ನವದೆಹಲಿ, ನವೆಂಬರ್ 5: ಕೇಂದ್ರ ಸರ್ಕಾರದ ಸಮಯೋಚಿತ ಮಧ್ಯಪ್ರವೇಶದಿಂದಾಗಿ, ಮ್ಯಾನ್ಮಾರ್ನ ರಾಖೈನ್ ರಾಜ್ಯದಲ್ಲಿ ಅರಾಕನ್ ಸೈನಿಕರಿಂದ ಅಪಹರಣಕ್ಕೊಳಗಾದ ಐವರು ಭಾರತೀಯ ಪ್ರಜೆಗಳು, ಮ್ಯಾನ್ಮಾರ್ನ ಓರ್ವ ಸಂಸತ್ ಸದಸ್ಯ ಹಾಗೂ ಇತರ ನಾಲ್ವರು ಮ್ಯಾನ್ಮಾರ್ ಪ್ರಜೆಗಳು ಬಿಡುಗಡೆಯಾಗಿದ್ದಾರೆ. ನವೆಂಬರ್ 3 ರಂದು, ಈ ಐದು ಭಾರತೀಯ ಪ್ರಜೆಗಳು, ಮ್ಯಾನ್ಮಾರ್ ಸಂಸತ್ ಸದಸ್ಯ, ಇಬ್ಬರು ಸ್ಥಳೀಯ ಸಾರಿಗೆದಾರರು ಮತ್ತು ಇಬ್ಬರು ಸ್ಪೀಡ್ ಬೋಟ್ ಆಪರೇಟರ್ಗಳನ್ನು ಮ್ಯಾನ್ಮಾರ್ನ ರಾಖೈನ್ ರಾಜ್ಯದ ಚಿನ್ ಎಂಬಲ್ಲಿನ ಪ್ಯಾಲೆಟ್ವಾದಿಂದ ಅರಾಕನ್ ಸೈನ್ಯವು ಅಪಹರಿಸಿತ್ತು. ಅಪಹರಣಕ್ಕೊಳಗಾದ ಭಾರತೀಯರು ಪ್ರಸ್ತುತ ಮ್ಯಾನ್ಮಾರ್ನಲ್ಲಿ ಕಲಾದನ್ ರಸ್ತೆ ಯೋಜನೆಯನ್ನು ನಿರ್ಮಿಸುವಲ್ಲಿ ನಿರತರಾಗಿದ್ದರು ಎಂದು ಗೃಹ ಸಚಿವಾಲಯದ ಅಧಿಕೃತ ಹೇಳಿಕೆ ಮಂಗಳವಾರ ತಿಳಿಸಿದೆ. ದುರದೃಷ್ಟವಶಾತ್, ಭಾರತೀಯ ಪ್ರಜೆಯೊಬ್ಬರು ಹೃದಯಾಘಾತದಿಂದ ಅರಾಕನ್ ಸೈನ್ಯದ ವಶದಲ್ಲಿದ್ದಾಗ ಮೃತಪಟ್ಟಿದ್ದಾರೆ. ಲಭ್ಯವಿರುವ ಮಾಹಿತಿಯ ಪ್ರಕಾರ, ಅವರು ದೀರ್ಘಕಾಲದ ಮಧುಮೇಹ ರೋಗಿಯಾಗಿದ್ದರು ಎಂದು ತಿಳಿದುಬಂದಿದೆ. ಬಿಡುಗಡೆಯಾದ ಭಾರತೀಯ ಪ್ರಜೆಗಳು, ಮೃತರ ಶವದೊಂದಿಗೆ ಸಿಟ್ವೆ ತಲುಪಿದ್ದಾರೆ (ನವೆಂಬರ್ 4 ರಂದು) ಮತ್ತು ಭಾರತಕ್ಕೆ ಮುಂದಿನ ಪ್ರಯಾಣಕ್ಕಾಗಿ ಇಂದು ಯಾಂಗೊನ್ಗೆ ತೆರಳಲಿದ್ದಾರೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ.