ದೇಶದ ಜನತೆ ನಿಮ್ಮೊಂದಿಗಿದೆ: ಇಸ್ರೋ ವಿಜ್ಞಾನಿಗಳಿಗೆ ರಾಹುಲ್ ಕೃತಜ್ಞತೆ

 ನವದೆಹಲಿ ಸೆ 07:    ವಿಕ್ರಮ್ ಲ್ಯಾಂಡರ್ ಅನ್ನು ಚಂದ್ರನ ದಕ್ಷಿಣ ಧ್ರುವದ ಮೇಲೆ ಇಳಿಸುವ ಪ್ರಕ್ರಿಯೆ ಕೊನೆಯ ಕ್ಷಣದಲ್ಲಿ ವಿಫಲವಾದರೂ ಚಂದ್ರಯಾನ-2 ಯೋಜನೆಯನ್ನು ಈ ಹಂತಕ್ಕೆ ತಲುಪಿಸಿದ ಇಸ್ರೋ ವಿಜ್ಞಾನಿಗಳಿಗೆ ಕಾಂಗ್ರೆಸ್ ಸಂಸದ, ಪಕ್ಷದ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಕೃತಜ್ಞತೆ ಸಲ್ಲಿಸಿದ್ದಾರೆ   ಈ ಕುರಿತು ಟ್ವೀಟ್ ಮಾಡಿರುವ ಅವರು, "ಈ ಒತ್ತಡದ ಸಮಯದಲ್ಲಿ ಇಡೀ ರಾಷ್ಟ್ರವು ಇಸ್ರೋ ವಿಜ್ಞಾನಿಗಳ ತಂಡದೊಂದಿಗೆ ನಿಂತಿದೆ. ನಿಮ್ಮ ಕಠಿಣ ಪರಿಶ್ರಮ ಮತ್ತು ಬದ್ಧತೆಯು ನಮ್ಮ ರಾಷ್ಟ್ರವನ್ನು ಹೆಮ್ಮೆಪಡುವಂತೆ ಮಾಡಿದೆ. ಜೈ ಹಿಂದ್" ಎಂದು ಹೇಳಿದ್ದಾರೆ.  ಮತ್ತೊಂದು ಟ್ವೀಟ್ ನಲ್ಲಿ, "ಚಂದ್ರಯಾನ -2 ಕಾರ್ಯಾಚರಣೆಯಲ್ಲಿ ಇಸ್ರೋ ತಂಡವು ಮಾಡಿದ ಅದ್ಭುತ ಕಾರ್ಯಕ್ಕೆ ಅಭಿನಂದನೆಗಳು. ನಿಮ್ಮ ಉತ್ಸಾಹ ಮತ್ತು ಸಮರ್ಪಣಾ ಭಾವ ಪ್ರತಿಯೊಬ್ಬ ಭಾರತೀಯನಿಗೂ ಸ್ಫೂರ್ತಿಯ ಮೂಲವಾಗಿದೆ. ನಿಮ್ಮ ಕೆಲಸ ವ್ಯರ್ಥವಾಗಿಲ್ಲ. ಇದು ಅನೇಕ ಉದಾಹರಣೆಗಳನ್ನು ನೀಡಿದೆ ಮತ್ತು ಮಹತ್ವಾಕಾಂಕ್ಷೆಯ ಭಾರತೀಯ ಬಾಹ್ಯಾಕಾಶ ಯಾತ್ರೆಗಳಿಗೆ ಅಡಿಪಾಯ ಹಾಕಿದೆ ಎಂದು ಶ್ಲಾಘಿಸಿದ್ದಾರೆ.