ಅಭಿಪ್ರಾಯ ಹೇರಿಕೆಯೇ ಶತ್ರುತ್ವಕ್ಕೆ ಕಾರಣ

ನಮಗೊಬ್ಬ ಶತ್ರು ಹುಟ್ಟುತ್ತಾನೆ ಎಂದರೆ ಅಲ್ಲಿ ಎರಡು ವಿಷಯಗಳು ಇರಬೇಕು. ಮೊದಲನೆಯದು ನಾವು ನೇರವಾಗಿ ನೀನು ಮಾಡುತ್ತಿರುವುದು ತಪ್ಪು ಎಂದು ಹೇಳಿದ್ದು. ಮತ್ತೊಂದು ಅವನನ್ನು ಬದಲಾಯಿಸುತ್ತೇನೆ ಎಂದು ಹೊರಟಿದ್ದು. ಇದೆರಡನ್ನು ನಾವು ಯಾವತ್ತು ಮಾಡುತ್ತೇವೆಯೋ ಆಗ ನಮಗೆ ಶತ್ರುಗಳು ಹೆಚ್ಚಾಗುತ್ತಾರೆ. ಅದೆಷ್ಟೇ ಒಳ್ಳೆಯ ಸ್ನೇಹಿತನಾಗಿರಲಿ, ಅವನು ಮಾಡಿದ್ದು ಘನಘೋರ ತಪ್ಪೇ ಇರಲಿ ಅವನೆದುರು ನಿಂತು ಅವನ ಆತ್ಮಾಭಿಮಾನಕ್ಕೆ ತಾಕುವಂತೆ ನೀನು ಮಾಡುವುದು ಸರಿ ಇಲ್ಲ ಎಂದು ನೇರವಾಗಿ ಹೇಳಿದರೆ ಆತ ನಮ್ಮ ಮೇಲೆ ತಿರುಗಿ ಬೀಳುತ್ತಾನೆ. ಶತ್ರುತ್ವವನ್ನು ಮೇಲ್ನೋಟಕ್ಕೆ ಕಾಣಿಸಿಕೊಳ್ಳದಿದ್ದರೂ ಒಳಗೊಳಗೆ ಕುದಿಯುತ್ತಾನೆ.  ಇದರ ಜೊತೆ ಅವನನ್ನು ಬದಲಾಯಿಸುತ್ತೇನೆ ಎಂದು ಹೇಳುವುದು ಕೂಡ ಮೂರ್ಖತನದ ಕೆಲಸವೇ ಸರಿ. ಅವನಲ್ಲಿಯ ಅಭಿಪ್ರಾಯವನ್ನು ಬದಲಿಸಬಹುದೇ ಹೊರತು ಇಡೀಯಾಗಿ ಅವನನ್ನೇ ಬದಲಾಯಿಸಲು ಶಕ್ಯವೇ ಇಲ್ಲ. ಹಾಗೆ ಬದಲಾಗು ಎಂದಾಗ ತಾನೇನು ಮಾಡಿರುವೆ? ತಾನೇಕೆ ಬದಲಾಗಬೇಕು? ಇವರು ಹೇಳಿದ್ದು ಯಾಕೆ ಕೇಳಬೇಕು? ಹೀಗೆ ಸರತಿಯ ಪ್ರಶ್ನೆ ಹುಟ್ಟಿ ಅಲ್ಲಿಯೂ ನಮ್ಮ ಮೇಲೆ ಸಿಟ್ಟು ಹುಟ್ಟಿಕೊಳ್ಳುತ್ತದೆ..

ನಾವು ಮತ್ತೊಬ್ಬರ ಮೇಲೆ ಹೇರುವ  ಅಭಿಪ್ರಾಯ ಶೇಕಡಾ 75ರಷ್ಟಾದರೂ ಸರಿ ಇದ್ದರೆ ಮಾತ್ರ  ವ್ಯಕ್ತಿಯ ಅಭಿಪ್ರಾಯ ಬದಲಿಸಬಹುದು ಎಂದು ಥಿಯೋಡೋರ್ ರೂಲ್ವೆಲ್ಟ್ ಎಂಬುವವರು ಹೇಳುತ್ತಾರೆ. ಅಂದರೆ ನಾವು ಹೇಳುತ್ತಿರುವ ವಿಷಯ ಸರಿಯಾಗಿದೆಯೇ ಎನ್ನುವದು ಮುಖ್ಯವಾಗಿ ನಮಗೆ ಗೊತ್ತಿರಬೇಕು. ನಮ್ಮ ಮಾತಿನ ಮೇಲೆ ನಮಗೆ ನಂಬಿಕೆ ಇಲ್ಲದಿದ್ದಾಗ ಬೇರೆಯವರಿಗೆ ಉಪದೇಶವನ್ನೋ ಅಥವಾ ಖಂಡಿಸುವುದನ್ನೋ ಮಾಡಿದರೆ ಅವರು ತಿರುಗಿ ಬೀಳದೆಯೇ ಇರುತ್ತಾರೆಯೇ? ಖಂಡಿತ ಸುಮ್ಮನಿರಲಾರರು. ನಮ್ಮೊಟ್ಟಿಗೆ ಜಗಳ ಮಾಡಿ ಎದ್ದು ಹೋಗುತ್ತಾರೆ. 

ಒಬ್ಬ ಸೇಲ್ಸ್ ಮ್ಯಾನ್ ಎದುರಿಗೆ ಇದ್ದಾನೆ ಎಂದಾದರೆ ನೀನು ಮುಂಬೈಗೆ ಹೋಗಿ ನಿನ್ನ ಪ್ರೊಡೆಕ್ಟ್ಗಳನ್ನು ಮಾರಾಟ ಮಾಡು. ಈ ಹಳ್ಳಿಯಲ್ಲಿ ನಿನಗೆ ಲಾಭ ಸಿಗುವುದಿಲ್ಲ ಎಂದು ಹೇಳಬೇಕು ಎಂದರೆ ನಮಗೆ ಪೂರ್ವ ಕಲ್ಪನೆ ಇರಲೇ ಬೇಕು. ಇವನ ಕೈಲಿರುವ ಪ್ರೋಡೆಕ್ಟ್ಗಳೇನು? ಆ ಉತ್ಪನ್ನವು ಎಷ್ಟರ ಮಟ್ಟಿಗೆ ಗುಣಮಟ್ಟ ಕಾದುಕೊಂಡಿದೆ. ಅಲ್ಲಿಯ ಜನರು ಇದನ್ನು ಖರೀದಿಸುವ ಮನಸ್ಥಿತಿಯವರೇ? ಅಲ್ಲದಿದ್ದರೆ ಈ ಸೇಲ್ಸ್ಮ್ಯಾನ್ ಅವರ ಮನವನ್ನು ಗೆಲ್ಲಲು ಶಕ್ತನೇ ಹೀಗೆ ನಮಗೆ ಗೊತ್ತಾಗಬೇಕು. ಇದೆಲ್ಲವೂ ಸಾಧ್ಯ ಎಂದು ನಮಗೆ ಒಂದು ಶೇಕಡ 50ರಷ್ಟಾದರೂ ನಂಬಿಕೆ ಇದ್ದರೆ ನಾವು ಮುಂಬೈಗೆ ಹೋಗು ಎನ್ನಬಹುದು. ಅದರ ಹೊರತಾಗಿ ಸುಮ್ಮನೆ ಏನೂ ತಿಳಿದಿಲ್ಲದೇ ನೀನು ಮುಂಬೈಗೆ ಹೋಗು ಎಂದು ಹೇಳಿ ಆತ ಅಲ್ಲಿಗೆ ಹೋಗಿ ಬರಿಗೈಲಿ ಬಂದರೆ ಮುಂದೆ ಆತ ಹೇಗೆ ನಮ್ಮ ಸ್ನೇಹವನ್ನು ಬೆಳೆಸಲು ಸಾಧ್ಯ. ಮುಖ ಕಂಡರೆ ಒಂದು ಬೈಯ್ಯುತ್ತಾನೆ, ಇಲ್ಲ ಮುಖ ತಿರುಗಿಸಿಕೊಂಡು ಹೋಗುತ್ತಾನೆ.

ನಾವು ಬೇರೆಯವರನ್ನು ಬದಲಾಯಿಸಲು ಹೋಗುವದರ ಬದಲು ಅವರೆದುರು ಒಂದಷ್ಟು ಪ್ರಶ್ನೆಯನ್ನೇ ಇಡಬಹುದು. ಆ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಹೋದಾಗ ತಾನು ನಡೆಯುತ್ತಿರುವ ದಾರಿ ಎಂಥದ್ದು ಎಂದು ಅವರಿಗೆ ಅರ್ಥವಾಗುವ ಸಾಧ್ಯತೆ ಹೆಚ್ಚು. ಏಕಂದರೆ ಅವರ ಬುದ್ಧಿಮತ್ತೆ, ಅವರ ಸಾಮಥ್ರ್ಯ, ಅವರ ಸ್ವಾಭಿಮಾನ,  ಅವರ ಆತ್ಮಗೌರವ ಅವರೊಳಗೆ ಇದ್ದಿರುತ್ತದೆ. ಅದಕ್ಕೆಲ್ಲ ನಾವು ನೇರ ಪ್ರಶ್ನೆ ಮಾಡುವ ಭರಾಟೆಯಲ್ಲಿ ಬೆಲೆ ನೀಡದೇ ಹೋದಾಗಲೇ ಅವರಿಗೆ ಸಿಟ್ಟು ಬರುವುದು. ಅದರ ಬದಲಾಗಿ ಅವರಲ್ಲಿ ಪ್ರಶ್ನೆ ಹುಟ್ಟಿದಾಗ ತನ್ನೊಳಗೆ ತರ್ಕ ಮಾಡಿಕೊಳ್ಳುತ್ತಾರೆ. ತಾವೇ ತಮ್ಮ ಸಾಮಥ್ರ್ಯಕ್ಕೆ ಸರಿ ಹೊಂದುವ ದಾರಿ ಕಂಡುಕೊಳ್ಳುತ್ತಾರೆ.

ಒಬ್ಬ ವ್ಯಕ್ತಿಗೆ ನಾವು ಏನನ್ನೂ ಕಲಿಸಲು ಸಾಧ್ಯವಿಲ್ಲ. ಅವನೊಳಗಿನ ಸಾಮಥ್ರ್ಯವನ್ನು ಕಂಡುಕೊಳ್ಳಲು ನಾವು ನೆರವಾಗಬಹುದಷ್ಟೆ. ಶಾಲೆಯಲ್ಲಿ ಒಂದು ತರಗತಿಯಲ್ಲಿ ಹತ್ತಾರು ಮಕ್ಕಳಿರುತ್ತಾರೆ. ಎಲ್ಲ ಮಕ್ಕಳಿಗೂ ಶಿಕ್ಷಕರು ಒಂದೇ ರೀತಿಯಲ್ಲಿ ಪಾಠ ಮಾಡಿರುತ್ತಾರೆ. ಆದರೆ ಆ ಮಕ್ಕಳು ಪರೀಕ್ಷೆಯಲ್ಲಿ ಬೇರೆ ಬೇರೆಯದೇ ಅಂಕ ಪಡೆಯುತ್ತಾರೆ. ಆ ಅಂಕ ಅವರವರ ಸಾಮಥ್ರ್ಯ. ಹೆಚ್ಚಿಗೆ ಅಂಕ ಪಡೆದವನ ಬಗ್ಗೆ ಇಲ್ಲಿ ಯಾವ ಆಕ್ಷೇಪವೇ ಇಲ್ಲ. ಕಡಿಮೆ ಅಂಕ ಪಡೆದ ಒಬ್ಬ ವಿದ್ಯಾಥರ್ಿಗೆ ಈಗ ಹೆಚ್ಚಿಗೆ ಅಂಕ ಪಡೆಯುವಂತೆ ಬದಲಾಯಿಸಬೇಕಿದೆ. ಹಾಗಾದರೆ ಏನು ಮಾಡಬಹುದು. ನೋಡು ನೀನು ಅವನಂತೆ ಓದುತ್ತಿಲ್ಲ, ನಿನಗೆ ಎಷ್ಟು ಹೇಳಿದರೂ ತಿಳಿಯುವುದೇ ಇಲ್ಲ, ನೀನು ಈ ಬಾರಿ ಪಾಸಾಗುವುದು ಕಷ್ಟ, ಅದ್ಯಾವಾಗ ಕಲಿಸಿದ್ದು ಅರ್ಥ ಮಾಡಿಕೊಳ್ಳುತ್ತಿಯೋ, ಮುಂದಿನ ಬಾರಿ  ನಾನು ಹೇಳಿದಷ್ಟು ಅಂಕ ತೆಗೆದುಕೊಳ್ಳಲೇ ಬೇಕು ಎಂದರೆ ಖಂಡಿತ ಆ ಹುಡುಗ ಹೆಚ್ಚಿಗೆ ಅಂಕ ಪಡೆಯುವುದಿಲ್ಲ. ಅವಮಾನವಾಗುತ್ತದೆ. ಸ್ವಾಭಿಮಾನಕ್ಕೆ ನೇರ ಹೊಡೆತ ಬಿದ್ದಿರುತ್ತದೆ. ಇಷ್ಟೆಲ್ಲ ಹೇಳಿದ ಶಿಕ್ಷಕನನ್ನು ಕಂಡರೆ ಕೋಪ ಬರುತ್ತದೆ. ನಿಧಾನವಾಗಿ ಶಿಕ್ಷಕನಿಂದ ದೂರ ಸರಿಯುತ್ತಾನೆ. ಅದರ ಬದಲಾಗಿ ದಿನವು ನೀನು ಎಷ್ಟು ಗಂಟೆ ಓದುತ್ತಿಯಾ? ಇನ್ನೆಷ್ಟೊತ್ತು ಓದಿದರೆ ನಿನಗೆ ಈ ಉತ್ತರಗಳು ನೆನಪಿನಲ್ಲಿ ಉಳಿಯಬಹುದು ಎಂದು ಯೋಚಿಸು? ಪರೀಕ್ಷೆಯ ಮೊದಲು ಆಟವಾಡುತ್ತಿಯಲ್ಲ. ಆ ಸಮಯ ಕಡಿಮೆ ಮಾಡಿ ಉತ್ತರ ನೆನಪಿಡಲು ಏನು ಮಾಡಬಹುದು ಎಂದು ತಿಳಿದುಕೋ. ಹೀಗೆ ಸಾಧ್ಯವಾದಷ್ಟು ಅವನಿಗೆ ಪ್ರಶ್ನೆ ಕೇಳಿ ಅವನಲ್ಲಿಯೇ ಉತ್ತರ ಕಂಡುಕೊಳ್ಳುವ ಹಾಗೆ ಮಾಡಿದರೆ ಮಾತ್ರ ನಮ್ಮ ಮಾತು ಆ ವಿದ್ಯಾಥರ್ಿಯ ಆಳಕ್ಕೆ ಇಳಿದು ಅವನಾಗೆ ಬದಲಾವಣೆ ತಂದುಕೊಳ್ಳಲು ಸಹಕಾರಿಯಾಗುತ್ತದೆ.

ನಮ್ಮೊಳಗೆ ಬೇಕಾದಷ್ಟು ತಪ್ಪುಗಳಿರುತ್ತವೆ. ಆದರೆ ನಾವು ಬೇರೆಯವರ ತಪ್ಪನ್ನು ಬಹು ಬೇಗನೇ ಎತ್ತಿ ತೋರಿಸಲು ಮುಂದಾಗುತ್ತೇವೆ. ನಿಜವಾಗಿ ಬೇರೆಯವರ ತಪ್ಪನ್ನು ತೋರಿಸುವುದೇ ನಮ್ಮ ದೊಡ್ಡ ತಪ್ಪು. ಅದು ನಮ್ಮ ವೀಕ್ನೇಸ್. ನಾವು ಸೋಲುವುದೇ ಅಲ್ಲಿ. ಅವರ ತಪ್ಪನ್ನು ನೇರ ಮಾತಿನಿಂದ ತೋರಿಸಿ ಶತ್ರುತ್ವ ಬೆಳೆಸಿಕೊಳ್ಳುವುದಕ್ಕಿಂದ ಸುಲಭ ಮಾರ್ಗ ನಮ್ಮ ನಗುವಿನಿಂದ, ನಮ್ಮ ಒಂದು ಕಣ್ಣೋಟದಿಂದ, ನಮ್ಮ ನಡುವಳಿಕೆಯಿಂದ ಅವರಿಗೆ ನಾವು ಮಾತಲ್ಲಿ ಹೇಳಬೇಕಾದದ್ದನ್ನು ದಾಟಿಸಬಹುದು. ಆ ಕಲೆ ನಾವು ಕಲಿತುಕೊಳ್ಳಬೇಕು. ಮನಸ್ಸಿಗೆ ನೋವಾಗದಂತೆ ತಪ್ಪನ್ನು ತಪ್ಪು ಎಂದು ತಿಳಿಸಿಕೊಡಲು ಅವರಲ್ಲಿ ಪ್ರಶ್ನೆ ಹುಟ್ಟು ಹಾಕುವುದರ ಜೊತೆ ನಮ್ಮ ನಡುವಳಿಕೆ ತುಂಬಾ ದೊಡ್ಡ ಆಯುಧವಾಗಿದೆ.

ನಮ್ಮದೇ ಮಕ್ಕಳಾಗಿರಲಿ, ನಮ್ಮನ್ನು ಹೆತ್ತರಾಗಿರಲಿ ಅವರಿಗೂ ಸಹ ನಾವು ನೇರವಾದ ಮಾತಿನಲ್ಲಿ ಏನನ್ನೋ ಬದಲಾಯಿಸುವ ಪ್ರಯತ್ನ ಮಾಡಲೇ ಬಾರದು. ಅಲ್ಲಿ ನಮ್ಮ ಸೋಲು ನಿಂತಿರುತ್ತದೆ. ಜೊತೆಗೆ ಅಸಹನೆ ಶತ್ರುತ್ವವೂ ಕಾಣಿಸಿಕೊಳ್ಳುತ್ತದೆ. ಚಾಣಾಕ್ಷತನದಿಂದ, ಒಂದಷ್ಟು ಮುಂದಾಲೋಚನೆ ಮಾಡಿ ಮಾತನ್ನು ಆಡಿದರೆ ಸಂಬಂಧವನ್ನು ಕೆಡಿಸಿಕೊಳ್ಳದೇ ಮುಂದಿನವರಲ್ಲಿ ಆದ ಬದಲಾವಣೆ ನಾವು ಗಮನಿಸಬಹುದು. ಒಬ್ಬ ವ್ಯಕ್ತಿಯ ಅಸಮಧಾನಕ್ಕೆ ಗುರಿಯಾದರೆ ವಿರೋಧ ಕಟ್ಟಿಕೊಳ್ಳುವದರ ಜೊತೆಗೆ ನಷ್ಟವನ್ನೂ ಅನುಭವಿಸಬೇಕಾಗಬಹುದು.

ಕೆಲವೊಮ್ಮೆ ನಾವು ನಮ್ಮ ಮನಸ್ಸನ್ನು ಯಾವುದೇ ಒತ್ತಡ ಇಲ್ಲವೇ ಭಾವನೆಗಳ ತಾಕಲಾಟ ಇಲ್ಲದೆಯೇ ಬದಲಾಯಿಸಿಕೊಳ್ಳಬಹುದು. ಆದರೆ ಬೇರೆಯವರು ನಮ್ಮ ಬಗ್ಗೆ ತಪ್ಪು ಮಾಡುತ್ತಿರುವಿರಿ ಎಂದು ಹೇಳಿದರೆ ಅಸಮಧಾನಗೊಳ್ಳುತ್ತೇವೆ. ಆಕ್ಷೇಪ ವ್ಯಕ್ತಪಡಿಸುತ್ತೇವೆ. ನಮ್ಮ ಮನಸ್ಸನ್ನು ಇನ್ನಷ್ಟು ಕಠೀಣಗೊಳಿಸಿಕೊಂಡು ಕಿಡಿ ಕಾರುತ್ತೇವೆ. ಸ್ವಪ್ರತಿಷ್ಟೆಗೆ ಬಲಿಯಾಗುತ್ತೇವೆ. ನಮ್ಮ ತಪ್ಪು ನಂಬಿಕೆಯ ಮೇಲೆ ಬಲವಾದ ನಂಬಿಕೆಯನ್ನು ಇಡುತ್ತೇವೆ. ಈ ಸಂದರ್ಭವು ಪ್ರತೀಯೊಬ್ಬನ ಜೀವನದಲ್ಲೂ ಬಂದಿರುತ್ತದೆ. ಆಗೆಲ್ಲ ನಾವು ಹೇಗೆ ವತರ್ಿಸುತ್ತೇವೆ ಎಂದು ಒಮ್ಮೆ ನೆನಪು ಮಾಡಿಕೊಂಡರೆ ನಮ್ಮ ಅಭಿಪ್ರಾಯವನ್ನು ಇನ್ನೊಬ್ಬರ ಮೇಲೆ ಹೇರಲು ಹೋಗುವುದಿಲ್ಲ. ಅಭಿಪ್ರಾಯ ಹೇರಿಕೆಯಾಗದಿದ್ದಲ್ಲಿ ಶತ್ರುತ್ವವೂ ಹುಟ್ಟುವುದಿಲ್ಲ