ಲಖನೌ, ಅ 17: ಕಳೆದ ವರ್ಷ ಅಲಹಾಬಾದ್ ಅನ್ನು ಪ್ರಯಾಗರಾಜ್ ಎಂದು ಮರುನಾಮಕರಣ ಮಾಡಿದ ನಂತರ, ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರವು ಚಂದೌಲಿ ಜಿಲ್ಲೆಯ ಹೆಸರನ್ನು ಪಂಡಿತ್ ದೀನದಯಾಳ್ ನಗರ ಎಂದು ಬದಲಾಯಿಸುವ ಪ್ರಕ್ರಿಯೆಯಲ್ಲಿದೆ. ಈ ಕುರಿತು ಸಕಾರಾತ್ಮಕ ಪ್ರತಿಕ್ರಿಯೆಯನ್ನು ಕಳುಹಿಸಿರುವ ಚಂದೌಲಿ ಜಿಲ್ಲಾಡಳಿತದಿಂದ ರಾಜ್ಯ ಸರ್ಕಾರ ವರದಿ ಕೋರಿತ್ತು. ಚಂದೌಲಿಯ ಹೊಸ ವೈದ್ಯಕೀಯ ಕಾಲೇಜಿನ ಶಿಲಾನ್ಯಾಸ ಸಮಾರಂಭದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಹೊಸ ಜಿಲ್ಲೆಗಳ ಹೆಸರನ್ನು ಶೀಘ್ರದಲ್ಲೇ ಪ್ರಕಟಿಸುವ ಸಾಧ್ಯತೆಯಿದೆ ಎಂದು ಇಲ್ಲಿನ ಸರ್ಕಾರಿ ಮೂಲಗಳು ಗುರುವಾರ ಸುಳಿವು ನೀಡಿವೆ. ಇದಕ್ಕೂ ಮೊದಲು, ಪ್ರಸಿದ್ಧ ಮುಗಲ್ ಸರೈ ರೈಲ್ವೆ ನಿಲ್ದಾಣವನ್ನು ದೀನದಯಾಳ್ ಉಪಾಧಯ ಜಂಕ್ಷನ್ ಎಂದು ಮರುನಾಮಕರಣ ಮಾಡಲಾಯಿತು. ಆರ್ಎಸ್ಎಸ್ ವಿಚಾರವಾದಿ ದೀನ್ ದಯಾಳ್ ಉಪಾಧ್ಯಾಯರು 1968 ಫೆಬ್ರವರಿ 11 ರಂದು ಮುಗಲ್ ಸರೈ ನಿಲ್ದಾಣದ ರೈಲ್ವೆ ಪ್ರಾಂಗಣದಲ್ಲಿಯೇ ನಿಗೂಢವಾಗಿ ಮೃತಪಟ್ಟಿದ್ದರು. 1997 ರಲ್ಲಿ ಮಾಯಾವತಿ ಆಳ್ವಿಕೆಯಲ್ಲಿ ಚಂದೌಲಿ ಜಿಲ್ಲೆಯು ಅಸ್ತಿತ್ವಕ್ಕೆ ಬಂದಿತು, ಇದನ್ನು ವಾರಾಣಸಿಯಿಂದ ಪ್ರತ್ಯೇಕಿಸಿ ನೂತನ ಜಿಲ್ಲೆಯನ್ನಾಗಿ ಮಾಡಲಾಯಿತು. ಜಿಲ್ಲೆಯ ಹೆಸರನ್ನು ಬದಲಾಯಿಸಲು ಅಧಿಕಾರಿಗಳು ಮುಂದಾಗಿದ್ದಾರೆ ಎಂದು ಚಂದೌಲಿ ಜಿಲ್ಲಾಧಿಕಾರಿ ನವನೀತ್ ಸಿಂಗ್ ಚಾಹಲ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. "ಜಿಲ್ಲೆಯ ಹೆಸರನ್ನು ನಿರ್ಧರಿಸುವ ಜವಾಬ್ದಾರಿ ಸರ್ಕಾರಕ್ಕೆ ಇದೆ ಮತ್ತು ಅದನ್ನು ಬದಲಾಯಿಸುವ ಅಧಿಕಾರವಿದೆ" ಎಂದು ಹೇಳಿದ್ದಾರೆ.