ಪ್ರಕೃತಿ ವಿಕೃತಗೊಳಿಸಿದರೆ ಉಳಿಗಾಲವಿಲ್ಲ : ಡಾ.ನಾಯಕ

ಬಾಗಲಕೋಟೆ 20: ಮನುಷ್ಯ ತನ್ನ ದುರಾಸೆಯಿಂದ ಸುಂದರ ಪ್ರಕೃತಿಯನ್ನು ಹಾಳು ಮಾಡಿ ವಿಕೃತಗೊಳಿಸುತ್ತಿದ್ದು, ಇದು ಮುಂದುವರೆದರೆ ನಮಗೆಲ್ಲ ಉಳಿಗಾಲವಿಲ್ಲವೆಂದು ನಗರದ ವೈದ್ಯ ಡಾ.ಬಾಬುರಾಜೇಂದ್ರ ನಾಯಕ ಹೇಳಿದರು.

ನಗರದ ಕಾಳಿದಾಸ ಕಾಲೇಜಿನ ಸಭಾಭವನದಲ್ಲಿಂದು ಜಿಲ್ಲಾಡಳಿತ, ಸಾರಿಗೆ ಇಲಾಖೆ ಹಾಗೂ ಪೊಲೀಸ್ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ವಾಯು ಮಾಲಿನ್ಯ ನಿಯಂತ್ರಣ ಮಾಸಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಬೆಳೆಯುತ್ತಿರುವ ನಗರಗಳು, ಜನಸಂಖ್ಯೆ ಹಾಗೂ ಕೈಗಾರಿಕೆಗಳು ಅವಶ್ಯಕತೆಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಉಪಯೋಗಿಸಲ್ಪಡುವ ವಾಹನಗಳಿಂದಾಗಿ ಪರಿಸರ ದಿನೇ ದಿನೇ ಕ್ಷಿಣಿಸುತ್ತಿದ್ದು, ಈ ದುಷ್ಪರಿಣಾಮದಿಂದಲೇ ಕಾಲಕ್ಕೆ ಸರಿಯಾಗಿ ಮಳೆಯಾಗುತ್ತಿಲ್ಲ. ಅಲ್ಲದೇ ಪರಿಸರದಲ್ಲಾದ ಕಲುಷಿತದಿಂದ ಸಮೃದ್ದ ಬೆಳೆ ಬೆಳೆಯುತ್ತಿಲ್ಲವೆಂದರು.

ಕೈಗಾರಿಕೆಗಳು ಹೊರಹಾಕಲ್ಪಟ್ಟ ತ್ಯಾಜ್ಯದಿಂದ ನದಿ ನೀರು ಕಲುಷಿತಗೊಂಡು ಅನೇಕ ಜಲಚರಗಳು ಸಾಯುತ್ತಿವೆ. ಹಿಂದೆ ಇದೇ ಜಲಚರಗಳಿಂದ ನೀರು ಶುದ್ದಿಯಾಗಿರುತ್ತಿತ್ತು. ಅದು ಇಂದು ಇಲ್ಲ. ಕಾರಖಾನೆಗಳು ಉಗುಳುವ ಹೊಗೆ ವಿಪರೀತ ಸಂಖ್ಯೆಯಲ್ಲಿ ಬೆಳೆದಿರುವ ವಾಹನಗಳ ಹೊಗೆಯಿಂದಾಗಿ ಹೊಗೆಯುಕ್ತ ಪರಿಸರವಾಗಿದ್ದು, ಅದರಿಂದ ಎದೆ ರೋಗಗಳಿಗೆ ಮನುಷ್ಯ ಬಹುತೇಕ ತುತ್ತಾಗುತ್ತಿದ್ದಾನೆ ಎಂದರು.

ಪರಿಸರ ರಕ್ಷಣೆ ನಿಸರ್ಗ ಪೋಷಣೆ ಅದರಿಂದಾಗುವ ಲಾಭಗಳ ಬಗ್ಗೆ  ಮಕ್ಕಳಿಗೆ ಹೆಚ್ಚಿಗೆ ಹೇಳುತ್ತಿರುವ ಉದ್ದೇಶ ಹಿಂದಿನ ಜನ ಮಾಡಿದ ತಪ್ಪನ್ನು ಮುಂದಿನ ಭವಿಷ್ಯ ಭಾರತದ ಪ್ರಜೆಗಳಾಗಿರುವ ನೀವು ಪರಿಸರ ರಕ್ಷಣೆಗೆ ಪಣತೊಡಬೇಕು ಎಂದರು. 

ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರಾದೇಶಿಕ ಸಾರಿಗೆ ಅಧಿಕಾರಿ ಅಪ್ಪಯ್ಯ ನಾಲತ್ವಾಡಮಠ ಅವರು ಮನುಷ್ಯನ ಸುಂದರ ಹಾಗೂ ನೆಮ್ಮದಿಯ ಜೀವನಕ್ಕೆ ಊಟ, ವಸತಿ, ಬಟ್ಟೆ ಹಾಗೂ ಆರೋಗ್ಯ ಈ ನಾಲ್ಕು ಗಮನದಲ್ಲಿಟ್ಟುಕೊಂಡು ಜೀವನ ನಡೆಸಿದಾಗ ಶತಾಯುಷಿಗಳಾಗುವದಲ್ಲದೇ ಸುಂದರ ಬದುಕು ನಡೆಸಬಹುದು. ಆದರೆ ಇಂದು ಅವಶ್ಯಕತೆಗೆ ತಕ್ಕಂತೆ ಅನುಕೂಲಗಳಿಗೆ ಮೊರೆ ಹೋಗಿ ಪ್ರತಿಯೊಬ್ಬರೂ ಮೊಬೈಲ್ ಹಾಗೂ ವಾಹನಕ್ಕೆ ಮರುಳಾಗಿದ್ದು, ಅವಶ್ಯಕತೆಗಿಂತ ಹೆಚ್ಚಾಗಿ ಉಪಯೋಗಿಸಿ ಪರಿಸರ ನಾಶಕ್ಕೆ ಕಾರಣಗಾಗಿದ್ದಾರೆ ಎಂದರು.

ಹಿಂದೆ ವಾಹನಗಳನ್ನು ಸ್ಥಿತಿವಂತರು ಹಾಗೂ ಸೀರಿವಂತರು ಮಾತ್ರ ಉಪಯೋಗಿಸುತ್ತಿದ್ದರು. ಆದರೆ ಇಂದು ಪ್ರತಿ ಮನೆಗೆ ಒಂದಲ್ಲದೇ ಪ್ರತಿಯೊಬ್ಬರೂ ಒಂದೊಂದು ವಾಹನಕ್ಕೆ ಅವಲಂಬಿತರಾಗಿದ್ದು, ರಾಜ್ಯದಲ್ಲಿ ವರ್ಷಕ್ಕೆ 2 ಕೋಟಿ ವಾಹನಗಳು ತಯಾರಾಗುತ್ತಿದ್ದು, ಅದರಲ್ಲಿ ರಾಜ್ಯದ ರಾಜ್ಯದ ರಾಜಧಾನಿ ಬೆಂಗಳೂರಲ್ಲಿ 1 ಕೋಟಿ ವಾಹನಗಳಿವೆ. ವಾಹನ ಅವಶ್ಯ ಆದರೆ ಹಿತಮಿತದಲ್ಲಿ ಅದರ ಪ್ರಯೋಜನ ಪಡೆಯಬೇಕು. ಅದು ತಪ್ಪಿದಾಗ ಅಪಘಾತಗಳಾಗಿ ಹಾನಿ ಸಂಭವಿಸುವುದರ ಜೊತೆಗೆ ಕಲುಷಿತ ಹೊಗೆಯಿಂದ ರೋಗ ಪೀಡಿತರಾಗಬೇಕಾಗುತ್ತದೆ. ಅಲ್ಲದೇ ಪರಿಸರವನ್ನು ಹಾಳು ಮಾಡಿದಂತಾಗುತ್ತದೆ ಎಂದರು. 

ಜನವರಿ 200 ನೇ ಇಸ್ವಿಯಲ್ಲಿ ಹೊತೆರಹಿತ ವಾಹನಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಈ ಅಭಿಯಾನ 2016 ರವರೆಗೆ ಜರುಗಿ ಮುಂಬರುವ ಎಪ್ರೀಲ್ 2020 ರೊಳಗೆ ಬಿಎಸ್-6 ಗೆ ತರುವ ಮೂಲಕ ಯುರೋಪ ರಾಷ್ಟ್ರದ ವಾಹನ ಬಳಕೆಯ ಮಾದರಿಗೆ ತಲುಪಲಿವೆ ಎಂದರು.  

ಇದೇ ಸಂದರ್ಭದಲ್ಲಿ ಪರಿಸರದ ಬಗ್ಗೆ ಅರಿವು ಮೂಡಿಸುವ ಕರ ಪತ್ರಗಳನ್ನು ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಕಾಳಿದಾಳ ಕಾಲೇಜಿನ ಪ್ರಾಚಾರ್ಯ ಹೊಸಮನಿ, ಹಂಪಣ್ಣ ಹಚ್ಚೊಳ್ಳಿ, ಲಯನ್ಸ್ ಕ್ಲಬ್ನ ಅಧ್ಯಕ್ಷ ವಿಕಾಸ ದಡ್ಡೇನವರ, ಆನಂದ ರಾಮಣಕಟ್ಟಿ ಸೇರಿದಂತ ಇತರರು ಉಪಸ್ಥಿತರಿದ್ದರು. ಸಾರಿಗೆ ಇಲಾಖೆಯ ವಾಹನ ನೀರಿಕ್ಷಕ ಬಿ.ಡಿ.ಹತ್ತಿ ಸ್ವಾಗತಿಸಿದರು.