ಲೋಕದರ್ಶನ ವರದಿ
ಯುವ ಜನಜನಾಂಗದ ಚಿಂತನೆಗಳು ವಿಶ್ವಸಮುದಾಯಕ್ಕೆ ಅವಶ್ಯಕ: ಕಾಮಗೌಡ
ಬೆಳಗಾವಿ 21: ಭಾರತದ ಜನಸಂಖ್ಯಾ ಸಂಪನ್ಮೂಲ ವಿಶ್ವಶ್ರೇಷ್ಠವಾದದ್ದು. ಅದರಲ್ಲಿ ಯುವಶಕ್ತಿ ಬಲಾಢ್ಯವಾದಾಗ ಮಾತ್ರ ವಿಕಸಿತ ಭಾರತ-2047 ಯಶಸ್ವಿಯಾಗಿ ಸಾಕಾರಗೊಳ್ಳುತ್ತದೆ. ಆ ನಿಟ್ಟಿನಲ್ಲಿ ಯುವಕರು ಸತ್ಯ, ಪ್ರಾಮಾಣಿಕತೆ, ತಾಳ್ಮೆ, ಧೈರ್ಯ-ಸ್ಥೈರ್ಯ ಮುಂತಾದ ಉತ್ತಮ ಗುಣಗಳನ್ನು ಅಳವಡಿಸಿಕೊಂಡು ಸಧೃಡವಾದ ಭಾರತವನ್ನು ಕಟ್ಟುವ ಸಂಕಲ್ಪ ತೊಡಬೇಕೆಂದು ಎಂದು ಬೆಳಗಾವಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಸಚಿವರಾದ ಸಂತೋಷ ಕಾಮಗೌಡ ಕರೆ ನೀಡಿದರು.
ಅವರು ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ಭಾರತ ಸರ್ಕಾರ, ರಾಜ್ಯ ಎನ್.ಎಸ್.ಎಸ್. ಕೋಶ ಬೆಂಗಳೂರು, ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ಬೆಳಗಾವಿ ರಾಷ್ಟ್ರೀಯ ಸೇವಾ ಯೋಜನಾ ಕೋಶ, ನೆಹರು ಯುವ ಕೇಂದ್ರ ಬೆಳಗಾವಿ ಇವರ ಸಹಯೋಗದಲ್ಲಿ ವಿಶ್ವವಿದ್ಯಾಲಯದ ಕುವೆಂಪು ಸಭಾಭವನದಲ್ಲಿ ಶುಕ್ರವಾರ 21 ರಂದು ಆಯೋಜಿಸಿದ್ದ ಜಿಲ್ಲಾ ಮಟ್ಟದ ವಿಕಸಿತ ಭಾರತ ಯುವ ಸಂಸತ್ತು” ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು. ದೇಶದ ಬದಲಾವಣೆಯಲ್ಲಿ ಯುವಕರ ಚಿಂತನೆಗಳು ಆಲೋಚನೆಗಳು ಅವಶ್ಯಕವಾಗಿ ಬೇಕು. ನಾನು ಮತ್ತು ನಮ್ಮ ಸಮಾಜ ಬದಲಾವಣೆಯಾದಾಗ ಮಾತ್ರ ಭಾರತ ವಿಶ್ವಗುರು ಆಗುತ್ತದೆ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ನಿವೃತ್ತ ವಾಯುಸೇನಾ ಅಧಿಕಾರಿ ಬಸವರಾಜ ವಣ್ಣೂರ ಮಾತನಾಡಿ, ಯುವಕರು ದೇಶದ ಸಂಪತ್ತು. ಸದಾಕಾಲ ಯುವಕರು ದೇಶದ ಪ್ರಗತಿಯ ಆಲೋಚನೆಯಲ್ಲಿ ತೊಡಗಬೇಕು. ವಿಕಸಿತ ಭಾರತ ಯುವ ಸಂಸತ್ತು ಕಾರ್ಯಕ್ರಮ ಯುವಕರ ಚಿಂತನೆಗಳಿಗೆ ವೇದಿಕೆಯಾಗಿದೆ ಎಂದರು.
ಬೆಳಗಾವಿ ನೆಹರು ಯುವ ಕೇಂದ್ರದ ಜಿಲ್ಲಾ ಯುವ ಅಧಿಕಾರಿ ಎಂ. ಗೌತಮ್ ರೆಡ್ಡಿ ಮಾತನಾಡಿ, ಕೇಂದ್ರ ಸರ್ಕಾರದ ಮಾರ್ಗದರ್ಶನದಲ್ಲಿ ವಿವಿಧ ಹಂತಗಳಲ್ಲಿ ಯುವ ಸಂಸತ್ತು ಸ್ಪರ್ಧೆ ಜರುಗಲಿದೆ. ಜಿಲ್ಲಾ ಮಟ್ಟದ ಸ್ಪರ್ಧೆಗಾಗಿ ಸುಮಾರು 500ಕ್ಕಿಂತ ಹೆಚ್ಚು ಸ್ವಯಂಸೇವಕರು/ಯುವಕರು ಒಂದು ನಿಮಿಷದ ವಿಡಿಯೋಗಳನ್ನು ಮೈ ಭಾರತ ಪೊರ್ಟಲ್ ದಲ್ಲಿ ಅಪ್ಲೋಡ್ ಮಾಡಿದ್ದರು. ಅದರಲ್ಲಿ ಬೆಳಗಾವಿ ಜಿಲ್ಲಾ ಮಟ್ಟಕ್ಕೆ 150 ಸ್ಪರ್ಧಾಳುಗಳನ್ನು ತಜ್ಞರ ಸಮಿತಿ ಆಯ್ಕೆಮಾಡಿದೆ. ಬೆಳಗಾವಿ ಜಿಲ್ಲಾ ಮಟ್ಟದಲ್ಲಿ ಆಯ್ಕೆಯಾಗಿ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಬೇಕು ಎಂಬುದು ನನ್ನ ಸದಾಶಯವಾಗಿದೆ ಎಂದರು.
ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಎನ್.ಎಸ್.ಎಸ್. ಸಂಯೋಜನಾಧಿಕಾರಿ ಡಾ. ಕನಕಪ್ಪ ಪೂಜಾರ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಜಿಲ್ಲಾ ನೋಡಲ್ ಅಧಿಕಾರಿ ಡಾ. ಸಂಜೀವ ತಳವಾರ, ತಾಲ್ಲೂಕಾ ಪ್ರಭಾರಿ ಸಂಯೋಜನಾಧಿಕಾರಿ ಯಲ್ಲಪ್ಪ ದಬಾಲಿ, ಸಂತೋಷ ಚಿಪ್ಪಾಡಿ, ಮಹೇಶ ಪೂಜಾರಿ, ಜಿಲ್ಲೆಯ ವಿವಿಧ ಕಾಲೇಜುಗಳಿಂದ ಆಗಮಿಸಿದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಐಶ್ವರ್ಯ ಕಾಂಬಳೆ ಪ್ರಾರ್ಥಿಸಿದರು. ಡಾ. ಅಶ್ವೀನಿ ಜಾಮುನಿ ನಿರೂಪಿಸಿದರು. ಜಿಲ್ಲಾ ಪ್ರಭಾರಿ ಸಂಯೋಜನಾಧಿಕಾರಿ ಪ್ರಕಾಶ ಕುರುಪಿ ಸ್ವಾಗತಿಸಿದರು. ಶಂಕರ ನಿಂಗನೂರ ವಂದಿಸಿದರು.