ಮುಂಬೈ, ನ 7: ಮಹಾರಾಷ್ಟ್ರ ರಾಜ್ಯ ರಾಜಕಾರಣಕ್ಕೆ ಮರುಳುವ ಯಾವುದೇ ಉದ್ದೇಶ ಇಲ್ಲ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಸ್ಪಷ್ಟಪಡಿಸಿದ್ದಾರೆ. ರಾಜ್ಯದಲ್ಲಿ ಹೊಸ ಸರ್ಕಾರ ಸ್ಥಾಪನೆ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಅವರು ಈ ಸ್ಪಷ್ಟೀಕರಣ ನೀಡಿದ್ದಾರೆ. ಮುಂದಿನ ಸರ್ಕಾರ ರಚನೆಯಲ್ಲಿ ನೀವು ಭಾಗಿಯಾಗುತ್ತೀರಾ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನನಗೆ ದೆಹಲಿಯಲ್ಲಿ ಮಾಡಲು ಸಾಕಷ್ಟು ಕೆಲಸವಿದೆ. ಹೀಗಾಗಿ ರಾಜ್ಯ ರಾಜಕಾರಣಕ್ಕೆ ಮರಳುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಅವರು ಸಾರಾಸಗಟಾಗಿ ತಳ್ಳಿಹಾಕಿದ್ದಾರೆ. ಆರ್ ಎಸ್ ಎಸ್ ನಾಯಕರು ಹೊಸ ಸರ್ಕಾರ ರಚನೆ ವಿಚಾರದಲ್ಲಿ ಮಧ್ಯಪ್ರವೇಶ ಮಾಡಿ, ತಮ್ಮ ಸಹಕಾರ ಕೋರಿದ್ದಾರೆ ಎಂಬ ವರದಿಗಳಲ್ಲಿ ಯಾವುದೇ ಹುರುಳಿಲ್ಲ, ಸತ್ಯಾಂಶವೂ ಇಲ್ಲ. ಚುನಾವಣೆಗೆ ಮೊದಲೇ ಬಿಜೆಪಿ, ದೇವೇಂದ್ರ ಫಡ್ನವಿಸ್ ಅವರೇ ಮುಂದಿನ ಮುಖ್ಯಮಂತ್ರಿ ಎಂದು ಹೇಳಿತ್ತು. ಅದರಂತೆ ಜನಾದೇಶವೂ ಹೊರಬಂದಿದ್ದು ಬಿಜೆಪಿ - ಶಿವಸೇನೆ ಮೈತ್ರಿ ಸರ್ಕಾರ ರಚನೆಯಾಗಲಿದೆ ಎಂದು ಅವರು ಹೇಳಿದರು. ಈ ನಡುವೆ ಗಡ್ಕರಿ ಅವರು ಬುಧವಾರ ಕಾಂಗ್ರೆಸ್ ನಾಯಕ ಅಹ್ಮದ್ ಪಟೇಲ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿರುವುದು ಹೊಸ ವ್ಯಾಖ್ಯಾನ, ಹೊಸ ಊಹಾಪೋಹಗಳಿಗೆ ಎಡೆಮಾಡಿಕೊಟ್ಟಿದ್ದು ಆರ್ ಎಸ್ ಎಸ್ ನಾಯಕರು ನಿತಿನ್ ಗಡ್ಕರಿ ಅವರನ್ನು ಮುಂದಿನ ಮುಖ್ಯಮಂತ್ರಿಯನ್ನಾಗಿ ನೇಮಕ ಮಾಡಲಿದ್ದಾರೆ ಎಂಬ ವದಂತಿಗೆ ಕಾರಣವಾಗಿತ್ತು.