ರೌಡಿಶೀಟರ್ ಕಾಲಿಗೆ ಗುಂಡೇಟು

ಬೆಂಗಳೂರು, ಜೂ.3,ಪೊಲೀಸರ ಮೇಲೆ ಡ್ರ್ಯಾಗರ್ ನಿಂದ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ರೌಡಿಶೀಟರ್ ಕಾಲಿಗೆ ಬೆಳಗಿನ ಜಾವ ಗುಂಡು ಹಾರಿಸಿ ಅಮೃತಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಈತ ಅಮೃತಹಳ್ಳಿಯ ರೌಡಿಶೀಟರ್ ಆಗಿರುವ ಮುನಿರತ್ನ ಮದ್ಯ ನೀಡಿಲ್ಲ ಎಂದು ತನ್ನ ಗೆಳೆಯನಿಗೆ ಚಾಕುವಿನಿಂದ ಇರಿದಿದ್ದ.ಆರೋಪಿ ಬಾಗಲೂರು ಠಾಣಾ ವ್ಯಾಪ್ತಿಯ ಮಿಟ್ಟಗಾನಹಳ್ಳಿ ಕಲ್ಲು ಕ್ವಾರೆ ಸಮೀಪ ಆರೋಪಿಗಳಿರುವ ಖಚಿತ ಮಾಹಿತಿ ಪಡೆದು ದಾಳಿ ನಡೆಸಿದರು.  ಪೊಲೀಸರು ಸ್ಥಳ ಪರಿಶೀಲನೆ ನಡೆಸಿದಾಗ ಮಿಟ್ಟಗಾನಹಳ್ಳಿ ಮುಖ್ಯ ರಸ್ತೆಯಲ್ಲಿರುವ ಬಲಬಾಗದ ಪಾಳು ಬಿದ್ದಿರುವ ಮನೆಯ ಹತ್ತಿರ ಒಂದು ಹೊಂಡಾ ಆ್ಯಕ್ಟಿವಾ ಸ್ಕೂಟಿ ಕಂಡುಬಂದಿತ್ತು.

ತಕ್ಷಣ ಪೊಲೀಸರನ್ನು ನೋಡುತ್ತಿದ್ದಂತೆ ಪಾಳು ಬಿದ್ದ ಮನೆಯ ಕಡೆಯಿಂದ ಓರ್ವ ಪರಾರಿಯಾಗಿದ್ದ.   ಈ ಸಂದರ್ಭದಲ್ಲಿ ಮುನಿಕೃಷ್ಣ ಪೊಲೀಸರ ಕಣ್ಣಿಗೆ ಬಿದ್ದಿದ್ದು,  ಆತನನ್ನು ಬಂಧಿಸಲು ಮುಂದಾದಾಗ ಈ ವೇಳೆ ಆತ ಪೊಲೀಸ್ ಪೇದೆಗೆ ಡ್ರ್ಯಾಗರ್ ನಿಂದ ಹಲ್ಲೆ  ಮಾಡಿ ಪರಾರಿಯಾಗಲು ಯತ್ನಿಸಿದ್ದ.ಈ ಸಂದರ್ಭದಲ್ಲಿ ಆರೋಪಿಗೆ ಶರಣಾಗುವಂತೆ ಪೊಲೀಸರು ಸೂಚಿಸಿದರೂ ಆತ ಮಾತು ಕೇಳದ ಹಿನ್ನೆಲೆಯಲ್ಲಿ ಆತ್ಮ ರಕ್ಷಣೆಗಾಗಿ ಅಮೃತ ಹಳ್ಳಿ ಪೊಲೀಸ್ ಇನ್ಸ್ ಪೆಕ್ಟರ್ ಅರುಣ್ ಕುಮಾರ್ ಅವರು ಆರೋಪಿ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ.ಘಟನೆಯಲ್ಲಿ ಪೊಲೀಸ್ ಪೇದೆ ನಂದೀಶ್ ಅವರು ಗಾಯಗೊಂಡಿದ್ದಾರೆ. ಈತನ ವಿರುದ್ಧ ಅಮೃತಹಳ್ಳಿ, ಕೋಡಿಗೆಹಳ್ಳಿ, ಜ್ಞಾನ ಭಾರತಿ, ಚಿಕ್ಕ ಜಾಲ ಠಾಣೆಗಳಲ್ಲಿ ಒಟ್ಟು 8ಕ್ಕೂ ಹೆಚ್ಚು ಕೊಲೆ ಯತ್ನ  ಪ್ರಕರಣಗಳು ದಾಖಲಾಗಿವೆ.ಸದ್ಯ ಆರೋಪಿ ಹಾಗೂ ಪೇದೆಯನ್ನು  ಯಲಹಂಕ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ.