗದಂತೆ ಮತ್ತು ಪೂರೈಕೆಗೆ ಯಾವುದೇ ಅಡೆತಡೆ ಆಗದಂತೆ ನೋಡಿಕೊಳ್ಳುವಂತೆ ಆರೋಗ್ಯ ಇಲಾಖೆ ಮತ್ತು ಜಿಲ್ಲಾ ಓಷಧ ನಿಯಂತ್ರಕರಿಗೆ ನಿರ್ದೇಶನ ನೀಡಿದ ಸಂಸದರು, ಹೊಸ ಜನೌಷದ ಕೇಂದ್ರಗಳನ್ನು ತೆರೆಯಲು ಅಗತ್ಯ ಅನುಮತಿಯನ್ನು ನೀಡುವಂತೆ ತಿಳಿಸಿದರು. 

ಆರೋಗ್ಯ ಇಲಾಖೆಯ ಹೊಸ ಕಟ್ಟಡಗಳು ನಿರ್ಮಾಣವಾದ ನಂತರ  ಹಳೆಯ ಕಟ್ಟಡಗಳನ್ನು ಬಳಸದೇ ಇರುವುದರಿಂದ ಶಿಥಿಲಾವಸ್ಥೆಗೆ ತಲುಪುತ್ತಿದ್ದು, ಈ ಕಟ್ಟಡಗಳನ್ನು ಸಾಮಾಜಿಕ ಚಟುವಟಿಕೆಗಳ ಬಳಕೆಗೆ ನೀಡುವ ಕುರಿತಂತೆ  ಕ್ರಮ ಕೈಗೊಳ್ಳಿ, ಜಿಲ್ಲೆಯಲ್ಲಿ ಆಯುಷ್ಮಾನ್ ಕಾರ್ಡ್‌ ಮತ್ತು ಹಿರಿಯ ನಾಗರೀಕರಿಗೆ ನೀಡುವ  ವಯೋ ವಂದನಾ ಕಾರ್ಡ್‌ಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ವಿತರಿಸುವ ಕುರಿತಂತೆ ತಾಲೂಕುಮಟ್ಟದಲ್ಲಿ ಶಿಬಿರಗಳನ್ನು ಆಯೋಜಿಸುವಂತೆ ತಿಳಿಸಿದ ಅವರು, ಕುಮಟಾ ದಲ್ಲಿ ಟ್ರಾಮಾ ಸೆಂಟರ್ ನ್ನು  ತ್ವರಿತವಾಗಿ ಆರಂಭಿಸಲು ಕ್ರಮ ಕೈಗೊಳ್ಳಿ ಮತ್ತು ಕ್ರಿಮ್ಸ್‌ ಗೆ ಸರಬರಾಜಾಗಿರುವ ವೈದ್ಯಕೀಯ ಉಪಕರಣಗಳನ್ನು ಶೀಘ್ರದಲ್ಲಿ ಅಳವಡಿಸಿ, ಸಾರ್ವಜನಿಕರಿಗೆ ಅವುಗಳ ಪ್ರಯೋಜನ ಒದಗಿಸುವಂತೆ ತಿಳಿಸಿದರು.   

ಜಿಲ್ಲೆಯಲ್ಲಿನ ಮಳೆ ಮಾಪನ ಕೇಂದ್ರಗಳು ಸಮರ​‍್ಕವಾಗಿ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಪರೀಶೀಲಿಸಿ, ಅಗತ್ಯವಿರುವಲ್ಲಿ ಹೊಸ ಯಂತ್ರಗಳನ್ನು ಶೀಘ್ರದಲ್ಲಿ ಅಳವಡಿಸಬೇಕು, ಬೆಳೆ ವಿಮೆಯ ಮೊತ್ತ ರೈತರಿಗೆ ಸಮರ​‍್ಕವಾಗಿ ತಲುಪಬೇಕು, ಕೇಂದ್ರ ಪುರಸ್ಕೃತ ತೋಟಗಾರಿಕಾ ಇಲಾಖೆಯ ಯೋಜನೆಗಳನ್ನು ಎಲ್ಲಾ ರೈತರಿಗೆ ತಲುಪಿಸಬೇಕು ಎಂದ ಅವರು, ಕೃಷಿ ಇಲಾಖೆಯಿಂದ ರೈತರ ಪಂಪ್ ಸೆಟ್ ಗಳಿಗೆ ಸೋಲಾರ್ ಅಳವಡಿಸುವ ಕುಸುಮ್ ಬಿ ಯೋಜನೆಯ ಬಗ್ಗೆ ವ್ಯಾಪಕ ಪ್ರಚಾರ ಮತ್ತು ಮತ್ತು ಅರಿವು ಮೂಡಿಸಬೇಕು ಹಾಗೂ ಸೂರ್ಯ ಘರ್ ಯೋಜನೆಯನ್ನು  ಜಿಲ್ಲೆಯ ಸರಕಾರಿ ಕಚೇರಿಗಳಲ್ಲಿ ಅಳವಡಿಸಬೇಕು ಎಂದರು. 

ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಾದ ಗೋಕರ್ಣ, ಮುರುಡೇಶ್ವರ, ಬನವಾಸಿ, ಉಳವಿ ಸೇರಿದಂತೆ ಎಲ್ಲಾ ಸ್ಥಳಗಳಲ್ಲಿ ಕಂಡುಬರುವ ತ್ಯಾಜ್ಯವನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡುವಂತೆ ಸೂಚಿಸಿದ ಅವರು ನಗರಸ್ಥಳೀಯ ಸಂಸ್ಥೆಗಳ ತಮ್ಮ ವ್ಯಾಪ್ತಿಯ ಅಕ್ಕಪಕ್ಕದಲ್ಲಿನ  ಗ್ರಾಮಗಳ ತ್ಯಾಜ್ಯವನ್ನೂ ಕೂಡಾ  ಸಂಗ್ರಹಿಸಬೇಕು , ಪ್ರವಾಸಿ ತಾಣಗಳಲ್ಲಿ ತ್ಯಾಜ್ಯ ವಿಲೇವಾರಿಗೆ ವಿಶೇಷ ಕಾರ್ಯಕ್ರಮ ರೂಪಿಸಿ, ಅಭಿಯಾನ ನಡೆಸಬೇಕು. ನಗರ ಪ್ರದೇಶಗಲ್ಲಿ ಅವಶ್ಯವಿರುವ ಕಡೆಗಳಲ್ಲಿ ಮೊಬೈಲ್ ಟಾಯ್ಲೆಟ್ ಗಳನ್ನು ಅಳವಡಿಸುವಂತೆ  ಸೂಚಿಸಿದ ಅವರು, ಎಲ್ಲಾ ಸರಕಾರಿ ಕಚೇರಿಗಳಲ್ಲಿರುವ ಅನುಪಯುಕ್ತ ವಸ್ತು ಮತ್ತು ವಾಹನಗಳನ್ನು  ನಿಯಮಾನುಸಾರ ವಿಲೇವಾರಿ ಮಾಡಿ ಸ್ವಚ್ಛತೆ ಕಾಪಾಡುವಂತೆ ತಿಳಿಸಿದರು.  

ಕುಟುಂಬಕ್ಕೆ ಆಧಾರವಾಗಿದ್ದ ವ್ಯಕ್ತಿ ಮೃತಪಟ್ಟರೆ ನೀಡುವ ಪರಿಹಾರ ಯೋಜನೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಲ್ಲಿ 629 ಮಂದಿ ಮಾತ್ರ ಪಡೆದಿದ್ದು, ಈ ಯೋಜನೆಯ ಬಗ್ಗೆ ಸಾರ್ವಜನಿಕರಿಗೆ ಹೆಚ್ಚು ಅರಿವು ಮೂಡಿಸುವಂತೆ ಮತ್ತು ಅರ್ಜಿ ಸಲ್ಲಿಸುವ ವಿಧಾನಗಳನ್ನು ಸಾರ್ವಜನಿಕರಿಗೆ ತಿಳಿಸುವಂತೆ ಸಂಸದರು ತಿಳಿಸಿದರು, ಈ ಕುರಿತಂತೆ ಉತ್ತರಿಸಿದ ಜಿಲ್ಲಾಧಿಕಾರಿಗಳು ಈ ಯೋಜನೆಯ ನೆರವು ಪಡೆಯಲು ಸಂತ್ರಸ್ಥರ ಕುಟುಂಬದವರು ಜಿಲ್ಲೆಯ ಅಟಲ್ ಜನಸ್ನೇಹಿ ಕೇಂದ್ರ ಅಥವಾ ಗ್ರಾಮ ಒನ್ ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ ಎಂದರು.  

ವಸತಿ ಯೋಜನೆಗಳ ಕುರಿತು ಪರೀಶೀಲನೆ ನಡೆಸಿ, ಜಿಲ್ಲೆಯಲ್ಲಿ ಬಾಕಿ ಇರುವ ವಸತಿ ಯೋಜನೆಗಳನ್ನು ಶೀಘ್ರದಲ್ಲಿ ಮುಕ್ತಾಯಗೊಳಿಸಿ ಫಲಾನುಭವಿಗಳಿಗೆ ಮನೆ ವಿತರಿಸುವಂತೆ ಮತ್ತು ದಾಂಡೇಲಿಯಲ್ಲಿನ ವಸತಿ ನಿರ್ಮಾಣದ ಕುರಿತು ಸಮಸ್ಯೆಯನ್ನು ಇತ್ಯರ್ಥಪಡಿಸಿ ಅರ್ಹರಿಗೆ ಮನೆ ಮಂಜೂರು ಮಾಡಲು ಕ್ರಮ ಕೈಗೊಳ್ಳುವಂತೆ ತಿಳಿಸಿದರು.  

ಜಲ ಜೀವನ ಮಿಷನ್ ಯೋಜನೆಯಡಿ ಲೆಫ್ಟ್‌ ಓಟ್ ಹಳ್ಳಿಗಳಿಗೆ ಯೋಜನೆ ರೂಪಿಸಲು ಅಗತ್ಯ ಅನುಮೋದನೆ ಪಡೆದುಕೊಳ್ಳಿ, ಬಹುಗ್ರಾಮ ಕುಡಿಯುವ ನೀರು ಯೋಜನೆಗಳನ್ನು ಆದ್ಯತೆಯಲ್ಲಿ ಮುಕ್ತಾಯಗೊಳಿಸಿ. ಈಗಾಗಲೇ ಜಿಲ್ಲೆಯಲ್ಲಿ ಮುಕ್ತಾಯಗೊಂಡಿರುವ ಜಲ ಜೀವನ ಮಿಷನ್ ಕಾಮಗಾರಿಗಳ ಪ್ರಗತಿ ಬಗ್ಗೆ 2 ವಾರದಲ್ಲಿ ವರದಿ ನೀಡಿ,  ಪ್ರಸ್ತುತ ಬೇಸಿಗೆ ಆರಂಭವಾಗಿದ್ದು ನಗರ ಪ್ರದೇಶದಲ್ಲಿ ಮತ್ತು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡುಬಾರದಂತೆ ತಕ್ಷಣದಿಂದಲೇ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ತಿಳಿಸಿದರು. 

ಪಿಎಂ ವಿಶ್ವಕರ್ಮ ಯೋಜನೆಯಡಿ ಜಿಲ್ಲೆಯಲ್ಲಿ 7723 ಅರ್ಜಿಗಳು ಸಲ್ಲಿಕೆಯಾಗಿದ್ದು, 4281 ಅಭ್ಯರ್ಥಿಗಳಿಗೆ ರೂ.36.25 ಕೋಟಿ ಸಾಲ ಮಂಜೂರಾಗಿದ್ದು, 4321 ಟೂಲ್ ಕಿಟ್ ಗಳ ವಿತರಣೆ ಮಾಡಲಾಗಿದೆ. ಈ ಕಿಟ್ ಗಳ ಸದುಪಯೋಗ ಮತ್ತು ಈ ಯೋಜನೆಯಿಂದ ಫಲಾನುಭವಿಗಳ ಜೀವನಮಟ್ಟ ಸುಧಾರಣೆಯಾಗಿರುವ ಬಗ್ಗೆ ಪರೀಶೀಲಿಸಿ, ಕೇಂದ್ರ ಯೋಜನೆಗಳ ನೆರವು ಪಡೆಯಲು ಅರ್ಜಿ ಸಲ್ಲಿಸುವ ಫಲಾನುಭವಿಗಳ ಸಾಲದ ಅರ್ಜಿಗಳನ್ನು ತಿರಸ್ಕರಿಸದೇ ಶೀಘ್ರದಲ್ಲಿ ಮಂಜೂರು ಮಾಡುವಂತೆ ಲೀಡ್ ಬ್ಯಾಂಕ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. 

 ಲೋಕಸಭಾ ಸದಸ್ಯರ ಸ್ಥಳೀಯ ಪ್ರದೇಶಾಭಿವೃಧ್ದಿ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳನ್ನು ನಿಗಧಿತ ಅವಧಿಯೊಳಗೆ ಮುಕ್ತಾಯೊಳಿಸುವಂತೆ ತಿಳಿಸಿದ ಅವರು, ಜಿಲ್ಲೆಯಲ್ಲಿ ಪೋಕ್ಸೋ ಪ್ರಕರಣಗಳು ಹೆಚ್ಚುತ್ತಿದ್ದು ಜನವರಿ 2025 ರಿಂದ ಡಿಸೆಂಬರ್ 25 ರ ವರೆಗೆ 86 ಪ್ರಕರಣಗಳು ವರದಿಯಾಗಿದ್ದು, ಈ ಬಗ್ಗೆ ಶಾಲಾ ಕಾಲೇಜುಗಳಲ್ಲಿ ಹೆಚ್ಚಿನ ಜಾಗೃತಿ ಮತ್ತು ಅರಿವು ಕಾರ್ಯಕ್ರಮಗಳನ್ನು ಆಯೋಜಿಸುವಂತೆ ತಿಳಿಸಿದರು. 

ಮುಂದಿನ ಕಾಮನ್‌ವೆಲ್ತ್‌ ಮತ್ತು ಒಲಂಪಿಕ್ಸ್‌ ನಲ್ಲಿ ಜಿಲ್ಲೆಯ ಕ್ರೀಡಾಪಟುಗಳು ಭಾಗವಹಿಸಲು ಈಗಿನಿಂದಲೇ ಅರ್ಹರನ್ನು ಗುರುತಿಸಿ , ಅವರಿಗೆ ಅಗತ್ಯ ತರಬೇತಿ ಮತ್ತು ಎಲ್ಲಾ ರೀತಿಯ ಸೌಕರ್ಯಗಳನ್ನು ಒದಗಿಸುವಂತೆ ಕ್ರೀಡಾ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ ಅವರು, ಕೇಂದ್ರದ ಯೋಜನೆಗಳನ್ನು ರಾಷ್ಟ್ರಕ್ಕೇ ಮಾದರಿಯಾಗಿ ಜಿಲ್ಲೆಯಲ್ಲಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಎಲ್ಲಾ ಅಧಿಕಾರಿಗಳು ಕಾರ್ಯನಿರ್ವಹಿಸುವಂತೆ ತಿಳಿಸಿದರು. 

ಸಭೆಯಲ್ಲಿ ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯ, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ದೀಲೀಷ್ ಶಶಿ, ದಿಶಾ ನಾಮನಿರ್ದೇಶಿತ ಸದಸ್ಯರುಗಳು ಹಾಗೂ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.