ನವದೆಹಲಿ ಏ 8, ರಾಜ್ಯ ಸೇರಿದಂತೆ ದೇಶದ ಯಾವುದೇ ಭಾಗದಲ್ಲಿ ರಸಗೊಬ್ಬರ ಅಥವಾ ಕೀಟನಾಶಕಗಳ ಕೊರತೆ ಉಂಟಾಗಿಲ್ಲ. ರಾಜ್ಯದ ರೈತರು ಎಂದಿನಂತೆ ಮುಂಗಾರು ಬಿತ್ತನೆಗೆ ತಯಾರಿ ಮಾಡಿಕೊಳ್ಳಬಹುದು ಎಂದು ಕೇಂದ್ರ ರಸಗೊಬ್ಬರ ಮತ್ತು ರಾಸಾಯನಿಕ ಖಾತೆ ಸಚಿವ ಡಿ.ವಿ.ಸದಾನಂದಗೌಡ ತಿಳಿಸಿದ್ದಾರೆ. ರಾಜ್ಯದಲ್ಲಿ 7.3 ಲಕ್ಷ ಟನ್ ರಸಗೊಬ್ಬರವಿದೆ. ಏಪ್ರಿಲ್ ತಿಂಗಳಲ್ಲಿ ರಾಜ್ಯದ ಬೇಡಿಕೆ 2.57 ಲಕ್ಷ ಟನ್ ಮಾತ್ರ. ಆದ್ದರಿಂದ ರೈತರು ಆತಂಕಪಡುವ ಅಗತ್ಯವಿಲ್ಲ ಎಂದು ಭರವಸೆ ನೀಡಿಲ್ಲ. ದೇಶದಲ್ಲಿ ಘೋಷಣೆಯಾಗಿರುವ ಲಾಕ್ ಡೌನ್ ನಿಂದ ಆರಂಭದಲ್ಲಿ ಒಂದೆರಡು ದಿನ ಸರಕು ಸಾಗಣೆಗೆ ತೊಂದರೆಯಾಗಿತ್ತು. ಆದರೆ ರಸಗೊಬ್ಬರ, ಕೀಟನಾಶಕ ಸೇರಿಂತೆ ಕೃಷಿಸಂಬಂಧಿತ ಎಲ್ಲ ಪರಿಕರಗಳನ್ನು ಅತ್ಯವಶ್ಯಕ ವಸ್ತುಗಳ ಪಟ್ಟಿಗೆ ಸೇರಿಸಿ ಉತ್ಪಾದನೆ ಹಾಗೂ ಸಾಗಣೆ ಮೇಲಿನ ನಿರ್ಬಂಧವನ್ನು ಕೇಂದ್ರ ಸರ್ಕಾರವು ಸಂಪೂರ್ಣ ತೆಗೆದುಹಾಕಲಾಗಿದೆ ಎಂದಿದ್ದಾರೆ.
ಜೊತೆಗೆ, ರಸಗೊಬ್ಬರ ಕಾರ್ಖಾನೆಗಳು, ದಾಸ್ತಾನು, ಬಂದರು, ವಿತರಣಾ ಕೇಂದ್ರಗಳ ನಡುವೆ ರಸಗೊಬ್ಬರ ಸಾಗಣೆಗೆ ಬೇಡಿಕೆಗೆ ಅನುಗುಣವಾಗಿ ಸರಕು ರೈಲುಗಳನ್ನು ಒದಗಿಸುವಂತೆ ರೈಲ್ವೆ ಇಲಾಖೆಗೆ ಕೇಂದ್ರ ಸರ್ಕಾರವು ಕಟ್ಟುನಿಟ್ಟಿನ ಆದೇಶ ನೀಡಿದೆ. ಹಾಗಿಯೇ ಜಲ ಹಾಗೂ ಭೂಸಾರಿಗೆಗೆ ರಸಗೊಬ್ಬರ, ಕೀಟನಾಶಕ ಮತ್ತಿತರ ಕೃಷಿಸಂಬಂಧಿತ ಸರಕುಗಳನ್ನು ಸಾಗಣೆಗೆ ಮುಕ್ತ ಅನುಮತಿ ನೀಡಲಾಗಿದೆ ಎಂದು ವಿವರಸಿದ್ದಾರೆ. ದೇಶದ ಬಹುತೇಕ ರಸಗೊಬ್ಬರ ಕಾರ್ಖಾನೆಗಳು ಪೂರ್ಣ ಪ್ರಮಾಣದಲ್ಲಿ ಉತ್ಪಾದನೆಯಲ್ಲಿ ತೊಡಗಿವೆ. ಈ ಸಂದರ್ಭದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮುಖಗವಸು ಧರಿಸುವಂತಹ ನಿಯಮಗಳನ್ನು ಪಾಲಿಸಲಾಗುತ್ತಿದೆ. ದೇಶದಲ್ಲಿ ಇನ್ನೂ ಹಲವು ತಿಂಗಳಿಗೆ ಸಾಕಾಗುವಷ್ಟು ರಸಗೊಬ್ಬರ ದಾಸ್ತಾನು ಇದೆ. ಸದ್ಯ 86.87 ಲಕ್ಷ ಟನ್ ಯೂರಿಯಾ ದಸ್ತಾನು ಇದೆ. ಆದಾಗ್ಯೂ ಮುಂಜಾಗ್ರತಾ ಕ್ರಮವಾಗಿ 7.57 ಲಕ್ಷ ಟನ್ ಯೂರಿಯಾ ಆಮದು ಮಾಡಿಕೊಳ್ಳಲಾಗುತ್ತಿದೆ ಎಂದಿದ್ದಾರೆ. ದೇಶಾದ್ಯಂತ ರಸಗೊಬ್ಬರ ಮಳಿಗೆಗಳೂ ತೆರೆದಿದ್ದು ಎಂದಿನಂತೆ ವಹಿವಾಟು ನಡೆಸಿವೆ. ಕರ್ನಾಟಕದಲ್ಲಿ ಸಾಗಣೆ, ಪೂರೈಕೆಗೆ ಸಂಬಂಧಿಸಿದಂತೆ ಸಮಸ್ಯೆಗಳಿದ್ದರೆ ಕೃಷಿ ಸಹಾಯವಾಣಿ 080-22212818 / 22210237 ಗೆ ಕರೆಮಾಡಿ ಬಗೆಹರಿಸಿಕೊಳ್ಳಬಹುದು ಎಂದು ಸಚಿವರು ಭರವಸೆ ನೀಡಿದ್ದಾರೆ.
ಮನೆ-ಮನೆಗೆ ಜನೌಷಧಿ: ಈ ಮಧ್ಯೆ ಪ್ರಧಾನಮಂತ್ರಿ ಭಾರತೀಯ ಜನೌಷಧಿ ಪರಿಯೋಜನೆಯ ಜನೌಷಧಿ ಕೇಂದ್ರಗಳ ಮೂಲಕ ಮನೆಗೇ ಔಷಧ ಸರಬರಾಜು ಮಾಡುವ ಸೌಲಭ್ಯವನ್ನು ಆರಂಭಿಸಲಾಗಿದೆ. ಅಗತ್ಯವಿರುವವರು ವಿಶೇಷವಾಗಿ ಹಿರಿಯ ನಾಗರಿಕರು ಈ ಸೌಲಭ್ಯವನ್ನು ಪಡೆದುಕೊಳ್ಳಬಹುದು.ಅದಕ್ಕಾಗಿ ನಿಮ್ಮ ಸ್ಮಾರ್ಟ್ ಫೋನಿನಲ್ಲಿ ನಮ್ಮ ಸರ್ಕಾರವೇ ಅಭಿವೃದ್ಧಿಪಡಿಸಿರುವ 'ಜನೌಷಧಿ ಸುಗಮ್, ಎಂಬ ಆ್ಯಪ್ ರೂಪಿಸಲಾಗಿದೆ. ಎಂಡ್ರಾಯ್ಡ್ ಫೋನಿಗಾಗಿ https://play.google.com/store/apps/details?id=in.gov.pmbjp… ಕ್ಲಿಕ್ಮಾಡಿ ಡೌನ್ಲೋಡ್ ಮಾಡಿಕೊಳ್ಳಬಹುದು ಎಂದಿದ್ದಾರೆ.