ಬೆಂಗಳೂರು,
ಏ.1, ಕೊರೊನಾ ಭೀತಿ ಹಿನ್ನೆಲೆಯಲ್ಲಿ ದೇಶವನ್ನು ಲಾಕ್ ಡೌನ್ ಮಾಡಿದ್ದರೂ,
ರಸ್ತೆಗಳಿಯುವ ವಾಹನ ಸವಾರರ ಸಂಖ್ಯೆ ಕಡಿಮೆ ಆಗುತ್ತಿಲ್ಲ. ಹೀಗಾಗಿ ಬೆಳ್ಳಂಬೆಳಗ್ಗೆ
ವಾಕಿಂಗ್ ಡ್ರೆಸ್ನಲ್ಲೇ ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು
ರಸ್ತೆಗಿಳಿದಿದ್ದು, ಸ್ವತಃ ತಾವೇ ವಾಹನ ತಪಾಸಣೆ ನಡೆಸಿ, ಯಾವುದೇ ಮುಲಾಜಿಲ್ಲದೆ
ವಾಹನಗಳನ್ನು ಜಪ್ತಿ ಮಾಡಿದ್ದಾರೆ.ನಗರದ ಟೌನ್ ಹಾಲ್ ಬಳಿ ವಾಹನ ತಪಾಸಣೆ ನಡೆಸಿದ
ಆಯುಕ್ತರು, ವಾಹನ ಸವಾರರಿಗೆ ಎಲ್ಲಿಂದ ಬರುತ್ತೀದೀರಾ? ಗಾಡಿ ಸೈಡ್ಗೆ ಹಾಕಿ, ಪಾಸ್
ಇದೆಯಾ ? ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳಿದ್ದಾರೆ. ಈ ವೇಳೆ ಅವರು ಸವಾರರಿಂದ
ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಮರೆಯಲಿಲ್ಲ.
ಈ ಸಂದರ್ಭದಲ್ಲಿ ಸುಖಾ ಸುಮ್ಮನೇ
ಸಂಚರಿಸುತ್ತಿದ್ದ ವಾಹನಗಳನ್ನು ಜಪ್ತಿ ಮಾಡಿದ್ದು, ಇನ್ನೋವಾ ಕಾರೊಂದನ್ನು ವಶಕ್ಕೆ
ಪಡೆದಿದ್ದಾರೆ.ಬೈಕ್ ನಲ್ಲಿ ದೇವಸ್ಥಾನಕ್ಕೆ ಹೊರಟವರು, ಅಂತ್ಯಕ್ರಿಯೆಗೆ ಹೊರಟವರು,
ತರಕಾರಿಗೆ ಹೊರಟವರು, ನೆಂಟರ ಮನೆಗೆ ಹೊರಟವರು ಆಯುಕ್ತರ ಕೈಗೆ ತಗಲಾಕಿಕೊಂಡಿದ್ದಾರೆ.
ಇನ್ನು ನಗರದಲ್ಲಿ ಸಾರ್ವಜನಿಕರ ಓಡಾಟ ಹೆಚ್ಚಾಗಿದ್ದನ್ನು ಗಮನಿಸಿರುವ ಆಯುಕ್ತರು, ವಾಹನ
ತಪಾಸಣೆ ಕ್ರಮಬದ್ಧವಾಗಿ ಆಗುತ್ತಿಲ್ಲ. ಇನ್ನಷ್ಟು ಕಟ್ಟುನಿಟ್ಟಾಗಿ ವಾಹನ ತಪಾಸಣೆ
ಮಾಡಬೇಕು ಎಂದು ಕಂಟ್ರೋಲ್ ರೂಂ ಮೂಲಕ ಮತ್ತೆ ಸಿಬ್ಬಂದಿಗೆ ಖಡಕ್ ಎಚ್ಚರಿಕೆ
ನೀಡಿದ್ದಾರೆ. ವಾಕಿ ಟಾಕಿ ಮೂಲಕ ಎಚ್ಚರಿಕೆ ನೀಡಿರುವ ಅವರು, ವಾಹನಗಳನ್ನು ಸರಿಯಾಗಿ
ತಪಾಸಣೆ ಮಾಡಿ. ಬಹುತೇಕ ಮಂದಿ ಬೇಕಾಬಿಟ್ಟಿಯಾಗಿ ಸಂಚರಿಸುತ್ತಿದ್ದಾರೆ. ಆದರೂ ತಪಾಸಣೆ
ಸರಿಯಾಗಿ ಆಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.