ನವದೆಹಲಿ, ನ 9 : ಅಯೋಧ್ಯಾ ಪ್ರಕರಣದ ವಿಚಾರಣೆ ದೇಶದ ನ್ಯಾಯಾಂಗ ಇತಿಹಾಸದಲ್ಲೇ ನಡೆದ ಅತಿ ದೊಡ್ಡ ದೀರ್ಘಕಾಲದ ಎರಡನೇ ವಿಚಾರಣೆಯಾಗಿದೆ. ಕಳೆದ ಆಗಸ್ಟ್ 6 ರಿಂದ ಆರಂಭವಾದ ರಾಮ ಜನ್ಮಭೂಮಿ ವಿವಾದದ ವಿಚಾರಣೆ ಸತತ 40 ದಿನಗಳ ಕಾಲ ನಡೆದಿದೆ. ಇದಕ್ಕೆ ಮೊದಲು ಕೇಶವಾನಂದ ಭಾರತಿ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನಲ್ಲಿ 60 ದಿನಗಳಿಗೂ ಹೆಚ್ಚು ಕಾಲ ವಿಚಾರಣೆ ನಡೆದು ಹೊಸ ದಾಖಲೆ ನಿರ್ಮಾಣವಾಗಿತ್ತು. ಅಯೋಧ್ಯಾ ಪ್ರಕರಣದ ವಿಚಾರಣೆ ಸುಪ್ರೀಂಕೋರ್ಟ್ಇತಿಹಾಸದಲ್ಲಿ ಎರಡನೇ ದೀರ್ಘಕಾಲೀನ ವಿಚಾರಣೆಯಾಗಿದೆ ಎಂಬುದು ಕಾನೂನು ಪಂಡಿತರ ಅಭಿಪ್ರಾಯವಾಗಿದೆ. ಅಯೋಧ್ಯಾ ಭೂ ವಿವಾದಕ್ಕೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಖಲೀಫುಲ್ಲಾ ನೇತೃತ್ವದ ಸಮಿತಿಯನ್ನು ಸುಪ್ರೀಂಕೋರ್ಟ್ ನೇಮಕ ಮಾಡಿತ್ತು. ಆದರೆ ಸಂಧಾನ ಸಮಿತಿ ಸರ್ವ ಸಮ್ಮತ ಪರಿಹಾರ ರೂಪಿಸುವಲ್ಲಿ ವಿಫಲವಾದ ನಂತರ ನ್ಯಾಯಾಲಯ ಕಳೆದ ಆಗಸ್ಟ್ 6 ರಿಂದ ಆದ್ಯತೆ ಮೇರೆಗೆ ಸತತ 40 ದಿನಗಳ ಕಾಲ ವಿಚಾರಣೆಯನ್ನು ನಡೆಸಿತ್ತು. ನಿವೃತ್ತ ನ್ಯಾಯಮೂರ್ತಿ ಖಲೀಫುಲ್ಲಾ ನೇತೃತ್ವದಲ್ಲಿ ಮೂವರು ಸದಸ್ಯರ ಮಧ್ಯಸ್ಥಿಕೆ ಸಮಿತಿಯನ್ನು ಸುಪ್ರೀಂಕೋರ್ಟ್ ರಚನೆ ಮಾಡಿತ್ತು. ಬೆಂಗಳೂರು ಮೂಲದ ಆರ್ಟ್ ಆಫ್ ಲಿವಿಂಗ್ ನ ರವಿಶಂಕರ್ ಗುರೂಜಿ ಮತ್ತು ಹಿರಿಯ ವಕೀಲ ಶ್ರೀರಾಮ ಪಂಚು ಈ ಸಮಿತಿಯಲ್ಲಿ ಇದ್ದರು.