ಸಾಹಿತ್ಯ ರಚನೆಯ ಗೀಳು ಎಲ್ಲರಿಗೂ ದಕ್ಕುವಂತಹುದಲ್ಲ. ಕೆಲವರನ್ನು ಮಾತ್ರ ತನ್ನ ಮಡಿಲಿನಲ್ಲಿಟ್ಟು ಪೋಷಿಸುತ್ತದೆ. ಅಂಥವರಲ್ಲಿ ಡಾ.ಆರ್.ಬಿ ಚಿಲುಮಿಯವರು ಒಬ್ಬರು. ಬದುಕಿನ ವಿವಿಧ ಮುಖಗಳನ್ನು ಅನುಭವದ ನೆಲೆಯಲ್ಲಿ ಸ್ವೀಕರಿಸಿ ಆಧ್ಯಾತ್ಮಿಕ ಲೋಕದಲ್ಲಿ ಬದುಕನ್ನು ತೊಡಗಿಸಿಕೊಂಡವರು, ಬರೆಯುತ್ತಲೇ ಬಾಳಿದವರು. ಡಾ.ಚಿಲುಮಿಯವರು ಬದುಕಿನ ಹಾದಿಯೊಂದಿಗೆ ಸಾಹಿತ್ಯದ ಹಾದಿಯನ್ನು ಜತೆಯಾಗಿ ಕಂಡುಕೊಂಡವರು.ಕಾವ್ಯ, ಆಧುನಿಕ ವಚನ, ಪ್ರಬಂಧ, ಸಂಶೋಧನೆ, ವಿಮರ್ಶೆ, ಜೀವನ ಚರಿತ್ರೆ, ಸಂಪಾದನೆ ಮುಂತಾದ ಸಾಹಿತ್ಯ ಪ್ರಕಾರಗಳಲ್ಲಿ ಗ್ರಂಥಗಳನ್ನು ರಚಿಸಿ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿದ್ದಾರೆ.
ಮೂಲತಃ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಹೊಸಕೋಟೆ ಗ್ರಾಮದವರಾದ ರುದ್ರ್ಪನವರು 1951ರ ಮಾರ್ಚ್ 2ರಂದು ಜನಿಸಿದರು. ತಂದೆ ಬಸಪ್ಪ, ತಾಯಿ ಸಾವಂತ್ರೆವ್ವ. ಕಡುಬಡತನದ ಕುಟುಂಬದಲ್ಲಿ ಬೆಳೆದ ರುದ್ರ್ಪನವರು ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣವನ್ನು ಹೊಸಕೋಟೆಯಲ್ಲಿ ಪೂರೈಸಿದರು. ನಂತರ ಕಾಲೇಜು ಶಿಕ್ಷಣಕ್ಕಾಗಿ ರಾಮದುರ್ಗದ ವಿದ್ಯಾಪ್ರಸಾರಕ ಸಮಿತಿಯ ಸಿ.ಎಸ್.ಬೆಂಬಳಗಿ ಕಾಲೇಜಿಗೆ ಬಂದು ಸೇರುತ್ತಾರೆ. ಅಲ್ಲಿ ಪ್ರೊ.ಸಿ.ಎಸ್ ಹಿರೇಮಠ ಅವರ ಮಾರ್ಗದರ್ಶನದಲ್ಲಿ ಕನ್ನಡ ವಿಭಾಗಕ್ಕೆ ಪ್ರಥಮರಾಗಿ ತೇರ್ಗಡೆಯಾಗುತ್ತಾರೆ. ನಂತರ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಡಾ.ಆರ್.ಸಿ ಹಿರೇಮಠ ಅವರ ಸಹಾಯದಿಂದ ಮುರುಘಾಮಠದಲ್ಲಿ ಪ್ರವೇಶ ಪಡೆದು, 1975ರಲ್ಲಿ ಎಂ.ಎ ಸ್ನಾತಕೋತ್ತರ ಪದವಿಯನ್ನು ಕನ್ನಡ ವಿಷಯದಲ್ಲಿ ದ್ವಿತೀಯ ದರ್ಜೆಯಲ್ಲಿ ಪಾಸಾಗುತ್ತಾರೆ.
ಡಾ.ಆರ್.ಬಿ ಚಿಲುಮಿಯವರು ನೌಕರಿಗಾಗಿ ಅಲೆದಲೆದು ಸುಸ್ತಾಗಿ, ಅನಿವಾರ್ಯವಾಗಿ ಗದಗದ ಶಿವನಗುತ್ತಿ ಫ್ಯಾಕ್ಟರಿಯಲ್ಲಿ ಗುಮಾಸ್ತರಾಗಿ ಸೇವೆಯನ್ನು ಪ್ರಾರಂಭಿಸುತ್ತಾರೆ. ಅದು ಅವರಿಗೆ ತೃಪ್ತಿ ನೀಡದ ಕಾರಣ, ಶಿಕ್ಷಕ ವೃತ್ತಿಯೇ ತೃಪ್ತಿ ತರುವ ಕ್ಷೇತ್ರವೆಂದು ಭಾವಿಸಿ ನರಗುಂದ ತಾಲೂಕಿನ ಕೊಣ್ಣೂರದ ಸಂಯುಕ್ತ ಪ.ಪೂ ಕಾಲೇಜು ಹಾಗೂ ಶಿರೋಳದ ಐ.ಟಿ.ಐ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆಗೆ ಸೇರುತ್ತಾರೆ. ನಂತರ ನೌಕರಿಯ ಭದ್ರತೆಗಾಗಿ ಅವರು 1985ರಲ್ಲಿ ರಾಯಭಾಗ ತಾಲೂಕಿನ ಹಾರೋಗೇರಿಯ ವೃಷಭೇಂದ್ರ ಪದವಿ ಕಾಲೇಜಿಗೆ ಕನ್ನಡ ಉಪನ್ಯಾಸಕರಾಗಿ ವೃತ್ತಿಯನ್ನು ಪ್ರಾರಂಭಿಸುತ್ತಾರೆ. ಐದಾರು ವರ್ಷಗಳು ಕಳೆದ ನಂತರ ರುದ್ರಣ್ಣ ಚಿಲುಮಿಯವರು ಖಾಯಂ ಪ್ರಾಧ್ಯಾಪಕರಾಗಿ ನೇಮಕಾತಿಗೊಂಡು, ಅದೇ ಕಾಲೇಜಿನ ಪ್ರಾಂಶುಪಾಲರಾಗಿ ಸೇವೆಗೈದು ಮಾರ್ಚ್ 31, 2011ರಲ್ಲಿ ನಿವೃತ್ತಿ ಹೊಂದುತ್ತಾರೆ. ಅವರು 2004ರಲ್ಲಿ ಡಾ.ವ್ಹಿ.ಎಸ್ ಮಾಳಿ ಅವರ ಮಾರ್ಗದರ್ಶನದಲ್ಲಿ ಬ.ಗಿ.ಯಲ್ಲಟ್ಟಿ: ಸಮಗ್ರ ಸಾಹಿತ್ಯ ಮಹಾ ಪ್ರಬಂಧವನ್ನು ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಸಲ್ಲಿಸಿ ಡಾಕ್ಟರೇಟ್ ಪದವಿಯನ್ನು ಪಡೆದಿರುತ್ತಾರೆ. ಅವರ ಶಿಸ್ತು, ದಕ್ಷತೆ, ಪ್ರಾಮಾಣಿಕತೆ, ಕ್ರಿಯಾಶಿಲತೆಗಳನ್ನು ಗಮನಿಸಿದ ಕಾಲೇಜಿನ ಆಡಳಿತ ಮಂಡಳಿಯವರು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಸಂಯೋಜಕರನ್ನಾಗಿ ನೇಮಿಸುತ್ತಾರೆ. ಅವರು ಹಾರೊಗೇರಿಯಲ್ಲಿ 26 ವರ್ಷಗಳ ಅನುಪಮ ಸೇವೆಯನ್ನು ಸಲ್ಲಿಸಿ, ಧಾರವಾಡಕ್ಕೆ ಬಂದು ನೆಲೆಸುತ್ತಾರೆ.
ಡಾ.ಆರ್.ಬಿ ಚಿಲುಮಿಯವರು ಕಾವ್ಯ, ಆಧುನಿಕ ವಚನ, ಜೀವನ ಚರಿತ್ರೆ, ವೈಚಾರಿಕ ಸಾಹಿತ್ಯ, ವಿಮರ್ಶೆ, ಸಂಶೋಧನೆ, ಸಂಪಾದನೆ ಮುಂತಾದ ಸಾಹಿತ್ಯ ಪ್ರಕಾರಗಳಲ್ಲಿ ನೂರಕ್ಕೂ ಹೆಚ್ಚು ಗ್ರಂಥಗಳನ್ನು ರಚಿಸಿ ಕನ್ನಡ ಸಾರಸ್ವತ ಲೋಕವನ್ನು ಶ್ರೀಮಂತಗೊಳಿಸಿದ್ದಾರೆ. ಅವರು ಎಂಟು ಕವನಸಂಕಲನ, ಎಂಟು ಆಧುನಿಕ ವಚನಸಂಕಲನ, ಹದಿನಾಲ್ಕು ಜೀವನಚರಿತ್ರೆಗಳು, ಒಂಭತ್ತು ವೈಚಾರಿಕ ಪ್ರಬಂಧ ಸಂಕಲನಗಳು, ಹನ್ನೊಂದು ಸಂಶೋಧನೆ, ಹದಿನೈದು ಸಂಪಾದಿತ ಕೃತಿಗಳು, ಹದಿನಾರು ಸಾಹಿತ್ಯ ಅವಲೋಕನಗಳು ಮತ್ತು ಹದಿನೆಂಟು ಶರಣ ಸಾಹಿತ್ಯದಲ್ಲಿ ಕೃತಿಗಳನ್ನು ರಚಿಸಿ ಜನಮಾನಸರಾಗಿದ್ದಾರೆ. ಅವರ ಮೊದಲ ಕವನಸಂಕಲನ ‘ಬತ್ತೀಸರಾಗ’ ದಲ್ಲಿ 32 ಕವಿತೆಗಳಿಂದ ಕೂಡಿದ್ದು, ತಾವು ಪಟ್ಟ ಪಾಡುಗಳನ್ನು ಹಾಡುಗಳಲ್ಲಿ ಒಡಮೂಡಿಸಿದ್ದಾರೆ. ಅಪ್ಪ, ಅವ್ವ, ಮತ್ತು ನಾನು, ಜಾನಪದ ಸ್ತುತಿ, ಪ್ರಳಯದ ಭಯ, ಕನಸು ನನಸಾಗಿಸೋಣ, ಬಾಳಬಟ್ಟೆ, ಇರುವೆ ನಾನೆಲ್ಲೆಲ್ಲೂ ಇರುವೆ, ಮರೆಯಲಾರದ ನೆನಪು ಕವನಸಂಕಲನಗಳನ್ನು ಅವರು ಪ್ರಕಟಿಸಿದ್ದಾರೆ. ಬಾಳಬಟ್ಟೆ ಕವನಸಂಕಲನದಲ್ಲಿ 40 ಕವಿತೆಗಳಿದ್ದು ತಮ್ಮ ಸೇವಾವಧಿಯಲ್ಲಿ ಎದುರಿಸಿದ ಕಷ್ಟಪಟ್ಟ ಪಾಡುಗಳನ್ನು ಕವಿತೆಗಳಲ್ಲಿ ಚಿತ್ರಿಸಿದ್ದಾರೆ. ವಚನ ವೃಷಭ, ವಚನ ನಮನ, ಸಾವಿರದ ಶಿವಯೋಗಿ ವಚನಗಳು, ವಚನ ಸಂಪದ, ವಚನ ಪ್ರಸಾದ, ವಚನ ನೈವೇದ್ಯ, ವಚನ ವೈವಿಧ್ಯ, ವಚನವೈಭವ ಕೃತಿಗಳು ಆಧುನಿಕ ವಚನ ಸಂಕಲನಗಳಾಗಿವೆ.
ಜೀವನಚರಿತ್ರೆಗೆ ಸಂಬಂಧಪಟ್ಟ ಕೃತಿಗಳು ಮೌಲಿಕವಾಗಿವೆ. ಕುಳ್ಳೂರ ಕಲ್ಮಠದ ಶಿವಯೋಗೀಶ್ವರರು, ಸದ್ಗುರು ರೇವಯ್ಯ ಮಹಾಸ್ವಾಮಿಗಳು, ಸದ್ಗುರು ಸಿದ್ಧರಾಮೇಶ್ವರರು, ಕಿನ್ನರಿ ಬ್ರಹ್ಮಯ್ಯ, ಜಗಜ್ಯೋತಿ ಬಸವೇಶ್ವರ, ಮಹಾಯೋಗಿ ವೇಮನ, ಪುಟ್ಟರಾಜ ಗವಾಯಿಗಳು, ಕನಕದಾಸರು, ಹಂಶಕವಿ: ಅಪರೂಪದ ಪೋಲಿಸ ಸಾಹಿತಿ, ನಡೆದಾಡುವ ದೇವರು ಡಾ.ಶಿವಕುಮಾರ ಸ್ವಾಮಿಗಳು, ಶರಣ ಸಂಪದ ಮುಂತಾದ ಜೀವನ ಚರಿತ್ರೆಗಳನ್ನು ಸಾಹಿತ್ಯ ಲೋಕಕ್ಕೆ ನೀಡಿದ್ದಾರೆ. ಅವರು ಬ.ಗಿ.ಯಲ್ಲಟ್ಟಿ ಸಮಗ್ರ ಸಾಹಿತ್ಯ, ಕುರುಹಿನಶೆಟ್ಟರು; ಒಂದು ಅಧ್ಯಯನ, ಬಾಗೇನಾಡಿನ ಹರನಗಿರಿ ಜೈನಧರ್ಮ ದರ್ಣ, ಜಾನಪದ ಸಿರಿ, ಉತ್ತರ ಕರ್ನಾಟಕದ ಹಬ್ಬಗಳು, ಆಧುನಿಕ ವಚನಸಾಹಿತ್ಯ: ಒಂದು ಅಧ್ಯಯನ, ಸಿದ್ಧಪುರುಷರ ಜೀವನ ಸಾಧನೆ ಮುಂತಾದ ಸಂಶೋಧನ ಗ್ರಂಥಗಳು ಸಂಶೋಧನೆ ಮಾಡುವ ವಿದ್ಯಾರ್ಥಿಗಳು ದಾರೀದೀಪವಾಗಿವೆ. ಅವರ ಸಂಪಾದನೆಯ ಕೃತಿಗಳು ಅಚ್ಚುಕಟ್ಟುತನದಿಂದ ಪ್ರಕಟಗೊಂಡಿವೆ. ಕುರುಹು-ಅರಿವು, ಆಲಭೈರಿ ಕವಿಯ ತತ್ವಪದಗಳು, ಪ್ರಬಂಧ ಸಂಪದ, ಶಾಹೀನ್, ಸತ್ಯದರ್ಶನ, ಶಿಕ್ಷಣ ಸಿರಿ, ಬೆಳಗಾವಿ ಜಿಲ್ಲೆಯ ಆಧುನಿಕ ವಚನ ಸಂಪುಟಗಳು, ಬಾಳು ಬೆಳಗುವ ನುಡಿಮುತ್ತುಗಳು, ಭಕ್ತಿಯ ಬೆಳೆಸಿರಿ ಬಸವಣ್ಣ ಮುಂತಾದ ಸಂಪಾದನೆ ಕೃತಿಗಳನ್ನು ಹೊರತರುವಲ್ಲಿ ಶ್ರಮಪಟ್ಟಿದ್ದಾರೆ. ಅವರು ಮೂವತ್ತಕ್ಕೂ ಹೆಚ್ಚು ಶರಣ ಸಾಹಿತ್ಯದ ಕೃತಿಗಳನ್ನು ರಚಿಸಿರುವುದು ವಿಶೇಷ. ವಚನಕಾರರ ಸಿದ್ಧಿ-ಸಾಧನೆ, ಆತ್ಮವಿಜ್ಞಾನಿ ಬಸವೇಶ್ವರರು, ಐವರು ಪ್ರಸಿದ್ಧ ವಚನಕಾರರು, ಆಸೆಯೇ ಭಾವದ ಬೀಜ, ಶ್ರೀ ವಿಭೂತಿ ರುದ್ರಾಕ್ಷಿ ಮಂತ್ರ, ಲಿಂಗಾಯತರಲ್ಲಿ ಮತಾಂತರ: ಒಂದು ಪರಿಕಲ್ಪನೆ, ಅರಿತರೆ ಶರಣ ಮರೆತರೆ ಮಾನವ, ಬಸವಣ್ಣನವರ ವಚನಗಳಲ್ಲಿ ಜೀವನಮೌಲ್ಯಗಳು, ನೀತಿಯೇ ಮೋಕ್ಷಕ್ಕೆ ಸಾಧನೆ, ಕಾಯಕ ಮತ್ತು ದಾಸೋಹಗಳ ಪರಿಕಲ್ಪನೆ ಮುಂತಾದ ಶರಣ ಸಾಹಿತ್ಯ ಕೃತಿಗಳನ್ನು ಪ್ರಕಟಿಸಿದ್ದಾರೆ.
ಡಾ.ಚಿಲುಮಿಯವರು ಭಜನೆ ಪದ, ಡೊಳ್ಳಿನ ಪದ ಸಂಶೋಧಿಸಿ ಸಂಪಾದಿಸಿರುವರು. ಮಿತವಾಗಿ ಮಾತನಾಡುವ ಡಾ.ರುದ್ರಣ್ಣ ಚಿಲುಮಿಯವರು ಸೌಮ್ಯ ಸ್ವಭಾವದವರಾಗಿದ್ದಾರೆ. ಸಿದ್ಧಗಂಗಾಮಠದಲ್ಲಿ ಉಪನ್ಯಾಸ, ನಿರಂತರ ಸಾಹಿತ್ಯಿಕ, ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಸೇವೆ ಸಲ್ಲಿಸಿದ ಅವರು ಸಾಹಿತ್ಯದ ಆರಾಧನೆಯಲ್ಲಿಯೇ ತೊಡಗಿಸಿಕೊಂಡಿದ್ದಾರೆ. 2008ರಲ್ಲಿ ಪ್ರೊ.ಈಶ್ವರಗೌಡ ಚೋಬಾರಿಯವರು ‘ಡಾ.ಆರ್.ಬಿ ಚಿಲುಮಿ:ಬದುಕು ಬರಹ’ ಪ್ರಬಂಧವನ್ನು ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ಸಲ್ಲಿಸಿ ಎಂ.ಫಿಲ್ ಪದವಿಯನ್ನು ಪಡೆದಿರುವುದು ಡಾ.ಚಿಲುಮಿಯವರ ಗೌರವವನ್ನು ಹೆಚ್ಚಿಸಿದೆ. ಹಾಗೆಯೇ ಬೀದರದ ಹಂಶಕವಿ ಅವರು ‘ಡಾ.ಆರ್.ಬಿ ಚಿಲುಮಿ: ಜೀವನ ಸಾಧನೆ’ ಕುರಿತು ‘ಚೈತನ್ಯದ ಚಿಲುಮೆ’ ಎಂಬ ಗ್ರಂಥವನ್ನು ಅರ್ಿಸಿ ಗೌರವ ಸೂಚಿಸಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಹಲವು ಸಂಶೋಧನಾ ವಿದ್ಯಾರ್ಥಿಗಳು ಎಂ.ಫಿಲ್ ಮತ್ತು ಪಿ.ಎಚ್.ಡಿ ಪದವಿಯನ್ನು ಪಡೆದಿರುವುದು ವಿಶೇಷ. ಡಾ.ರುದ್ರಣ್ಣ ಚಿಲುಮಿಯವರು 1979ರ ಜೂನ್ 4ರಂದು ನರಗುಂದದ ಈಶ್ವರ್ಪ ಹಳಕಟ್ಟಿ ಅವರ ಮಗಳಾದ ಸುವರ್ಣಾಳನ್ನು ಮದುವೆಯಾದರು. ಅವರಿಗೆ ಇಬ್ಬರು ಮಕ್ಕಳು, ಮಗಳು ರೋಹಿಣಿ ಕೆ.ಇ ಬೋರ್ಡ್ ಪ್ರೌಢಶಾಲೆಯಲ್ಲಿ ಶಿಕ್ಷಕಿಯಾಗಿದ್ದು, ಸರ್ಕಾರಿ ವೈದ್ಯ ಉಮೇಶ ತುರಮರಿ ಅವರನ್ನು ಮದುವೆಯಾಗಿ ಧಾರವಾಡದಲ್ಲಿ ನೆಲೆಸಿದ್ದಾರೆ. ಮಗ ರೋಹಿತ ಇಂಜಿನಿಯರ್‌ರಾಗಿದ್ದಾರೆ. ಅವರು ತುಂಬು ಕುಟುಂಬದೊಂದಿಗೆ ಧಾರವಾಡದ ಜಲದರ್ಶಿನಿ ನಗರದಲ್ಲಿ ಸಾಹಿತ್ಯಿಕ ಚಟುವಟಿಕೆಗಳೊಂದಿಗೆ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಡಾ.ಆರ್.ಬಿ ಚಿಲುಮಿಯವರ ಸಾಧನೆಯನ್ನು ಗುರುತಿಸಿದ ನಾಡಿನ ಸಂಘ-ಸಂಸ್ಥೆಗಳು ಪ್ರಶಸ್ತಿ-ಪುರಸ್ಕಾರಗಳನ್ನು ನೀಡಿ ಗೌರವಿಸಿವೆ. ಜಗಜ್ಯೋತಿ ಬಸವರತ್ನ, ಕರ್ನಾಟಕ ಭೂಷಣ, ಸಾಹಿತ್ಯ ಶ್ರೀ, ಸಿದ್ಧ ಸಿರಿ, ಬಸವಚೇತನ, ಆದರ್ಶ ಪ್ರಾಧ್ಯಾಪಕ, ಸೃಜನಶೀಲ ಸಾಹಿತಿ, ಕರ್ನಾಟಕ ಕವಿರತ್ನ ಮುಂತಾದ ಪ್ರಶಸ್ತಿ-ಪುರಸ್ಕಾರಗಳಿಗೆ ಅವರು ಭಾಜನರಾಗಿದ್ದಾರೆ. ಅವರಿಗೆ ರಾಮದುರ್ಗ ತಾಲೂಕಾ ಆರನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಯ ಗೌರವವು ಲಭಿಸಿದೆ.
ಡಾ.ಆರ್.ಬಿ ಚಿಲುಮಿಯವರು ಹಲವು ಸಂಘ-ಸಂಸ್ಥೆಗಳ ಶ್ರೇಯಸ್ಸಿಗಾಗಿ ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸಿರುವರು. ರಾಯಭಾಗ ತಾಲೂಕಾ ಮಕ್ಕಳ ಸಾಹಿತ್ಯ ವೇದಿಕೆಯ ಅಧ್ಯಕ್ಷರಾಗಿ, ರಾಯಭಾಗ ತಾಲೂಕಾ ಕಸಾಪ ಕಾರ್ಯದರ್ಶಿಯಾಗಿ ಮೂರು ಬಾರಿ, ಹಾರೋಗೇರಿಯ ರಂಗತರಂಗ ವೇದಿಕೆ, ದು.ನಿಂ.ಬೆಳಗಲಿ ಪ್ರತಿಷ್ಠಾನ, ಕರ್ನಾಟಕ ವಿದ್ಯಾವರ್ಧಕ ಸಂಘ, ಬಸವತತ್ವ ಪ್ರಸಾರ ಸಂಸ್ಥೆ, ಹೊಂಬೆಳಕು ಸಾಂಸ್ಕೃತಿಕ ಸಂಘ ಹೀಗೆ ಹತ್ತು ಹಲವು ಸಂಘ-ಸಂಸ್ಥೆಗಳ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಅವರು ಉತ್ತಮ ಭಾಷಣಕಾರರಾಗಿ ಕ.ವಿ.ವಿ, ದ.ರಾ.ಬೇಂದ್ರೆ ಟ್ರಸ್ಟ್, ರಂಗಾಯಣ, ಮಠ ಮಂದಿರಗಳಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಉತ್ಸಾಹದಿಂದ ಭಾಗವಹಿಸುತ್ತಲಿರುವರು. ಹಲವು ಬಾರಿ ತುಮಕೂರಿನ ಶ್ರೀ ಸಿದ್ಧಗಂಗಾಮಠದಲ್ಲಿ ಉಪನ್ಯಾಸ ಮಾಡಿ ಪೂಜ್ಯರಿಂದ ಆಶೀರ್ವಾದ ಅಭಿನಂದನೆ ಸ್ವೀಕರಿಸಿದ್ದಾರೆ. ಸಾಹಿತ್ಯದ ಆರಾಧಕರಾದ ಡಾ.ರುದ್ರಣ್ಣ ಚಿಲುಮಿ ಅವರಿಗೆ ಪುಸ್ತಕಗಳ ಮೇಲೆ ಅಪಾರ ಪ್ರೀತಿ, ಪುಸ್ತಕಗಳೇ ಅವರಿಗೆ ಕಾಮಧೇನು, ಕಲ್ಪವೃಕ್ಷ. ಅವರ ಮನೆ ತುಂಬಾ ಪುಸ್ತಕಗಳದೇ ದರ್ಬಾರು. ಮನೆಯಲ್ಲಿ ಐದು ರಾ್ಯಕ್ಗಳಲ್ಲಿ ಐದು ಸಾವಿರಕ್ಕೂ ಹೆಚ್ಚು ಪುಸ್ತಕಗಳು ಅಲಂಕೃತಗೊಂಡಿವೆ. ಸಾಹಿತ್ಯ, ಸಂಸ್ಕೃತಿ ಸಂವರ್ಧನೆಗಾಗಿಯೇ ಮೀಸಲಾದ ಬದುಕು ಅವರದು. ಕಾವ್ಯ, ಕಥೆ, ಕಾದಂಬರಿ, ಜೀವನಚರಿತ್ರೆ, ಶರಣರ ಸಂಪುಟ, ಸಂಶೋಧನಾ ಕೃತಿ, ಅಭಿನಂದನಾ ಗ್ರಂಥ, ಬಸವದರ್ಶನ ಗ್ರಂಥಗಳ ಸಂಗ್ರಹವಿದೆ. ಅವರು ಪುಸ್ತಕಗಳ ಸಂಗ್ರಹದೊಂದಿಗೆ 16ನೇ ಶತಮಾನದ ಲಿಪಿಗಳ ಓಲೆ ಎಲೆಯಲ್ಲಿ ಬರೆದ ಸಂಗ್ರಹವನ್ನು ಮಾಡಿದ್ದಾರೆ. ಅನೇಕ ಸಾಹಿತ್ಯಾಸಕ್ತರನ್ನು, ಸಂಶೋಧಕರನ್ನು ಮತ್ತು ಅಧ್ಯಯನಶೀಲರನ್ನು ಚಿಲುಮಿಯವರ ಪುಸ್ತಕಾಲಯವು ಆಕರ್ಷಿಸುತ್ತದೆ.
ವಿಮರ್ಶಕರಾಗಿ, ಕವಿಯಾಗಿ, ಸಂಶೋಧಕರಾಗಿ, ಚಿಂತಕರಾಗಿ, ಉತ್ತಮ ವಾಗ್ಮಿಗಳಾಗಿ ನಾಡಿನಾದ್ಯಂತ ಡಾ.ಆರ್.ಬಿ ಚಿಲುಮಿಯವರು ಕ್ರಿಯಾಶೀಲರಾಗಿದ್ದಾರೆ. ಎಲ್ಲರಲ್ಲೂ ಸ್ನೇಹವರ್ತನೆ, ಪರಾನುಕಂಪ ಅವರ ಜೀವನ ಧರ್ಮದ ಎರಡು ವಿಶಿಷ್ಟ ದ್ರವ್ಯಗಳು. ಅವರು ಸಾಹಿತಿ, ವಿಚಾರವಂತರೊಂದಿಗೆ, ಮಠಮಾನ್ಯಗಳೊಂದಿಗೆ ಮತ್ತು ಜನಸಾಮಾನ್ಯರೊಂದಿಗೆ ಬೆಳೆಸಿಕೊಂಡ ಆತ್ಮೀಯತೆ ನಿಜಕ್ಕೂ ಅದ್ಭುತವಾದುದು. ಡಾ.ರುದ್ರಣ್ಣ ಚಿಲುಮಿಯವರ ಅರ್ಥವತ್ತಾದ ಬದುಕಿಗೆ ಶಿಸ್ತು, ಸಂಯಮ, ದಕ್ಷ ಪ್ರಾಮಾಣಿಕತೆ, ಕರ್ತವ್ಯ ಪ್ರಜ್ಞೆಗಳೇ ಜೀವನದ ಮೌಲ್ಯಗಳಾಗಿವೆ. ಅಂತೆಯೇ ಅವರು ಎಂದೂ ಬತ್ತಲಾರದ ಚೈತನ್ಯದ ಚಿಲುಮೆಯಾಗಿದ್ದಾರೆ.
- * * * -
9