ಗಯಾನ, ನ 15 : ಜೆಮಿಮಾ ರೊಡ್ರಿಗಸ್ (ಅಜೇಯ 40 ರನ್) ಹಾಗೂ ಬೌಲರ್ಗಳ ಶಿಸ್ತುಬದ್ಧ ದಾಳಿಯ ನೆರವಿನಿಂದ ಭಾರತ ಮಹಿಳಾ ತಂಡ ಮೂರನೇ ಟಿ-20 ಪಂದ್ಯದಲ್ಲಿ ವೆಸ್ಟ್ ವಿಂಡೀಸ್ ವಿರುದ್ಧ ಸುಲಭ ಗೆಲುವು ದಾಖಲಿಸಿತು. ಇದರೊಂದಿಗೆ ಇನ್ನೂ ಎರಡು ಪಂದ್ಯಗಳು ಬಾಕಿ ಇರುವಂತೆ ಭಾರತ ವನಿತೆಯರು ಚುಟುಕು ಸರಣಿಯನ್ನು ವಶ ಪಡಿಸಿಕೊಂಡಿತು.
ಇಲ್ಲಿನ ಪ್ರೊವಿಡೆನ್ಸ್ ಕ್ರೀಡಾಂಗಣದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ ತಂಡ ನಿಗದಿತ 20 ಓವರ್ ಗಳಿಗೆ 9 ವಿಕೆಟ್ ನಷ್ಟಕ್ಕೆ 59 ರನ್ ಗಳಿಸಿತು. ಬಳಿಕ ಕಡಿಮೆ ಮೊತ್ತದ ಗುರಿ ಹಿಂಬಾಲಿಸಿದ ಭಾರತ 16.4 ಓವರ್ ಗಳಿಗೆ ಮೂರು ವಿಕೆಟ್ ನಷ್ಟಕ್ಕೆ 60 ರನ್ ಗಳಿಸಿ ಗೆಲುವಿನ ನಗೆ ಬೀರಿತು.
ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್, ಭಾರತದ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸುವಲ್ಲಿ ವಿಫಲವಾಯಿತು. ಚೆಡೀನ್ ನ್ಯಾಷನ್ ಹಾಗೂ ಚಿನ್ನೆಲ್ಲಿ ಹೆನ್ರಿ 11 ರನ್ ಗಳಿಸಿದ್ದು, ಆತಿಥೇಯರ ಪರ ಗರಿಷ್ಠ ಮೊತ್ತವಾಗಿತ್ತು. ಇನ್ನುಳಿದವರು ಎರಡಂಕಿ ವೈಯಕ್ತಿಕ ಮೊತ್ತ ದಾಖಲಿಸಲೇ ಇಲ್ಲ. ರಾಧ ಯಾದವ್, ದೀಪ್ತಿ ಶರ್ಮಾ ತಲಾ ಎರಡು ವಿಕೆಟ್ ಪಡೆದರು. ಇನ್ನುಳಿದವರೆಲ್ಲರೂ ಒಂದೊಂದು ವಿಕೆಟ್ ಪಡೆದರು.
60 ರನ್ ಗುರಿ ಹಿಂಬಾಲಿಸಿದ ಭಾರತ ಕೂಡ ಆರಂಭದಲ್ಲಿ ಶಫಾಲಿ ವರ್ಮಾ, ಮಂಧಾನ ಹಾಗೂ ಹರ್ಮನ್ಪ್ರೀತ್ ಕೌರ್ ಅವರ ವಿಕೆಟ್ ಕಳೆದುಕೊಂಡಿತ್ತು. ಆದರೆ, ಒಂದು ತುದಿಯಲ್ಲಿ ಏಕಾಂಗಿಯಾಗಿ ಬ್ಯಾಟಿಂಗ್ ಮಾಡಿದ ಜೆಮಿಮಾ ರೊಡ್ರಿಗಸ್ 51 ಎಸೆತಗಳಲ್ಲಿ ನಾಲ್ಕು ಬೌಂಡರಿಯೊಂದಿಗೆ ಅಜೇಯ 40 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.
ಸಂಕ್ಷಿಪ್ತ ಸ್ಕೋರ್
ವೆಸ್ಟ್ ಇಂಡೀಸ್ (ಮ): 20 ಓವರ್ ಗಳಿಗೆ 59/9 (ಚೆಡೀನ್ ನ್ಯಾಷನ್ 11, ಚಿನ್ನೆಲ್ಲಿ ಹೆನ್ರಿ 11; ರಾಧ ಯಾದವ್ 6 ಕ್ಕೆ 2, ದೀಪ್ತಿ ಶರ್ಮಾ 12 ಕ್ಕೆ 2)
ಭಾರತ (ಮ): 16.4 ಓವರ್ ಗಳಿಗೆ 60/3 (ಜೆಮಿಮಾ ರೊಡ್ರಿಗಸ್ ಅಜೇಯ 40; ಹೀಲಿ ಮ್ಯಾಥ್ಯೂಸ್ 7 ಕ್ಕೆ 2).