ಬಾರ್ಹಿ, (ಜಾರ್ಖಂಡ್) ಡಿ 9- ಜನಾದೇಶವನ್ನು ಹಿಂಬಾಗಿಲ ಮೂಲಕ ಕಸಿಯುವ ಹಳೆ ಚಾಳಿ ಹೊಂದಿರುವ ಕಾಂಗ್ರೆಸ್, ಮಿತ್ರ ಪಕ್ಷಗಳನ್ನು ಕೈಗೊಂಬೆಗಳನ್ನಾಗಿ ಬಳಸಿಕೊಳ್ಳುವ ಪರಿಪಾಠವನ್ನು ಮೊದಲಿನಿಂದಲೂ ಪಾಲಿಸಿಕೊಂಡು ಬಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ವಿರುದ್ದ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಚುನಾವಣಾ ಸಮಾವೇಶ ಉದ್ದೇಶಿಸಿ ಮಾತನಾಡುತ್ತಿದ್ದ ಅವರು, ರಾಜಕೀಯ ಸ್ಥಿರತೆಯ ಬಗ್ಗೆ ದೇಶ ಆಲೋಚಿಸುತ್ತಿದ್ದು, ಈ ವಿಷಯದಲ್ಲಿ ಬಿಜೆಪಿ ಮೇಲೆ ಜನರ ಹೆಚ್ಚಿನ ನಂಬಿಕೆ ಇದೆ ಎಂದು ಹೇಳಿದರು. ಕರ್ನಾಟಕದ ಉಪ ಚುನಾವಣೆಯ ಫಲಿತಾಂಶ ಪ್ರಸ್ತಾಪಿಸಿದ ಪ್ರಧಾನಿ, ಕರ್ನಾಟಕದ ಜನರು ತಮ್ಮನ್ನು ಶೋಷಿಸಿದವರಿಗೆ ತಕ್ಕ ಪಾಠ ಕಲಿಸಿದ್ದಾರೆ. ಈ ಜನರು ಬಿಜೆಪಿ ನೀಡಿದ್ದ ಜನಾದೇಶವನ್ನು ಕಸಿದಿದ್ದರು, ಆದರೆ, ಈಗ ಮತದಾರರು ಅವರ ಉದ್ದೇಶಗಳನ್ನು ನಾಶಗೊಳಿಸಿದ್ದಾರೆ ಎಂದು ವಿಶ್ಲೇಷಿಸಿದರು.
ಕರ್ನಾಟಕದಲ್ಲಿ ಉಪ ಚುನಾವಣೆಗಳಲ್ಲಿ ಬಿಜೆಪಿ ಬಾರಿ ಗೆಲುವು ಸಾಧಿಸಿದೆ ಅಭಿವೃದ್ದಿ ಹಾಗೂ ಸ್ಥಿರತೆಗೆ ಮತ ನೀಡಿದ ರಾಜ್ಯದ ಮತದಾರರಿಗೆ ಮೋದಿ ಧನ್ಯವಾದ ಸಲ್ಲಿಸಿದ್ದಾರೆ. ಬಿಜೆಪಿ ಈ ಗೆಲುವಿನ ಮೂಲಕ ಕಳೆದ 70 ವರ್ಷಗಳಲ್ಲಿ ಜಯ ಸಾಧಿಸದ ಕಡೆಯೂ ಜಯಗಳಿಸಿದೆ. ತಮ್ಮ ಜನಾದೇಶವನ್ನು ದ್ವಂಸಗೊಳಿಸಿದರ ವಿರುದ್ದ ರಾಜ್ಯದ ಜನತೆಗೆ ಆಕ್ರೋಶವಿದೆ. ಒಂದು ಎರಡು ಕ್ಷೇತ್ರಗಳಲ್ಲಿ ಸಣ್ಣ ಪುಟ್ಟ ಕಾರ್ಯಕರ್ತರನ್ನೂ ಬಿಜೆಪಿ ಕಣಕ್ಕಿಳಿಸಿದ್ದರೂ ಕಾಂಗ್ರೆಸ್- ಜೆಡಿಎಸ್ ನ ದೊಡ್ಡ ನಾಯಕರನ್ನು ಅವರು ಸೋಲಿಸಿದ್ದಾರೆ. ಕರ್ನಾಟಕದ ಫಲಿತಾಂಶ ಜನಮತ ಹಾಗೂ ಲೋಕತಂತ್ರಕ್ಕೆ ಸಿಕ್ಕಗೆಲುವು ಎಂದು ಮೋದಿ ಹೇಳಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಜನರು ಬಿಜೆಪಿಗೆ ಜನಾದೇಶ ನೀಡಿದ್ದರು. ಆದರೆ, ಕಾಂಗ್ರೆಸ್ ಹಾಗೂ ಅದರ ಮೈತ್ರಿ ಪಕ್ಷಗಳು ಅದನ್ನು ವಂಚಿಸಿ, ಜನರ ಬೆನ್ನಿಗೆ ಇರಿದು ಅಧಿಕಾರಕ್ಕೆ ಬಂದಿದ್ದವು ಎಂದು ದೂರಿದರು.
ಕಾಂಗ್ರೆಸ್ ಹಾಗೂ ಅದರ ಮೈತ್ರಿ ಪಕ್ಷ ಅಧಿಕಾರ ಹಿಡಿಯುವಲ್ಲಿ ಯಶಸ್ಸು ಸಾಧಿಸಿದರೂ, ಜನರ ಕಲ್ಯಾಣದ ಕಾರ್ಯಸೂಚಿಯನ್ನೇ ಹೊಂದಿರದ ಈ ಪಕ್ಷಗಳು ಕೇವಲ ಒಂದು ವರ್ಷದಲ್ಲಿ ಅಧಿಕಾರಕ್ಕಾಗಿ ಪರಸ್ಪರ ಕಚ್ಚಾಡಿಕೊಂಡರು ಎಂದು ಲೇವಡಿಮಾಡಿದರು.
ಹೆಚ್.ಡಿ. ಕುಮಾರಸ್ವಾಮಿ ಗೆ ಕಾಂಗ್ರೆಸ್ ತನ್ನ ಮೆಜಾರಿಟಿ ಎಂಬ ಬಂದೂಕು ತೋರಿಸಿ ದೆಹಲಿ ನಾಯಕರಿಗೆ ಬೇಕಾದ ಕೆಲಸ ಮಾಡಿಸಿಕೊಂಡಿತ್ತು, ಇದರಿಂದ ರೋಸಿಹೋದ ಮುಖ್ಯಮಂತ್ರಿ ಕುಮಾರಸ್ವಾಮಿ ಜನರ ಮುಂದೆ ಕಣ್ಣೀರು ಹಾಕಿದ್ದರು ಎಂದು ಮೋದಿ ಲೇವಡಿ ಮಾಡಿದರು. ಕುಮಾರಸ್ವಾಮಿ ಅವರನ್ನು ಕಾಂಗ್ರೆಸ್ ನಡೆಸಿಕೊಂಡ ವರ್ತನೆಯನ್ನು ಅಪಹರಣಕಾರರು ಸಹ ಮಾಡುವುದಿಲ್ಲ ಎಂದು ಕಟಕಿಯಾಡಿದರು.
ರಾಜ್ಯದ ಉಪ ಚುನಾವಣೆಯಲ್ಲಿ ಜನರು ಕಮಲದ ಚಿಹ್ನೆಯನ್ನು ಒತ್ತುವ ಮೂಲಕ ಕಾಂಗ್ರೆಸ್ ಹಾಗೂ ಜೆಡಿಎಸ್ ಗೆ ತಕ್ಕ ಉತ್ತರ ನೀಡಿದ್ದಾರೆ. ಜನಾದೇಶದ ವಿರುದ್ದ ಯಾರಾದರೂ ಹೋದರೆ, ಶಿಕ್ಷಿಸಲು ಜನರಿಗೆ ಸಿಗುವ ಮೊದಲ ಅವಕಾಶವನ್ನು ಖಂಡಿತ ಬಳಸಿಕೊಳ್ಳುತ್ತಾರೆ ಎಂಬುದನ್ನು ಕರ್ನಾಟಕದ ಮತದಾರರು ತೋರಿಸಿಕೊಟ್ಟಿದ್ದಾರೆ. ಕಾಂಗ್ರೆಸ್ ಎಂದೂ ಮೈತ್ರಿ ಧರ್ಮ ಪಾಲಿಸಿಲ್ಲ, ಮೈತ್ರಿ ಪಕ್ಷಗಳನ್ನು ತನ್ನ ಅಗತ್ಯಗಳಿಗೆ ತಕ್ಕಂತೆ ಬಳಸುವ ಪರಿಪಾಠ ಕಾಂಗ್ರೆಸ್ ನದು ಎಂದು ಮೋದಿ ಆರೋಪಿಸಿದರು.