ನಾಯಕತ್ವದ ಗುಣ ಬೆಳೆಸುವುದೇ ಎನ್ಎಸ್ಎಸ್ ಉದ್ದೇಶ: ದಳಪತಿ

ಧಾರವಾಡ : ಸ್ವಯಂ ಸೇವಕರೆಂದರೆ ಸ್ವಯಂ ಸ್ಪೂರ್ತಿ ಯಿಂದ, ಸ್ವ ಇಚ್ಚೆಯಿಂದ ತಮ್ಮನ್ನು ತಾವು ಸಮಾಜದ ಋಣವನ್ನು ತೀರಿಸಲು ಸಮರ್ಪಣಾ ಭಾವದಿಂದ ಸಂಕಲ್ಪ ಮಾಡಿಕೊಳ್ಳವುದು. ವಿಶ್ವಾಸ, ಸೇವಾ ಮನೋಭಾವನೆ, ಸಕಾರಾತ್ಮಕ ಚಿಂತನೆ, ನಾಯಕತ್ವದ ಗುಣಗಳನ್ನು ಬೆಳೆಸುವುದೇ ಎನ್.ಎಸ್.ಎಸ್. ಉದ್ದೇಶವಾಗಿದೆ ಎಂದು ಕ.ವಿ.ವಿ. ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ. ಎಂ.ಬಿ. ದಳಪತಿ ಹೇಳಿದರು.

 ತಾಲೂಕಿನ ದೇವರಹುಬ್ಬಳ್ಳಿಯ ಸಿದ್ಧಾಶ್ರಮದಲ್ಲಿ ಸೋಮವಾರ ಹುರಕಡ್ಲಿ ಅಜ್ಜ ಶಿಕ್ಷಣ ಸಮಿತಿಯ, ಕಲ್ಲವ್ವ ಶಿವಪ್ಪಣ್ಣ ಜಿಗಳೂರ ಕಲಾ ಹಾಗೂ ಡಾ. ಸುಶೀಲಾ ಮುರಿಗೆಪ್ಪ ಶೇಷಗಿರಿ ವಾಣಿಜ್ಯ ಮಹಿಳಾ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ಎರಡೂ ಘಟಕಗಳ ವಾರ್ಷಿ ಕ ವಿಶೇಷ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು. 

ಶಿಬಿರಾರ್ಥಿ ಗಳು ಸೇವೆಗೆ ಸದಾ ಸಿದ್ಧರಿರಬೇಕು. ಸಮಾಜದ ಅಗತ್ಯತೆಗೆ ಅನುಗುಣವಾಗಿ ಸೇವೆಯನ್ನು ಮಾಡುವುದರಿಂದ ಆತ್ಮ ತೃಪ್ತಿ ಹೊಂದಲು ಸಾಧ್ಯ. ಬದುಕಿರುವಷ್ಟು ಕಾಲ ನಾವು ಮತ್ತೊಬ್ಬರಿಗೆ ಅನುಕೂಲವಾಗುವಂತೆ ಬದುಕಬೇಕು. ನಾನು ಎಂಬುದು ಅಹಂಕಾರದ ಸಂಕೇತ ನಾವು ಎಂಬುವದು ಒಗ್ಗಟ್ಟಿನ ಸಂಕೇತ. ಎಲ್ಲ ಸ್ವಯಂ ಸೇವಕಿಯರು ಒಗ್ಗಟ್ಟಿನಿಂದ ದುಡಿದಾಗ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ತಿಳಿಸಿದರು.

ಸಾನಿಧ್ಯವಹಿಸಿದ್ದ ದೇವರಹುಬ್ಬಳ್ಳಿ ಸಿದ್ಧಾಶ್ರಮದ ಸಿದ್ಧ ಶಿವಯೋಗಿಗಳು ಆಶೀರ್ವಚನ ನೀಡಿ,  ಗುರುಕುಲ ಪದ್ಧತಿ ಇಂದು ನಶಿಸಿ ಹೋಗಿದೆ. ಮಾತಿನಿಂದ ವ್ಯಕ್ತಿತ್ವವನ್ನು ಬೆಳೆಸದೇ ಕಾಯಕದಿಂದ ವ್ಯಕ್ತಿತ್ವ ಬೆಳೆಸಿಕೊಳ್ಳಿ. ನಿಸ್ವಾರ್ಥ ಮನೋಭಾವನೆಯಿಂದ ಸಂಯಮದಿಂದ ಸೇವೆ ಮಾಡಬೇಕು. ಸೇವಾ ಭಾವನೆ ಜೀವನದ ನರನಾಡಿಗಳಲ್ಲಿ ಬೆಳೆದು ಬರಬೇಕು. ಹೃದಯವಂತಿಕೆ ಕಂಡುಬರುವುದು ಹಳ್ಳಿಗಳಲ್ಲಿ ಎಲ್ಲರೂ ಹಳ್ಳಿ ಜನರೊಂದಿಗೆ ವಿನೀತ ಭಾವದಿಂದ ಬೆರೆಯಬೇಕೆಂದು ತಿಳಿಸಿದರು.

       ಹುರಕಡ್ಲಿ ಅಜ್ಜ ಶಿಕ್ಷಣ ಸಮಿತಿಯ ಕೋಶಾಧ್ಯಕ್ಷ ಆರ್. ಎ. ಉಚ್ಚಿಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಪ್ರಿನ್ಸಿಪಾಲ್ ಡಾ.ನಿರ್ಮಲಾ ಹಿರೇಗೌಡರ ಸ್ವಾಗತಿಸಿದರು. ವಂದನಾರ್ಪಣೆ ಮಾಡಿದರು. ಕಾಲೇಜು ಆಡಳಿತ ಮಂಡಳಿಯ ಆಡಳಿತಾಧಿಕಾರಿ ಬಿ. ಎಸ್. ಅಣ್ಣಿಗೇರಿ, ಮಹಿಳಾ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷೆ ಆರತಿ ಹಿರೇಮಠ, ದೇವರಹುಬ್ಬಳ್ಳಿ ಪಿ.ಡಿ.ಓ. ಮಹಮ್ಮದ ಚಕೋಲಿ, ಎನ್.ಎಸ್.ಎಸ್.  ಕಾರ್ಯಕ್ರಮಾಧಿಕಾರಿ ಡಾ. ಗಿರಿಜಾ ಯಾಬಣ್ಣವರ ಹಾಗೂ ಪ್ರೊ. ಪುಷ್ಷಾ ಅಬ್ಬಿಗೇರಿ, ಶಿಬಿರದ ಕಾರ್ಯದಶರ್ಿ ಆಯೇಷಾ ಹಟ್ಟಿಹೊಳಿ ಇದ್ದರು. ಅನಿತಾ ಅಲೆಬಸಪ್ಪನವರ ನಿರೂಪಿಸಿದರು.