ನವದೆಹಲಿ, ನ.15 : ಅರಣ್ಯ ಸಂರಕ್ಷಣಾ ಕಾಯ್ದೆಯನ್ನು ಬದಲಾಯಿಸುವ ಉದ್ದೇಶ ಸರ್ಕಾರಕ್ಕೆ ಇಲ್ಲ ಎಂದು ಸ್ಪಷ್ಟಪಡಿಸಿರುವ ಪರಿಸರ ಸಚಿವ ಪ್ರಕಾಶ್ ಜಾವಡೇಕರ್ , ಈ ಕುರಿತ ಕರಡು ಬಗ್ಗೆ ತಪ್ಪು ತಿಳುವಳಿಕೆ ಇರುವುದಿಂದ ಅದನ್ನು ಹಿಂಪಡೆಯಲಾಗುತ್ತಿದೆ ಎಂದು ಶುಕ್ರವಾರ ಹೇಳಿದ್ದಾರೆ.
ಅರಣ್ಯ ಸಂರಕ್ಷಣಾ ಕಾಯ್ದೆಯನ್ನು ಬದಲಾಯಿಸುವ ಉದ್ದೇಶ ಸರ್ಕಾರಕ್ಕೆ ಇಲ್ಲ. ಕರಡು ಬಗ್ಗೆ ತಪ್ಪು ತಿಳುವಳಿಕೆ ಇತ್ತು, ಆದ್ದರಿಂದ ನಾವು ಅದನ್ನು ಹಿಂದೆಗೆದುಕೊಳ್ಳುತ್ತಿದ್ದೇವೆ ಎಂದು ಜಾವಡೇಕರ್ ಇಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಬುಡಕಟ್ಟು ಕಾಯ್ದೆಯನ್ನು ಬದಲಾಯಿಸುವ ಯಾವುದೇ ಯೋಜನೆ ಇಲ್ಲ, ಅದನ್ನು ಮಾಡುವ ಉದ್ದೇಶವೂ ನಮಗಿಲ್ಲ ಎಂದು ಅವರು ಒತ್ತಿ ಹೇಳಿದರು.
ಅರಣ್ಯ ಹಕ್ಕುಗಳ ಕಾಯ್ದೆ, 1927 ಅನ್ನು 11 ರಾಜ್ಯಗಳಲ್ಲಿ ತಿದ್ದುಪಡಿ ಮಾಡಲಾಗಿದೆ ಮತ್ತು ಅವರ ಕಾನೂನುಗಳೇ ಜಾರಿಯಲ್ಲಿವೆ ಎಂದು ಅವರು ಸ್ಪಷ್ಟಪಡಿಸಿದರು. ಎಲ್ಲಾ ಮಾಹಿತಿಯನ್ನು ಸಂಗ್ರಹಿಸಲಾಗಿದ್ದು, ಪಾಲುದಾರರಿಂದ ಅಧ್ಯಯನ ಮಾಡಿಸಲಾಗಿದೆ. ಇದು ಸರ್ಕಾರದ ಕರಡು ಎಂಬ ತಪ್ಪು ಕಲ್ಪನೆ ಇತ್ತು ಎಂದು ಅವರು ಹೇಳಿದ್ದಾರೆ.
ಬುಡಕಟ್ಟು ಜನಾಂಗದವರು ನಮ್ಮ ಪಾಲುದಾರರು ಮತ್ತು ನಾವು ಅವರ ಸಹಾಯಕರಾಗಲು ಯೋಜಿಸುತ್ತೇವೆ. ನಮ್ಮ ಸರ್ಕಾರವು ಬುಡಕಟ್ಟು ಜನಾಂಗದವರನ್ನು ಸಬಲೀಕರಣಗೊಳಿಸುವುದರ ಪರವಾಗಿದೆ ಎಂದು ಅವರು ಒತ್ತಿ ಹೇಳಿದರು, ಭಾರತದಲ್ಲಿ ಕಳೆದ ಐದು ವರ್ಷಗಳಲ್ಲಿ 13,000 ಚದರ ಕಿಲೋಮೀಟರ್ಗಿಂತ ಹೆಚ್ಚಿನ ಮರಗಳ ಹಸಿರು ಪ್ರದೇಶ ಹೆಚ್ಚಾಗಿದೆ ಎಂದರು.
ಹೊಸ ಕಾನೂನು ಲಕ್ಷಾಂತರ ಬುಡಕಟ್ಟು ಮತ್ತು ಅರಣ್ಯವಾಸಿಗಳನ್ನು ತಮ್ಮ ಹಕ್ಕುಗಳಿಂದ ದೂರವಿರಿಸುತ್ತದೆ ಎಂದು ಅರಣ್ಯ ಹಕ್ಕುಗಳ ಕಾರ್ಯಕರ್ತರು ಮತ್ತು ಬುಡಕಟ್ಟು ಕಲ್ಯಾಣ ಸಂಸ್ಥೆಗಳು ಆರೋಪಿಸಿದ್ದವು. ಕರಡು ಮಸೂದೆಯನ್ನು ಕೇಂದ್ರ ಸರ್ಕಾರ ಈಗಾಗಲೇ ಸಮಾಲೋಚನೆಗಾಗಿ ರಾಜ್ಯ ಸರ್ಕಾರಗಳಿಗೆ ಕಳುಹಿಸಿದೆ.