ನವದೆಹಲಿ, 26 ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ಮಾಡಿರುವ ಬಿಜೆಪಿ-ಎನ್ ಸಿಪಿ ಮಿತ್ರ ಸರ್ಕಾರಕ್ಕೆ ಬುಧವಾರ ಸಂಜೆ 5 ಗಂಟೆಯೊಳಗೆ ಬಹುಮತ ಸಾಬೀತುಪಡಿಸುವಂತೆ ಸುಪ್ರೀಂಕೋರ್ಟ ಸೂಚಿಸಿದೆ. ಬಿಜೆಪಿ ಮತ್ತು ಎನ್ ಸಿಪಿ ಪಕ್ಷಗಳ ಸರ್ಕಾ ರ ರಚನೆ ಪ್ರಶ್ನಿಸಿ ಮಹಾವಿಕಾಸ ಅಘಾಡಿಯು ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎನ್.ವಿ.ರಮಣ ನೇತೃತ್ವದ ತ್ರಿಸದಸ್ಯ ಪೀಠ ಮಂಗಳವಾರ ಬಹುಮತ ಸಾಬೀತುಪಡಿಸಲು ಗಡುವು ನಿಗದಿಪಡಿಸಿದೆ. ಗುಪ್ತ ಮತದಾನಕ್ಕೆ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿರುವ ಸುಪ್ರೀಂಕೋರ್ಟ ಬಹುಮತ ಸಾಬೀತಿಗಾಗಿ ಹಂಗಾಮಿ ಸ್ಪೀಕರ್ ಅನ್ನು ನೇಮಿಸುವಂತೆ ಕೂಡ ಸೂಚಿಸಿದೆ. ಸಂಪೂರ್ಣ ಬಹುಮತ ಸಾಬೀತು ಪ್ರಕ್ರಿಯೆಯ ಚಿತ್ರೀಕರಣವಾಗಬೇಕು ಎಂದು ನ್ಯಾಯಪೀಠ ಆದೇಶಿಸಿದೆ. ರಾಜ್ಯದಲ್ಲಿ ಶಿವಸೇನೆ, ಎನ್ ಸಿ ಪಿ ಹಾಗೂ ಕಾಂಗ್ರೆಸ್ ನ ವಿಕಾಸ ಅಘಾಡಿ ಮೈತ್ರಿಕೂಟದಲ್ಲಿ ಸರ್ಕಾ ರ ರಚನೆಯ ಕಸರತ್ತು ನಡೆಸಿರುವಾಗಲೇ ಏಕಾಏಕಿ ಮಹಾರಾಷ್ಟ್ರದಲ್ಲಿ ಬಿಜೆಪಿ ಎನ್ ಸಿಪಿ ಸರ್ಕಾರ ರಚನೆಯಾಗಿತ್ತು. ಮುಖ್ಯಮಂತ್ರಿಯಾಗಿ ಬಿಜೆಪಿ ದೇವೇಂದ್ರ ಫಡ್ನವೀಸ್ ಹಾಗೂ ಉಪಮುಖ್ಯಮಂತ್ರಿಯಾಗಿ ಎನ್ ಸಿಪಿಯ ಅಜಿತ್ ಪವಾರ್ ಶನಿವಾರ ಪ್ರಮಾಣವಚನ ಸ್ವೀಕರಿಸಿದ್ದರು.