ಏಳನೇ ಪ್ರೊ ಕಬಡ್ಡಿ ಲೀಗ್ ಪ್ರಶಸ್ತಿ ಮೊತ್ತ 8 ಕೋಟಿ ರೂ.

ನವದೆಹಲಿ, ಅ 12:      ಪ್ರಸ್ತುತ ನಡೆಯುತ್ತಿರುವ ಪ್ರೊ ಕಬಡ್ಡಿ ಏಳನೇ ಆವೃತ್ತಿ ಅಂತಿಮ ಘಟ್ಟ ತಲುಪಿದ್ದು, ಈ ವಾರದಲ್ಲಿ ನಡೆಯುವ ಎಲ್ಲ ಪಂದ್ಯಗಳು ಸಾಕಷ್ಟು ಕುತೂಹಲ ಕೆರಳಿಸಿವೆ. ಈ ಹಿನ್ನೆಲೆಯಲ್ಲಿ ಕಬಡ್ಡಿ ಅಭಿಮಾನಿಗಳಿ ಭರ್ಜರಿ ರಸದೌತಣ ಉಣಬಡಿಸಲು ಅಹಮದಾಬಾದ್ನ ಟ್ರಾನ್ಸ್ ಸ್ಟೇಡಿಯಾದಲ್ಲಿ ವೇದಿಕೆ ಸಿದ್ದವಾಗಿದೆ. ಇದರ ನಡುವೆ ಏಳನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ನ ಪ್ರಶಸ್ತಿ ಮೊತ್ತ  ಎಂಟು ಕೋಟಿ ರೂ. ಎಂದು ಆಯೋಜಕರು ಶನಿವಾರ ಪ್ರಕಟಿಸಿದ್ದಾರೆ. ಪ್ರೊ ಕಬಡ್ಡಿ ಲೀಗ್ನ ಪ್ಲೇ ಆಫ್ ತಲುಪುವ ಎಲ್ಲ ತಂಡಗಳಿಗೂ ಇಂತಿಷ್ಟು ಹಣ ನೀಡಲಾಗುತ್ತದೆ. ಚಾಂಪಿಯನ್ ತಂಡಕ್ಕೆ ಮೂರು ಕೋಟಿ ರೂ. ಹಾಗೂ ರನ್ನರ್ ಅಪ್ ತಂಡಕ್ಕೆ 1.8 ಕೋಟಿ ರೂ. ನೀಡಲಾಗುವುದು. ಮೂರು ಹಾಗೂ ನಾಲ್ಕನೇ ಸ್ಥಾನ ಪಡೆಯುವ ತಂಡಗಳು ಕ್ರಮವಾಗಿ ತಲಾ 90 ಲಕ್ಷ ರೂ. ಪಡೆಯಲಿದೆ. ಜತೆಗೆ ಐದು ಹಾಗೂ ಆರನೇ ಸ್ಥಾನ ಪಡೆಯುವ ತಂಡಗಳು ತಲಾ 45 ಲಕ್ಷ ರೂ. ತನ್ನ ಕಿಸೆಗೆ ಸೇರಿಸಿಕೊಳ್ಳಲಿವೆ.  ಇದರ ಜತೆಗೆ, ಪ್ರತಿ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ತೋರುವ ಆಟಗಾರರು ವೈಯಕ್ತಿಕ ಪ್ರಶಸ್ತಿಯನ್ನು ಪ್ರತ್ಯೇಕವಾಗಿ ಪಡೆದುಕೊಳ್ಳಲಿದ್ದಾರೆ. ದಬಾಂಗ್ ಡೆಲ್ಲಿ, ಬೆಂಗಾಲ್ ವಾರಿಯರ್ಸ, ಹರಯಾಣ ಸ್ಟೀಲರ್ಸ, ಯು.ಪಿ ಯೋಧ, ಯು ಮುಂಬಾ ಹಾಗೂ ಬೆಂಗಳೂರು ಬುಲ್ಸ್ ತಂಡಗಳು ಪ್ಲೇ ಆಫ್ ಹಂತದಲ್ಲಿ ಸೆಣಸಲಿವೆ.