ಮೂಡಲಗಿ 15: ಭಾರತದ ಭವಿಷ್ಯತ್ತಿನ ರೂವಾರಿಗಳಾದ ಇಂದಿನ ಮಕ್ಕಳಿಗೆ ಸಂಸ್ಕೃತಿ ಸಂಸ್ಕಾರ ಮತ್ತು ಶಿಸ್ತಿನ ಶಿಕ್ಷಣವನ್ನು ನೀಡುತ್ತಿರುವ ಹಾಗೂ ಮೂಡಲಗಿ ನಗರದಲ್ಲಿ ಮೂರು ಸಾವಿರಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುತ್ತಿರುವ ಆರ್.ಡಿ.ಎಸ್. ಶಿಕ್ಷಣ ಸಂಸ್ಥೆ ಕಾರ‌್ಯ ಶ್ಲಾಘನೀಯವಾದದ್ದು ಎಂದು ಮೂಡಲಗಿ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ್ ಮನ್ನಿಕೇರಿ ಅವರು ಅಭಿಪ್ರಾಯ ಪಟ್ಟರು.
ಪಟ್ಟಣದ ಆರ್ ಡಿ ಸೊಸೈಟಿಯ ಶ್ರೀ ವಿದ್ಯಾನಿಕೇತನ ಸಿ ಬಿ ಎಸ್ ಇ ಶಾಲೆಯ ಆವರಣದಲ್ಲಿ ನಡೆದ ಆರನೆಯ ವಿನೂತನ ಕಾರ್ಯಕ್ರಮದ ವಾರ್ಷಿಕ ಸ್ನೇಹ ಸಮ್ಮೇಳನದ ಅತಿಥಿ ಸ್ಥಾನವನ್ನು ವಹಿಸಿಕೊಂಡು ಜ್ಯೋತಿ ಬೆಳಗುವದರೊಂದಿಗೆ ಚಾಲನೆ ನೀಡಿ ಮಾತನಾಡುತ್ತಾ, ವಿನೂತನ ಆವಿಸ್ಕಾರಗಳೊಂದಿಗೆ ಮಕ್ಕಳ ಸಮಗ್ರತೆಯ ಅಭಿವೃದ್ಧಿಯ ಚಿಂತನೆಯನ್ನು ಹೊಂದಿ ಮಕ್ಕಳ ಬದುಕಿಗೆ ಸ್ಪೂರ್ತಿ ಹಾಗೂ ನವ ಚೈತನ್ಯವನು ನೀಡುವ ಉತ್ಸಾಹದೊಂದಿಗೆ ಸಾವಿರಾರು ಈ ಸಂಸ್ಥೆ ದಾರಿ ದೀಪವಾಗಿದೆ ಎಂದರು.
ಖ್ಯಾತ ಜಾನಪದ ಗಾಯಕ ಶಬ್ಬೀರ್ ಡಾಂಗೆ ಮಾತನಾಡಿ ಯಾರು ಕದಿಯಲಾರದ ಬಹುದೊಡ್ಡ ಶಕ್ತಿ ಎಂದರೆ ಅದು ಜ್ಞಾನ ಅಂತಹ ಅಮೂಲ್ಯವಾದ ಗುಣಮಟ್ಟದ ಹಾಗೂ ಕೌಶಲ್ಯ ಪೂರ್ಣವಾದ ಚಟುವಟಿಕೆಗಳಿಂದ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವುದರ ಜೊತೆಗೆ ಅವರ ಸರ್ವಾಂಗಿಣ ಅಭಿವೃದ್ಧಿಗೆ ಪ್ರಯತ್ನಿಸುವ ವಿದ್ಯಾಸಂಸ್ಥೆಯಾಗಿದೆ ಮಕ್ಕಳು ಪ್ರಜ್ವಲಿಸುವ ಜ್ಯೋತಿಗಳಾಗಿ ಬದುಕನ್ನು ಕಟ್ಟಿಕೊಳ್ಳಲು ಪಾಲಕರು ಇಂತಹ ಅದ್ಬುತ್ ಸಂಸ್ಥೆಗೆ ಪ್ರೋತ್ಸಾಹಿಸುವುದು ಅಗತ್ಯವಿದೆ ಎಂದರು.
ಶಿಕ್ಷಕರ ತರಬೇತಿದಾರರಾದ ಇಂದಿರಾ ಸಾತ್ನೂರ್ ಮಾತನಾಡಿ ಮಕ್ಕಳ ಮನಸ್ಸು ನಿರ್ಮಲವಾದದ್ದು ಮತ್ತು ಪರಿಶುದ್ಧವಾದದ್ದು ಆ ಮನಸ್ಸಿನಲ್ಲಿ ಗುರಿ ಮತ್ತು ಚಲವನ್ನು ಪ್ರಬುದ್ಧ ಶಿಕ್ಷಕರು ಬೆಳೆಸಿದಾಗ ಸಮಾಜಮುಖಿ ಮಕ್ಕಳಾಗಿ ಗುರಿ ಸಾಧಕರಾಗಿ ಕೌಶಲ್ಯಯುತವಾದ ಪ್ರಜೆಗಳಾಗಿ ಏನು ಬೇಕಾದರೂ ಸಾಧಿಸಬಲ್ಲರು ಅಂತಹ ಸಾಮರ್ಥ್ಯವನ್ನು ಮಕ್ಕಳಲ್ಲಿ ಬೆಳೆಸುವ ಚಿಂತನೆ ಈ ವಿದ್ಯಾಸಂಸ್ಥೆ ಮಾಡುತ್ತಿರುವ ಕಾರ್ಯ ಶ್ಲಾಘನೀಯವಾಗಿದೆ ಎಂದರು.
ಸಂಸ್ಥೆಯ ಅಧ್ಯಕ್ಷರಾದ ಸಂತೋಷ್ ಪಾರ್ಶಿ ಅಧ್ಯಕ್ಷತೆ ವಹಿಸಿಕೊಂಡು ಮಾತನಾಡಿ ನಮ್ಮ ವಿದ್ಯಾ ಸಂಸ್ಥೆ ಗ್ರಾಮೀಣ ಬದುಕನ್ನು ಆಧರಿಸಿ ನವಯುಗದ ಶಿಕ್ಷಣಕ್ಕೆ ಸ್ಪೂರ್ತಿಯನ್ನು ತುಂಬುವ ಕೆಲಸವನ್ನು ನಾವು ಮಾಡುತ್ತಿದ್ದು ನಮ್ಮ ಜೊತೆಗೆ ಬೆಂಬಲವಾಗಿ ನಿಂತ ಮೂಡಲಗಿ ಹಾಗೂ ಸುತ್ತಲಿನ ಹಳ್ಳಿಯ ಪಾಲಕ ಬಂಧುಗಳಿಗೆ ಕೃತಜ್ಞತೆಗಳನ್ನು ಈ ಕಾರ್ಯಕ್ರಮದ ಮೂಲಕ ತಿಳಿಸುತ್ತೇನೆ ಎಂದರು.
ಕಾರ್ಯಕ್ರಮದಲ್ಲಿ ಅನ್ವರ್ ನದಾಫ್, ಮರಿಯಪ್ಪ ಮರಿಯಪ್ಪಗೋಳ್, ಮಹಾದೇವ ಗೋಕಾಕ್, ಪೂಜಾ ಪಾರ್ಶಿ, ರಮೇಶ್ ಪಾಟೀಲ್, ಬಾಳಗೌಡ ಪಾಟೀಲ್, ಬರಮಣ್ಣ ಗುಡಗೂಡಿ, ಮಾರುತಿ ಬೆಳಕೋಡ್, ಹನುಮಂತ್ ಪಾರ್ಶಿ, ಸಂಜಯ್ ಸಿಂಧಿಹಟ್ಟಿ, ಮಲ್ಲಪ್ಪ ಹಂಚಿನಾಳ ಇನ್ನಿತರರು ಹಾಜರಿದ್ದರು
ಶಾಲೆಯ ಪ್ರಾಚಾರ್ಯ ಜೋಸೆಫ್ ಬೈಲಾ ಸ್ವಾಗತಿಸಿದರು ವಿದ್ಯಾರ್ಥಿಗಳಾದ ಅಕ್ಷತಾ ವಾಗ್ಮೂಡೆ ಮತ್ತು ಭೂಮಿಕಾ ಕೌಜಲಗಿ ನಿರೂಪಿಸಿದರು ಶಿಕ್ಷಕಿ ಸುನೀತಾ ಸುಣದೋಳಿ ವಂದಿಸಿದರು ನಂತರ ಮಕ್ಕಳಿಂದ ವಿವಿಧ ಮನರಂಜನೆ ಚಟುವಟಿಕೆಗಳು ಜರುಗಿದವು.