ಬೆಂಗಳೂರು, ಏ. 3,ನಗರದಲ್ಲಿ ಜನರ ಆರೋಗ್ಯದ ಸುರಕ್ಷತೆ ದೃಷ್ಟಿಯಿಂದ ಎಲ್ಲೆಂದರಲ್ಲಿ ಕತ್ತರಿಸಿಟ್ಟ ಹಣ್ಣು - ತರಕಾರಿ ಮಾರದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.ಬೆಂಗಳೂರು ನಗರದ ನಾಗರೀಕರಿಗೆ ಅಗತ್ಯವಾಗಿರುವ ಹಣ್ಣು, ತರಕಾರಿಗಳ ಕೊರತೆಯಾಗದಂತೆ ಕ್ರಮಕೈಗೊಳ್ಳುವ ನಿಟ್ಟಿನಲ್ಲಿ ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರು ಬಿಬಿಎಂಪಿ ಅಧಿಕಾರಿಗಳ ಜೊತೆ ನಡೆಸಿದ ಸಭೆಯಲ್ಲಿ ಜನರ ಆರೋಗ್ಯಕ್ಕಾಗಿ ಹಲವು ಪ್ರಮುಖ ಕ್ರಮಗಳನ್ನು ಕೈಗೊಳ್ಳಲಾಯಿತು.
ಕತ್ತರಿಸಿದ ಹಣ್ಣುಗಳ ಮಾರಾಟ ಸಂಬಂಧ ಜನರಿಂದ ಅಭಿಪ್ರಾಯ ಸಂಗ್ರಹಿಸಬೇಕು ಎಂದು ಸೂಚಿಸಲಾಯಿತು.ಹಣ್ಣು , ತರಕಾರಿಗಳ ಕೊರತೆಯಾಗದಂತೆ ನೇರ ಮಾರುಕಟ್ಟೆಗೂ ವ್ಯವಸ್ಥೆ ಕಲ್ಪಿಸಲಾಗಿದೆ. ಈ ನಿಟ್ಟಿನಲ್ಲಿ ಇಂದು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷ ಹಾಗೂ ಕಂದಾಯ ಸಚಿವ ಆರ್.ಅಶೋಕ್ ಅಧ್ಯಕ್ಷತೆಯಲ್ಲಿ ಬಿಬಿಎಂಪಿ ಮೇಯರ್ ಕೊಠಡಿಯಲ್ಲಿ ಸಭೆ ನಡೆಯಿತು.
ಸಭೆಯಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ರಸ್ತೆ ಬದಿಯ ಸಸ್ಯಗಳಿಗೆ ಉಚಿತ ನೀರು ಪೂರೈಸಲು, ಹಾಪ್ ಕಾಮ್ಸ್ ಮೂಲಕ ರೈತರು ಬೆಳೆದ ಹಣ್ಣುಗಳನ್ನು ಖರೀದಿಸಲು ಜಾಹೀರಾತು ಪ್ರಕಟಣೆ ನೀಡಲು ಆರ್‌ಡಬ್ಲ್ಯೂಎ ಸಂಘಕ್ಕೆ ಸೂಚಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಹಾಪ್‌ಕಾಮ್ಸ್‌ಗಳಿಂದ ಹಣ್ಣುಗಳನ್ನು ಖರೀದಿಸಲು ಮತ್ತು ಮಾರಾಟ ಮಾಡಲು ಅನುಮತಿ ಪಡೆಯಲು ಮಾತುಕತೆ ನಡೆಸಿ ಹಣ್ಣು ತರಕಾರಿ ಸರಬರಾಜು ಆರಂಭಿಸಲು ತೀರ್ಮಾನಿಸಲಾಗಿದೆ. ಅಲ್ಲದೆ ನಂದಿನಿ ಬೂತ್ ಗಳಲ್ಲೂ ಹಣ್ಣು ತರಕಾರಿ ಮಾರಾಟಕ್ಕೆ ಅವಕಾಶ ಕಲ್ಪಿಸಲು ಮತ್ತು ಹಾಪ್‌ಕಾಮ್ಸ್ ಗಳೊಂದಿಗೆ ಬಿಬಿಎಂಪಿ ವಾರ್‌ರೂಂನಲ್ಲಿ ನಾಳೆ ವೀಡಿಯೊ ಸಂವಾದ ನಡೆಸಲು ತೀರ್ಮಾನಿಸಲಾಯಿತು.