ನವದೆಹಲಿ, ಜ.6, ದೆಹಲಿ ವಿಧಾನಸಭೆಯ ಚುನಾವಣೆಗೆ ಸೋಮವಾರ ಚುನಾವಣಾ ಆಯೋಗ ವೇಳಾಪಟ್ಟಿ ಪ್ರಕಟಿಸಲಿದೆ.ಮಧ್ಯಾಹ್ನ 3.30ಕ್ಕೆ ರಾಷ್ಟ್ರ ರಾಜಧಾನಿಯ ನಿರ್ವಚನ್ ಸದನದಲ್ಲಿ ಆಯೋಗ ವೇಳಾಪಟ್ಟಿಯನ್ನು ಪ್ರಕಟಿಸಲು ಸುದ್ದಿಗೋಷ್ಠಿ ಕರೆದಿದೆ.ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮತ್ತು ನಾಗರಿಕರ ರಾಷ್ಟ್ರೀಯ ನೋಂದಣಿ (ಎನ್‌ಆರ್‌ಸಿ) ಗೆ ಸಂಬಂಧಿಸಿ ದೆಹಲಿಯ ಅನೇಕ ಸ್ಥಳಗಳಲ್ಲಿ ಹಿಂಸಾತ್ಮಕ ಬೃಹತ್ ಪ್ರತಿಭಟನೆಗಳಿಗೆ ಸಾಕ್ಷಿಯಾಗುತ್ತಿರುವ ಸಂದರ್ಭದಲ್ಲೇ ಮತದಾನ ಘೋಷಣೆಯಾಗುತ್ತಿದೆ.
ಭಾನುವಾರ ರಾತ್ರಿ ಜೆಎನ್‌ಯು ಕ್ಯಾಂಪಸ್‌ನಲ್ಲಿ ಮುಖವಾಡ ಧರಿಸಿದ ದುಷ್ಕರ್ಮಿಗಳು ನಡೆಸಿದ ದಾಳಿ ಪ್ರಕರಣ, ರಾಜಕೀಯ ಬಿರುಗಾಳಿಗೆ ಕಾರಣವಾಗಿದ್ದು, ರಾಜಕೀಯ ಪಕ್ಷಗಳು ಪರಸ್ಪರ ಆರೋಪ-ಪ್ರತ್ಯಾರೋಪದಲ್ಲಿ ತೊಡಗಿವೆ.70 ಸದಸ್ಯ ಬಲದ ದೆಹಲಿ ವಿಧಾನಸಭೆಯ ಅವಧಿ ಫೆಬ್ರವರಿ 22, 2020 ಕ್ಕೆ ಕೊನೆಗೊಳ್ಳುತ್ತದೆ.ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷ (ಎಎಪಿ) 2015 ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಭಾರಿ ಗೆಲುವು ಸಾಧಿಸಿ ಅಧಿಕಾರಕ್ಕೆ ಏರಿತ್ತು.