ನವದೆಹಲಿ, ನ 9 : ರಾಮಜನ್ಮ ಭೂಮಿ - ಬಾಬರಿ ಮಸೀದಿ ದೀರ್ಘಕಾಲೀನ ವಿವಾದಕ್ಕೆ ಸುಪ್ರೀಂಕೋರ್ಟ್ ಇಂದು ತೆರೆ ಎಳೆದಿದೆ. ವಿವಾದಿತ 2.77 ಎಕರೆ ಜಮೀನು ರಾಮ ಲಲ್ಲಾಗೆ ಸೇರಬೇಕು ಎಂದು ಮುಖ್ಯ ನ್ಯಾಯಮೂರ್ತಿಗಳನ್ನು ಒಳಗೊಂಡ ಸಂವಿಧಾನ ಪೀಠ ಒಮ್ಮತದ ತೀಪು ನೀಡಿದೆ. ಇದಕ್ಕೆ ಪರಿಹಾರವಾಗಿ ಸುನ್ನಿ ವಕ್ಫ್ ಮಂಡಳಿಗೆ ಐದು ಎಕರೆ ಜಮೀನನ್ನು ಉತ್ತರಪ್ರದೇಶ ಸರ್ಕಾರ ಕೊಡಬೇಕು ಎಂದು ತೀರ್ಪುನಲ್ಲಿ ಹೇಳಿದ್ದರೂ, ಅಯೋಧ್ಯೆಯಲ್ಲೇ ಕೊಡಬೇಕು ಎಂಬ ನಿರ್ಬಂಧಗಳೇನೂ ಇಲ್ಲ ಎಂಬುದಾಗಿ ಕಾನೂನು ಪಂಡಿತರು ತೀರ್ಪನ್ನು ವ್ಯಾಖ್ಯಾನ ಮಾಡಿದ್ದಾರೆ. ಸುನ್ನಿ ವಕ್ಫ್ ಮಂಡಳಿಯ ಮನವಿಯ ಮೇರೆಗೆ ಅಯೋಧ್ಯೆಯಲ್ಲೇ ಐದು ಎಕರೆ ಜಮೀನನ್ನು ಅಯೋಧ್ಯೆಯಲ್ಲೇ ಕೊಡಬಹುದು ಇಲ್ಲವಾದಲ್ಲಿ ಮಸೀದಿ ನಿರ್ಮಾಣಕ್ಕಾಗಿ ರಾಜ್ಯದ ಯಾವುದೇ ಪ್ರದೇಶದಲ್ಲಾದರೂ ಐದು ಎಕರೆ ಜಮೀನು ಕೊಡಬಹುದು. ಆದರೆ ಐದು ಎಕರೆ ಜಮೀನನ್ನು ಇಂತಹ ಸ್ಥಳದಲ್ಲೇ ಕೊಡಬೇಕು ಎಂದು ತೀರ್ಪುನಲ್ಲಿ ಸ್ಪಷ್ಟಪಡಿಸಿಲ್ಲ. ವಕ್ಫ್ ಮಂಡಳಿ ಕೋರಿಕೆ ಬಂದಲ್ಲಿ ಮಾತ್ರ ಅಯೋಧ್ಯೆಯಲ್ಲಿ ಜಮೀನು ನೀಡಬಹುದು, ಇಲ್ಲವಾದಲ್ಲಿ ರಾಜ್ಯ ಸರ್ಕಾರ ತನ್ನ ವಿವೇಚನೆಯನ್ನು ಬಳಸಿ ಬೇರೆ ನಗರಗಳಲ್ಲಿ ಮಸೀದಿ ನಿರ್ಮಾಣಕ್ಕೆ ಜಾಗ ಕೊಡಬಹುದು.