ತಂಡದ ಫಲಿತಾಂಶ ಬೇಸರ ತಂದಿದೆ: ಸುನೀಲ್ ಚೆಟ್ರಿ

ಕೊಲ್ಕತಾ, ಅ 16:     ಬಾಂಗ್ಲಾದೇಶ ವಿರುದ್ಧ 2022ರ ಫಿಫಾ ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯದಲ್ಲಿನ ತಂಡದ ಫಲಿತಾಂಶದ ಬಗ್ಗೆ ಭಾರತ ಫುಟ್ಬಾಲ್ ತಂಡದ ನಾಯಕ ಸುನೀಲ್ ಚೆಟ್ರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ಮಂಗಳವಾರ ರಾತ್ರಿ ಮುಕ್ತಾಯವಾಗಿದ್ದ ಪಂದ್ಯ 1-1 ಅಂತರದಲ್ಲಿ ಡ್ರಾ ಆಗಿತ್ತು. ಪಂದ್ಯಕ್ಕೂ ಮುನ್ನ ಅಂದುಕೊಂಡಿದ್ದ ಎಲ್ಲ ಲೆಕ್ಕಾಚಾರಗಳನ್ನು ಬಾಂಗ್ಲಾದೇಶ ತಂಡ ತಲೆ ಕೆಳಗಾಗುವಂತೆ ಮಾಡಿತ್ತು. ಪಂದ್ಯದ ನಿಗದಿತ ಅವಧಿ ಮುಕ್ತಾಯವ ಕೊನೆಯ ಎರಡು ನಿಮಿಷಗಳಲ್ಲಿ ಆದಿಲ್ ಖಾನ್ ಗೋಲು ಗಳಿಸದೆ ಹೋದಲ್ಲಿ ಭಾರತ ಸೋಲು ಅನುಭವಿಸಬೇಕಾಗಿತ್ತು. 

"ಕಳೆದ ರಾತ್ರಿ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ಪಂದ್ಯಕ್ಕೆ ನಿರ್ಮಾಣವಾಗಿದ್ದ ವಾತಾವರಣಕ್ಕೆ ತಕ್ಕಂತೆ ತಂಡದ ಫಲಿತಾಂಶ ಮೂಡಿ ಬಂದಿಲ್ಲ. ಡ್ರೆಸ್ಸಿಂಗ್ ಕೊಠಡಿಯಲ್ಲಿ ಎಲ್ಲರಿಗೂ ಬೇಸರ ಉಂಟಾಗಿದೆ. ಸಿಕ್ಕ ಅವಕಾಶಗಳನ್ನು ಬಳಸಿಕೊಳ್ಳುವಲ್ಲಿ ವಿಫಲವಾಗಿದ್ದೇವೆ" ಎಂದು ಸುನೀಲ್ ಚೆಟ್ರಿ ಟ್ವೀಟ್ ಮಾಡಿದ್ದಾರೆ. 

ಪಂದ್ಯದ ಆರಂಭದಿಂದಲೂ ಉಭಯ ತಂಡಗಳ ನಡುವೆ ಭಾರಿ ಕಾದಾಟ ನಡೆದಿತ್ತು. ಮೊದಲಾರ್ಧ ಮುಕ್ತಾಯಕ್ಕೆ ಸಾದ್ ಉದ್ದೀನ್ ಗಳಿಸಿದ ಗೋಲಿನ ನೆರವಿನಿಂದ ಬಾಂಗ್ಲಾದೇಶ 1-0 ಮುನ್ನಡೆ ಗಳಿಸಿತ್ತು. ಬಳಿಕ, ದ್ವಿತಿಯಾರ್ಧದಲ್ಲಿ ಆದಿಲ್ ಖಾನ್ ಗಳಿಸಿದ ಗೋಲು ಭಾರತವನ್ನು ಸೋಲಿನಿಂದ ಪಾರು ಮಾಡಿತ್ತು. ಅಂತಿಮವಾಗಿ ಪಂದ್ಯ ಡ್ರಾನಲ್ಲಿ ಅಂತ್ಯ ಕಂಡಿತ್ತು. 

ಪಂದ್ಯದ ಆರಂಭದಲ್ಲೇ ನಾಯಕ ಸುನೀಲ್ ಚೆಟ್ರಿ ಬಲವಾದ ಹೊಡೆತ ಹೊಡೆದಿದ್ದರು. ಆದರೆ,  ಬಾಂಗ್ಲಾದ ಗೋಲ್ ಕೀಪರ್ ಅಶ್ರಫುಲ್ ಚೆಂಡು ಗೋಲು ಪಟ್ಟಿಗೆ ಸೇರದಂತೆ ತಡೆಯುವಲ್ಲಿ ಯಶಸ್ವಿಯಾಗಿದ್ದರು. ಪಂದ್ಯದ ಮೊದಲ ನಿಮಿಷದಲ್ಲೇ ಭೆಕೆ ಅವರು ಕಾರ್ನರ್ ನಿಂದ ಬಂದ ಚೆಂಡನ್ನು ಹೆಡರ್ ಮೂಲಕ ಗೋಲು ಗಳಿಸಲು ಪ್ರಯತ್ನಿಸಿದರು. ಆದರೆ, ಚೆಂಡು ಗೋಲು ಪಟ್ಟಿಯ ಕಂಬದಿಂದ ಹೊರಗೋಯಿತು. ಗೋಲು ಗಳಿಸಬಹುದಾದ ಇನ್ನೂ ಹಲವು ಅವಕಾಶಗಳನ್ನು ಭಾರತ ಕೈ ಚೆಲ್ಲಿಕೊಂಡಿತ್ತು.