ರಂಗಭೂಮಿ: ಸಮಾಜ ಪರಿವರ್ತನೆಗೆ ಪ್ರಬಲ ಮಾಧ್ಯಮ
ಹೂವಿನ ಹಡಗಲಿ 28: ರಂಗಭೂಮಿಯು ಜೀವಂತ ಕಲೆಯಾಗಿದ್ದು,ಅದು ವೈಯಕ್ತಿಕ,ಸಾಮಾಜಿಕ ಪರಿವರ್ತನೆಗೆ ಪ್ರಬಲ ಮಾಧ್ಯಮವಾಗಿದೆ ಎಂದು ನಟ, ನಿರ್ದೇಶಕ, ರಂಗಸಂಘಟಕ ಎನ್.ವಿ. ಶ್ರೀಕಾಂತ್ ಅಭಿಪ್ರಾಯಪಟ್ಟರು. ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕ ಪಟ್ಟಣದ ರುದ್ರಂಬಾ ಎಂ.ಪಿ.ಪ್ರಕಾಶ್ ಸರ್ಕಾರಿ ಪ್ರಥಮದರ್ಜೆ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಎಂ.ಎಂ. ಪಾಟೀಲ್ ಸ್ಮಾರಕದತ್ತಿ, ಎಂ.ಪಿ.ಪ್ರಕಾಶ್ ಸ್ಮಾರಕದತ್ತಿ,ಎಂ.ಪಿ. ಪ್ರಕಾಶ್ ಸ್ಮರಣಾರ್ಥ ದತ್ತಿ, ಎ.ಎಂ.ಹೊಳಲಯ್ಯ ಸ್ಮಾರಕದತ್ತಿ ಉಪನ್ಯಾಸ ಹಾಗೂ ವಿಶ್ವ ರಂಗಭೂಮಿ ದಿನಾಚರಣೆಯ ಕಾರ್ಯಕ್ರಮದಲ್ಲಿ ಎಂ.ಪಿ. ಪ್ರಕಾಶ್ ವ್ಯಕ್ತಿತ್ವ,ಸಾಧನೆ ಹಾಗೂ ಹಡಗಲಿಯ ರಂಗಭೂಮಿ ಕಲಾವಿದರ ಕುರಿತು ಉಪನ್ಯಾಸ ನೀಡಿದರು.
ಎಂ.ಪಿ. ಪ್ರಕಾಶರ ಸೈದ್ಧಾಂತಿಕ ಒಲವುಗಳು ಅವರ ಸಾಹಿತ್ಯಿಕ,ಸಾಂಸ್ಕೃತಿಕ, ರಾಜಕೀಯ,ಸಾಮಾಜಿಕ ಕೊಡುಗೆಗಳನ್ನು ವಿವರಿಸಿ ಅವರ ಬಹುಮುಖಿ ವ್ಯಕ್ತಿತ್ವವನ್ನು ಪರಿಚಯಿಸಿದರು. ಪ್ರಕಾಶರು ಸ್ಥಾಪಿಸಿದ ರಂಗಭಾರತಿ ಸಂಸ್ಥೆಯು 60ವರ್ಷಗಳಿಂದ ನಿರಂತರವಾಗಿ ನಾಟಕ, ಸಾಂಸ್ಕೃತಿಕ ಚಟುವಟಿಕೆಗಳನ್ನು ಆಯೋಜಿಸುತ್ತಿರುವುದು ಶ್ಲಾಘನೀಯ ಸಂಗತಿ ಎಂದರು.
ತಾಲೂಕಿನ ಹಿರಿಯ,ಕಿರಿಯ ರಂಗ ಕಲಾವಿದರ ಕೊಡುಗೆಗಳನ್ನು ಸ್ಮರಿಸಿದರು. ವಿದ್ಯಾರ್ಥಿಗಳು ರಂಗ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಮನವಿ ಮಾಡಿದರು.ಕಾರ್ಯಕ್ರಮ ಉದ್ಘಾಟಿಸಿದ ರಂಗಭಾರತಿ ಕಾರ್ಯಾಧ್ಯಕ್ಷೆ ಸುಮಾ ವಿಜಯ್ ಮಾತನಾಡಿ ರಂಗಭೂಮಿಯಲ್ಲಿ ತೊಡಗಿಸಿಕೊಳ್ಳುವುದ ರಿಂದ ಕ್ರಿಯಾಶೀಲ ವ್ಯಕ್ತಿತ್ವ ರೂಪುಗೊಳ್ಳುವುದು. ನಾಟಕ ರಂಜನೆಯ ಜೊತೆ ನೈತಿಕತೆ,ಮಾನವೀಯ ಮೌಲ್ಯಗಳ ಉದ್ದೀಪನ ಮಾಡುವುದು ಎಂದರು. ಮ.ಮ.ಪಾಟೀಲ್,ಎಂ.ಪಿ.ಪ್ರಕಾಶರ ಆಶಯಗಳ ಕುರಿತು ಮಾತನಾಡಿ ವಿದ್ಯಾರ್ಥಿಗಳು ಅಭ್ಯಾಸದ ಜೊತೆ ಲಲಿತ ಕಲೆಗಳ ಕಲಿಕೆಗೂ ಆಸಕ್ತಿ ವಹಿಸಲು ಕರೆ ನೀಡಿದರು.
ಇದೆ ಸಂದರ್ಭದಲ್ಲಿ ತಾಲೂಕಿನ ಹುಗಲೂರು ಗ್ರಾಮದ ರಂಗ ಒಕ್ಕಲು ಸಂಸ್ಥೆಯ ನಟ,ನಿರ್ದೇಶಕ ಅಜಯ್. ಚ. ಇವರನ್ನು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಪ್ರಾಚಾರ್ಯ ಎಂ. ವಿಜಯಕುಮಾರ್, ಪತ್ರಕರ್ತರಾದ ಅಯ್ಯನಗೌಡ ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ಕಸಾಪ ಅಧ್ಯಕ್ಷರಾದ ಟಿ. ವೀರೇಂದ್ರ ಪಾಟೀಲ್ ವಹಿಸಿದ್ದರು. ಆರಂಭದಲ್ಲಿ ವಿದ್ಯಾರ್ಥಿನಿ ನೀಲಮ್ಮ ಪ್ರಾರ್ಥಿಸಿದರು. ಸಾಂಸ್ಕೃತಿಕ ವಿಭಾಗದ ಸಂಚಾಲಕರಾದ ಎಂ. ಭೀಮಪ್ಪ ಸ್ವಾಗತಿಸಿದರು. ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ಸತೀಶ್ ಪಾಟೀಲ್ ಪ್ರಾಸ್ತಾವಿಕವಾಗಿ ಮಾತನಾಡಿ ವಿಶ್ವ ರಂಗಭೂಮಿ ದಿನದ ಹಿನ್ನೆಲೆ, ಕಾರ್ಯಕ್ರಮದ ಉದ್ದೇಶ ವಿವರಿಸಿದರು.ಡಾ.ಶೈಲಜಾ ಪವಾಡಶೆಟ್ರು ವಂದಿಸಿದರು. ಉಪನ್ಯಾಸಕ ಗಿರಿಯಪ್ಪ ಜೋಗನ್ನವರ ಕಾರ್ಯಕ್ರಮ ನಿರ್ವಹಿಸಿದರು.