ಬೆಂಗಳೂರು, ಏಪ್ರಿಲ್ 4, ರಾಜ್ಯದಲ್ಲಿ ಆಹಾರ ಧಾನ್ಯಗಳು ಸೇರಿದಂತೆ ಅಗತ್ಯ ಸಾಮಗ್ರಿಗಳ ಲಭ್ಯತೆ ಇರುವಂತೆ ರಾಜ್ಯ ಸರ್ಕಾರ ಎಲ್ಲಾ ಕ್ರಮಗಳನ್ನು ಕೈಗೊಂಡಿದೆ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯುರಪ್ಪ ಶನಿವಾರ ತಿಳಿಸಿದ್ದಾರೆ. ಶಾಸಕರು, ಸಂಸದರು ಮತ್ತು ಇತರರೊಂದಿಗೆ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿ ಈ ವಿಷಯ ತಿಳಿಸಿದ್ದಾರೆ. ಸಭೆಯಲ್ಲಿ ಕೊವಿದ್-19 ಸೋಂಕು ಹರಡುವಿಕೆ ತಡೆಯಲು ರಾಜ್ಯ ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ಮುಖ್ಯಮಂತ್ರಿ ವಿವರಿಸಿದ್ದಾರೆ.
ಎಲ್ಲಾ ರಾಜಕೀಯ ಪಕ್ಷಗಳ ಶಾಸಕರು ಭಾಗವಹಿಸಿದ್ದ ಈ ಸಭೆಯಲ್ಲಿ ರೋಗ ಹರಡುವಿಕೆ ತಡೆಗೆ ರಾಜ್ಯ ಸರ್ಕಾರ ಕೈಗೊಂಡಿರುವ ಕ್ರಮಗಳನ್ನು ಶ್ಲಾಘಿಸಲಾಗಿದೆ ಎಂದು ತಿಳಿಸಿದ ಅವರು, ‘ಅಗತ್ಯ ಸರಕುಗಳು ಮತ್ತು ತರಕಾರಿ-ಹಣ್ಣುಗಳಿಗೆ ಯಾವುದೇ ಕೊರತೆಯಿಲ್ಲ. ಯಾವುದೇ ತೊಂದರೆ ಇಲ್ಲದೆ ಇವು ಸಾರ್ವಜನಿಕರಿಗೆ ಲಭ್ಯವಾಗುತ್ತಿವೆ.’ ಎಂದು ಹೇಳಿದ್ದಾರೆ. ಎಪಿಎಲ್ ಕುಟುಂಬಗಳಿಗೂ ಸಹ ರಾಜ್ಯ ಸರ್ಕಾರ ಆಹಾರ ಧಾನ್ಯ ಪೂರೈಸುತ್ತಿದೆ ಎಂದ ಅವರು,’ ಸೋಂಕು ತಡೆಯ ಮತ್ತು ಪರಿಹಾರ ಕಾರ್ಯ ಸವಾಲನ್ನು ಎದುರಿಸಲು ಒಟ್ಟಾಗಿ ಕೆಲಸ ಮಾಡಲು ಸಭೆಯಲ್ಲಿ ಒಪ್ಪಲಾಗಿದೆ ಎಂದರು. ಅಸಂಘಟಿತ ವಲಯದ ಶ್ರಮಿಕ ವರ್ಗದ ಜನರಿಗೆ ಆಶ್ರಯ ನೀಡುವ ವ್ಯವಸ್ಥೆಗಳನ್ನು ಮಾಡುತ್ತಿದ್ದು, ಉಚಿತವಾಗಿ ಆಹಾರವನ್ನು ಒದಗಿಸಲಾಗುತ್ತಿದೆ ಎಂದು ಅವರು ಹೇಳಿದರು. ಕೊರೊನವೈರಸ್ ವಿರುದ್ಧದ ಹೋರಾಟದಲ್ಲಿ ರಾಜ್ಯದ ಜನರು ಮನೆಗಳಲ್ಲೇ ಉಳಿದು ರಾಜ್ಯ ಸರ್ಕಾರದ ಜೊತೆ ಕೈಜೋಡಿಸುವಂತೆ ಮುಖ್ಯಮಂತ್ರಿ ಮನವಿ ಮಾಡಿದ್ದಾರೆ.