ವಾರದಲ್ಲಿ ನೂತನ ಕೆಪಿಸಿಸಿ ಅಧ್ಯಕ್ಷರ ನೇಮಕ ಸಾಧ್ಯತೆ

ಬೆಳಗಾವಿ : ಮುಂದಿನ ಒಂದು ವಾರದಲ್ಲಿ ನೂತನ ಕೆಪಿಸಿಸಿ ಅಧ್ಯಕ್ಷರನ್ನು ನೇಮಕ ಮಾಡುವ ಸಾಧ್ಯತೆ ಇದೆ ಎಂದು ಮಾಜಿ ಸಚಿವ, ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ಇಂದಿಲ್ಲಿ ಹೇಳಿದರು.

ಗುರುವಾರ ದಿನದಂದು ತಮ್ಮ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈಗಾಗಲೇ ಕೆಪಿಸಿಸಿ ಅಧ್ಯಕ್ಷರಿದ್ದಾರೆ. ಅಧ್ಯಕ್ಷರ ರಾಜೀನಾಮೆ ಸ್ವೀಕಾರ ಮಾಡಿಲ್ಲ. ತಾತ್ಕಾಲಿಕವಾಗಿ ಯಾರನ್ನಾದರು ನೇಮಕ ಮಾಡಬಹುದು. ಇಲ್ಲವೇ ಈಗಿರುವ ಅಧ್ಯಕ್ಷರನ್ನೇ ಮುಂದುವರೆಸಬಹುದು. ಅಥವಾ ಬದಲಾವಣೆ ಮಾಡಬಹುದು ಎಂದರು. ಕಾಂಗ್ರೆಸ್ನಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ ಎಂದು ಹೇಳಿದರು.

ಅದರಂತೆ ಜಿಲ್ಲೆಯಲ್ಲಿ ಈಗ ಸದ್ಯ 4 ಜನ ಸಚಿವರಿದ್ದಾರೆ. ಅವರು ತಮ್ಮ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಬಾದರು. ಶೇ. 50ರಷ್ಟು ಸಮಯವನ್ನು ಬೆಳಗಾವಿಗೆ ಮೀಸಲಿಡಲಿ. ಈಲ್ಲಾಧಿಕಾರಿ ಕಚೇರಿ, ಜಿಲ್ಲಾ ಪಂಚಾಯಿತಿ, ಮಹಾನಗರ ಪಾಲಿಕೆಗೆ ಉಸ್ತುವಾರಿ ಸಚಿವರು ಭೇಟಿ ನೀಡಿ ಜನರ ಸಮಸ್ಯೆ ಆಲಿಸಬೇಕು. ಜಗದೀಶ್ ಶೆಟ್ಟರ್ ಅವರು ಕಚೇರಿ ಆರಂಭಿಸಿದಿಂದಲೂ ಬೀಗ ಜಡಿದಿದ್ದಾರೆ. ಅಭಿವೃದ್ದಿ ಕೆಲಸವಾಗಲು ನಮ್ಮ ಜಿಲ್ಲೆಯವರೆ ಉಸ್ತುವಾರಿಯಾಗಬೇಕು. ಅದು ಅವರಿಗೂ ಅಭಿವೃದ್ದಿ ಬಗ್ಗೆ ಆಸಕ್ತಿ ಇದ್ದರೆ ಒಳ್ಳೆಯದು. ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಇಳಿದು ತಮ್ಮ ಕ್ಷೇತ್ರಕ್ಕೆ ಹೋಗಿ ಬಿಟ್ಟರೆ ಅಭಿವೃದ್ದಿ ಆಗದು. ಈ ಹಿಂದೆ ತಮ್ಮನ್ನು ಹೊರತು ಪಡಿಸಿ ಎಲ್ಲ ಸಚಿವರು ತಮ್ಮ ಕ್ಷೇತ್ರಕ್ಕೆ ಸೀಮಿತವಾಗಿದ್ದರು ಎಂದರು.

ಜಿಲ್ಲೆಯಲ್ಲಿ ನೆರೆ ಪರಿಹಾರ ಹಂಚಿಕೆಯಲ್ಲಿ ತಾರತಮ್ಯವಾಗಿದೆ. ಹೆಸರೇ ಇಲ್ಲದವರು ಹಲವರು ಹಣ ಪಡೆದಿದ್ದಾರೆ. ನಿಜವಾದ ಸಂತ್ರಸ್ತರಿಗೆ ಇನ್ನು ಪರಿಹಾರ ದೊರೆತಿಲ್ಲ. ಗೋಕಾಕ ನಗರದಲ್ಲಿ 120 ಸಂತ್ರಸ್ತರಿಗೆ ಪರಿಹಾರ ದೊರೆತಿಲ್ಲ. ಸಚಿವರು, ಅಧಿಕಾರಿಗಳು ಆಸಕ್ತಿ ವಹಿಸಿ ಸಂತ್ರಸ್ತರಿಗೆ ಪರಿಹಾರ ವಿತರಿಸಲು ಕ್ರಮಕೈಗೊಳ್ಳಬೇಕು ಎಂದು ಸಲಹೆ ನೀಡಿದರು. 

ದೆಹಲಿ ಚುನಾವಣೆ ವಿಚಾರವಾಗಿ ಪ್ರತಿಕ್ರಿಯಿ, ಅಭಿವೃದ್ದಿಪರ ಕೆಲಸ ಮಾಡುವವರಿಗೆ ಜನ ಬೆಂಬಲ ನೀಡುತ್ತಾರೆ ಎಂಬ ಸಂದೇಶವನ್ನು ದೆಹಲಿ ಮತದಾರರು ನೀಡಿದ್ದಾರೆ. ಇದು ಆಶ್ಚರ್ಯಕರ ಫಲಿತಾಂಶವಲ್ಲ. ನಿರೀಕ್ಷಿತ ಫಲಿತಾಂಶ. ಜನರ ಸಮಸ್ಯೆ ಆಲಿಸಲು ಮುಂದೆ ಬರುವ ಯಾವುದೇ ಪಕ್ಷಕ್ಕೂ ಜನ ಕೈಹಿಡಿಯುತ್ತಾರೆ. ಅದಕ್ಕೆ ರಾಷ್ಟ್ರೀಯ ಪಕ್ಷವೇ ಬೇಕು ಅಂತೇನಿಲ್ಲ. ಎಲ್ಲರಿಗೂ ಇದೊಂದು ಎಚ್ಚರಿಕೆ ಗಂಟೆಯಾಗಿದೆ. ಭೂತ ಮಟ್ಟದಲ್ಲಿ ಪಕ್ಷ ಸಂಘಟನೆ ಮಾಡಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ತರಲು ಶ್ರಮಿಸಲಾಗುವುದು ಎಂದರು.