ರಾಜ್ಯದಲ್ಲಿ 54 ಹೊಸ ಕೊರೋನಾ ಪ್ರಕರಣಗಳು, ಒಂದು ಸಾವು, ಸೋಂಕಿತರ ಸಂಖ್ಯೆ 1146ಕ್ಕೇರಿಕೆ

ಬೆಂಗಳೂರು, ಮೇ 17, ರಾಜ್ಯದಲ್ಲಿ ಕೊರೋನಾ ಸೋಂಕಿನಿಂದ ಮತ್ತೋರ್ವ ವ್ಯಕ್ತಿ ಮೃತಪಟ್ಟಿದ್ದಾರೆ. ಜೊತೆಗೆ, ಹೊಸದಾಗಿ 54 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಉಡುಪಿಯ 54 ವರ್ಷದ ನಿವಾಸಿ ಮೇ 14ರಂದು ಹೃದಯಾಘಾತದಿಂದ ಮೃತಪಟ್ಟಿದ್ದರು. ಅವರ ಪರೀಕ್ಷಾ ವರದಿಯಲ್ಲಿ ಕೊರೋನಾ ಸೋಂಕು ಇರುವುದು ದೃಢಪಟ್ಟಿತ್ತು. ಇವರು ಹೃದಯ ಸಂಬಂಧಿ ಕಾಯಿಲೆಯಿಂದ ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಜೊತೆಗೆ, ಮಂಡ್ಯದಲ್ಲಿ 22, ಕಲಬುರಗಿಯಲ್ಲಿ 10, ಹಾಸನದ 6, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2, ಕೋಲಾರದ 3, ವಿಜಯಪುರದ 1, ಧಾರವಾಡದ 4, ಶಿವಮೊಗ್ಗದ 2, , ಯಾದಗಿರಿಯಲ್ಲಿ 3 ಪ್ರಕರಣಗಳು ವರದಿಯಾಗಿವೆ. ಈ ಜಿಲ್ಲೆಗಳ ಬಹುತೇಕ ಸೋಂಕಿತರು ಮುಂಬೈಗೆ ಪ್ರಯಾಣ ಬೆಳೆಸಿದ ಹಿನ್ನೆಲೆ ಹೊಂದಿದ್ದಾರೆ. ಹಾಸನ ಜಿಲ್ಲೆಯ ಆಲೂರಿನಲ್ಲಿ 3, ಚನ್ನರಾಯಪಟ್ಟಣದಲ್ಲಿ 2 ಹಾಗೂ ಹೊಳೆನರಸೀಪುರದಲ್ಲಿ  ಓರ್ವರಿಗೆ ಸೋಂಕು ದೃಢಪಟ್ಟಿದೆ. ಇವರೆಲ್ಲರೂ ಮುಂಬೈ ಪ್ರಯಾಣದ ಹಿನ್ನೆಲೆ ಹೊಂದಿದ್ದಾರೆ.  ಮುಂಬೈನ ಬಹುತೇಕ ಸೋಂಕಿತರು ಕೂಡ ಮುಂಬೈಗೆ ಪ್ರಯಾಣ ಬೆಳೆಸಿದ್ದರು.ಕಲಬುರಗಿಯಲ್ಲಿ 7, 13, 10 ವರ್ಷದ ಬಾಲಕರಲ್ಲಿ ಸೋಂಕು ಪತ್ತೆಯಾಗಿದೆ. ಹಾಸನದ 3 ಮತ್ತು ಮಂಡ್ಯದ 1 ವರ್ಷದ ಮಕ್ಕಳಿನಲ್ಲಿ ಸೋಂಕು ದೃಢಪಟ್ಟಿದೆ. ಮಂಡ್ಯದ 9 ವರ್ಷದ ಬಾಲಕ ಮತ್ತು 11 ವರ್ಷದ ಬಾಲಕಿಯಲ್ಲಿ ಸೋಂಕು ಕಾಣಿಸಿಕೊಂಡಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಇದರಿಂದ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 1146ಕ್ಕೇರಿಕೆಯಾಗಿದೆ. ಇಲ್ಲಿಯವರೆಗೆ 497 ಕ್ಕೂ ಮಂದಿ ಗುಣಮುಖರಾಗಿದ್ದಾರೆ. 38 ಮಂದಿ ಮೃತಪಟ್ಟಿದ್ದಾರೆ ಎಂದು ಇಲಾಖೆಯ ಪ್ರಕಟಣೆ ತಿಳಿಸಿದೆ.